ಕನಕಪುರ: ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಲಾಟರಿ ಮೂಲಕ ಹಣ ಗಳಿಸಲು ಶಾಲೆಯ ಮಕ್ಕಳನ್ನು ಬಳಸಿಕೊಂಡಿರುವ ಸಂತ ರೀಟಾ ಖಾಸಗಿ ಶಾಲೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿ ಶೀಲನೆ ನಡೆಸಿ ಪ್ರಕರಣದ ಸಂಬಂಧ ಮೇಲಧಿಕಾರಿ ಗಳಿಂದ ಕಾರಣ ಕೇಳಿ ನೋಟಿಸ್ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶಾಲೆಯ ನೂರಾರು ವಿದ್ಯಾರ್ಥಿಗಳನ್ನು ಲಾಟರಿ ಲಕ್ಕಿ ಡ್ರಾ ಟಿಕೆಟ್ ಮಾರಾಟ ಮಾಡಲು ಬಳಸಿ ಕೊಂಡು ಆ ಮೂಲಕ ಸ್ಥಗಿತಗೊಂಡಿದ್ದ ಕಟ್ಟಡವನ್ನು ಪೂರ್ಣಗೊಳಿಸಲು ಹಣ ಸಂಗ್ರಹ ಮಾಡಲು ಸಂತ ರೀಟಾ ಶಿಕ್ಷಣ ಸಂಸ್ಥೆ ಮುಂದಾಗಿತ್ತು.
ನೂರಾರು ವಿದ್ಯಾರ್ಥಿಗಳು ಲಕ್ಕಿ ಡ್ರಾ ಲಾಟರಿ ಟಿಕೆಟ್ ಹಿಡಿದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಉದಯವಾಣಿ ಪತ್ರಿಕೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಪತ್ರಿಕೆ ನೀಡಿದ ಮಾಹಿತಿ ಮೇರೆಗೆ ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ರುದ್ರಮುನಿ ಸ್ಥಳಕ್ಕೆ ಭೇಟಿ ನೀಡಿ ಶಾಲೆ ರಜೆ ಇದ್ದ ಕಾರಣ ಘಟನೆ ಬಗ್ಗೆ ಶಾಲೆಯ ಮೇಲ್ವಿàಚಾರಕರಿಂದ ಮಾಹಿತಿ ಪಡೆದುಕೊಂಡರು. ಘಟನೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ನಗರದ ಎಸ್. ಕರಿಯಪ್ಪ ರಸ್ತೆಯಲ್ಲಿ ಶಿಕ್ಷಣ ಇಲಾಖೆ ಅನುದಾನದಲ್ಲಿ ನಡೆಯುತ್ತಿರುವ ಸಂತ ರೀಟಾ ಪ್ರೌಢಶಾಲೆಯಲ್ಲಿ ನೂರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆ ಲಕ್ಕಿ ಡ್ರಾ ಮೂಲಕ ಹಣ ಗಳಿಸಲು ಮುಂದಾಗಿ ಫೆ.14, 2023ರಂದು ಡ್ರಾ ದಿನಾಂಕ ನಿಗದಿ ಮಾಡಿ ಪ್ರಥಮ ಬಹುಮಾನವಾಗಿ ಫ್ಯಾಶನ್ ಸೈಕಲ್, ಎರಡನೇ ಬಹುಮಾನವಾಗಿ ಸ್ಕೇಟ್ ಸ್ಕೂಟರ್, ಮೂರನೇ ಬಹುಮಾನವಾಗಿ ಸ್ಮಾರ್ಟ್ ವಾಚ್ ಬಹುಮಾನವಾಗಿ ನೀಡುವುದಾಗಿ ಲಕ್ಕಿ ನ್ಯೂ ಹಿಯರ್ 2023 ಹೆಸರಿನಲ್ಲಿ ಲಾಟರಿ ಟಿಕೆಟ್ ಮುದ್ರಿಸಿ ನೂರಾರು ವಿದ್ಯಾರ್ಥಿಗಳ ಮೂಲಕ ಪ್ರತಿ ವಿದ್ಯಾರ್ಥಿಗಳಿಗೆ 50 ಲಕ್ಕಿ ಡ್ರಾ ಲಾಟರಿ ಟಿಕೆಟ್ ಗಳನ್ನು ಕೊಟ್ಟು 20 ರೂಪಾಯಿನಂತೆ ಸಾರ್ವಜನಿಕರಿಗೆ ಮಾರಾಟ ಮಾಡುವಂತೆ ಟಾರ್ಗೆಟ್ ನೀಡಿದ್ದಾರೆ ಎಂಬುದು ಟಿಕೆಟ್ ಖರೀದಿಸಿದ ಸಾರ್ವಜನಿಕರು ತಿಳಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಆದೇಶದಂತೆ ನೂರಾರು ಮಕ್ಕಳು ಸಹ ಸಿಕ್ಕ ಸಿಕ್ಕ ಸಾರ್ವಜನಿಕರಿಗೆ ಅಡ್ಡಗಟ್ಟಿ ಟಿಕೆಟ್ ನೀಡಿ 20 ರೂಪಾಯಿ ವಸೂಲಿ ಮಾಡಿದ್ದಾರೆ. 10,851 ಮತ್ತು 10,853 ಸಂಖ್ಯೆಯ ಲಕ್ಕಿ ಡ್ರಾ ಲಾಟರಿ ಟಿಕೆಟ್‌ಗಳನ್ನು ಸಾರ್ವಜನಿಕರು ಪತ್ರಿಕೆಗೆ ನೀಡಿ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ ಭವಿಷ್ಯದ ಮಕ್ಕಳನ್ನು ಮುಂದಿಟ್ಟುಕೊಂಡು ಲಕ್ಕಿ ಡ್ರಾ ನಡೆಸುವ ನೆಪದಲ್ಲಿ ಈ ರೀತಿ ಹಣ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಕಠಿಣ ಕಾನೂನು ಕ್ರಮ ಕೈಗೊಳ್ಳಿ: ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ವಿದ್ಯೆ ಕಲಿಯಲು ಬಂದ ಮಕ್ಕಳನ್ನು ಬಳಸಿಕೊಂಡು ಈ ರೀತಿ ತಮ್ಮ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಸಾರ್ವಜನಿಕರಿಂದ ಹಣ ವಸೂಲಿ ಮಾಡಿರುವುದು ಅಕ್ಷಮ್ಯ ಅಪರಾಧ ಶಿಕ್ಷಣ ಸಂಸ್ಥೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಜರಂಗದಳದ ಜಿಲ್ಲಾಧ್ಯಕ್ಷ ಕೋಟೆ ಕಿರಣ್ ಹಾಗೂ ಸಂಯೋಜಕ ಶ್ರೀಕಾಂತ್ ಪರಿಶೀಲನೆಗೆ ಭೇಟಿ ನೀಡಿದ್ದ ಅಧಿಕಾರಿಗಳನ್ನು ಒತ್ತಾಯಿಸಿದರು.