Advertisement

ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ

03:19 PM Sep 16, 2022 | Team Udayavani |

ಉಡುಪಿ: ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಹೆಚ್ಚು ದೂರು ಕೇಳಿಬರುತ್ತಿವೆ.

Advertisement

ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂ. ದಂಡ ವಸೂಲಿ ಮಾಡಿ ಬಿಸಿ ಮುಟ್ಟಿಸಿದರೂ ಅಕ್ರಮ ದಂಧೆಕೋರರ ಮೈಚಳಿ ಬಿಡುತ್ತಿಲ್ಲ. ಜಿಲ್ಲೆಯ ಕುಂದಾಪುರ, ಬ್ರಹ್ಮಾವರ, ಬೈಂದೂರು, ಕಾರ್ಕಳ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ಹೆಚ್ಚು ನಡೆಯುತ್ತಿರುವ ಬಗ್ಗೆ ಸ್ಥಳೀಯರಿಂದ ದೂರು ಕೇಳಿ ಬರುತ್ತಿದೆ.

ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಆಗಾಗ ದಾಳಿ ನಡೆಸಿ ಪ್ರಕರಣ ದಾಖಲಿಸಿದರೂ ಅಕ್ರಮ ಮದ್ಯ ಮಾರಾಟಕ್ಕೆ ಕೊನೆ ಇಲ್ಲದಂತಾಗಿದೆ ಎಂಬುದು ಗ್ರಾಮೀಣ ಭಾಗದ ಮಹಿಳೆಯರ ಅಳಲು. ಬೈಂದೂರು, ಬ್ರಹ್ಮಾವರ, ಕುಂದಾಪುರ, ಕಾರ್ಕಳ, ಹೆಬ್ರಿ ವ್ಯಾಪ್ತಿ ಕೆಲವು ಅರಣ್ಯ ದಂಚಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆಯಾ ಭಾಗದ ಸಾರ್ವಜನಿಕರು ದೂರುತ್ತಾರೆ.

ಅಕ್ರಮ ಮಾರಾಟ ಸ್ವರೂಪ ಹೇಗೆ ?

ಕೆಲವು ಗೂಡಂಗಡಿ, ಸಣ್ಣಪುಟ್ಟ ಮಾಂಸಾಹಾರಿ ಹೊಟೇಲ್‌ಗ‌ಳು, ಕೆಲವರು ಮನೆಗಳಲ್ಲಿ, ಅಂಗಡಿಗಳು ಮದ್ಯಮಾರಾಟ ಕೇಂದ್ರವಾಗಿದೆ. ಕೆಲವರು ಇದನ್ನು ನಕಲಿ ಮದ್ಯ ಎನ್ನುತ್ತಿದ್ದರೂ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ನಗರ, ಪಟ್ಟಣದ ವೈನ್‌ಶಾಪ್‌ ಗಳಿಂದ ಟೆಟ್ರಾ ಪ್ಯಾಕ್‌ಗಳನ್ನು ಬಲ್ಕ್ ನಲ್ಲಿ ಖರೀದಿಸಿ 10-20 ರೂ. ಹೆಚ್ಚುವರಿ ದರ ವಿಧಿಸಿ ಮಾರಾಟ ಮಾಡುತ್ತಾರೆ. ಇದರೊಂದಿಗೆ ಬಿಯರ್‌ ಟಿನ್‌ಗಳನ್ನು ಹೆಚ್ಚುವರಿ ದರದಲ್ಲಿ ಮಾರಾಟ ಮಾಡುತ್ತಾರೆ. ಕೆಲವರು ಮನೆಗಳಲ್ಲಿ ತೋಟ, ಕೊಟ್ಟಿಗೆ, ನೆಲದೊಳಗೆ ಹೊಂಡ ಮಾಡಿ, ಮನೆಯ ಅಟ್ಟ, ಶೌಚಗೃಹದಲ್ಲಿ ಅಕ್ರಮ ಮಾರಾಟಕ್ಕಾಗಿ ಮದ್ಯವನ್ನು ಶೇಖರಿಸಿಡುತ್ತಾರೆ. ಕೂಲಿ ಕಾರ್ಮಿಕರು, ಬಡವರ್ಗದ ಜನರೇ ಈ ದಂಧೆಯ ಟಾರ್ಗೆಟ್‌ ಎನ್ನುತ್ತವೆ ಅಬಕಾರಿ, ಪೊಲೀಸ್‌ ಇಲಾಖೆ ಮೂಲಗಳು.

Advertisement

ದಂಧೆಕೋರರಿಗೆ ಖಡಕ್‌ ಎಚ್ಚರಿಕೆ

ಹೊರ ಜಿಲ್ಲೆಗೆ ಹೋಲಿಸಿದಲ್ಲಿ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮದ್ಯಮಾರಾಟ ಪ್ರಮಾಣ ಕಡಿಮೆ ಇದೆ. ಇಲ್ಲಿ ಮದ್ಯದಂಗಡಿಗಳು ಕಿಲೋಮೀಟರ್‌ಗೆ ಒಂದು ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮಾರಾಟ ಕಡಿಮೆ. ಕುಂದಾಪುರ, ಬೈಂದೂರು, ಕಾರ್ಕಳದ ಗ್ರಾಮೀಣ ಭಾಗದಲ್ಲಿ ಕೆಲವು ಕಡೆಗಳಿಂದ ದೂರುಗಳು ಬರುತ್ತವೆ. ಅಕ್ರಮ ಮದ್ಯ ಮಾರಾಟವನ್ನು ಇಲಾಖೆ ಸಹಿಸಲು ಸಾಧ್ಯವಿಲ್ಲ. ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡು ಯಾವುದೇ ಮುಲಾಜಿಲ್ಲದೆ ರೈಡ್‌ ಮಾಡಲಾಗುತ್ತಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಜಿಲ್ಲೆಯ ಅಬಕಾರಿ ಇಲಾಖೆ ಕಂಟ್ರೋಲ್‌ ರೂಮ್‌ಗೆ 0820-2532732 ಸಂಪರ್ಕಿಸಿ ಅಬಕಾರಿ ನಿಯಮ ಉಲ್ಲಂಘಿಸುವ ಪ್ರಕರಣಗಳಿದ್ದಲ್ಲಿ ಮಾಹಿತಿ ನೀಡಬಹುದು.

ವಿಶೇಷ ತಂಡ ರಚನೆ: ಅಬಕಾರಿ ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುತ್ತಿದೆ. ವಿಶೇಷ ತಂಡವನ್ನು ರಚಿಸಿ ಈ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಮಾಹಿತಿ ಆಧರಿಸಿ ಗ್ರಾಮೀಣ ಭಾಗದ ಕೆಲವೆಡೆ ಆಗಾಗ ದಾಳಿ ಮಾಡಿ, ಪ್ರಕರಣ ದಾಖಲಿಸುತ್ತೇವೆ. ಸಾರ್ವಜನಿಕರು ಇಲಾಖೆಗೆ ಖಚಿತ ಮಾಹಿತಿ ಮೇರೆಗೆ ದೂರು ನೀಡಿದಲ್ಲಿ ತತ್‌ಕ್ಷಣ ಕ್ರಮಕೈಗೊಳ್ಳಲಾಗುವುದು. – ರೂಪಾ, ಅಬಕಾರಿ ಇಲಾಖೆ, ಉಪ ಆಯುಕ್ತರು, ಉಡುಪಿ ಜಿಲ್ಲೆ

 

Advertisement

Udayavani is now on Telegram. Click here to join our channel and stay updated with the latest news.

Next