Advertisement

ವಾರದೊಳಗೆ ಆ್ಯಂಬುಲೆನ್ಸ್‌ ಸಿಬ್ಬಂದಿಗೆ ವೇತನ; ಸಂಧಾನ ಸಭೆ ಯಶಸ್ವಿ

08:55 PM Oct 07, 2022 | Team Udayavani |

ಬೆಂಗಳೂರು: ಆರೋಗ್ಯ ಇಲಾಖೆ ಆಯುಕ್ತರು 108 ಆ್ಯಂಬುಲೆನ್ಸ್‌ ಸಿಬ್ಬಂದಿ ಹಾಗೂ ಜಿವಿಕೆ ನಡುವೆ ಶುಕ್ರವಾರ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ವಾರದೊಳಗೆ ವೇತನ ಕೊಡಿಸುವುದಾಗಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್‌ ಭರವಸೆ ಕೊಟ್ಟ ಬೆನ್ನಲ್ಲೇ ಕೆಲಸಕ್ಕೆ ಹಾಜರಾಗಲು ಆ್ಯಂಬುಲೆನ್ಸ್‌ನ ಆರೋಗ್ಯ ಸಿಬ್ಬಂದಿ ಮುಂದಾಗಿದ್ದಾರೆ.

Advertisement

ಆ್ಯಂಬುಲೆನ್ಸ್‌ ಸಿಬ್ಬಂದಿಗೆ 2 ತಿಂಗಳಿನಿಂದ ವೇತನ ನೀಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಆರೋಗ್ಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ 108 ಆ್ಯಂಬುಲೆನ್ಸ್‌ ನೌಕರರ ಸಂಘದ ಮುಖಂಡರು ಹಾಗೂ ಜಿವಿಕೆ ಸಂಸ್ಥೆಯ ಕೆಲ ಅಧಿಕಾರಿಗಳು ಪಾಲ್ಗೊಂಡಿದ್ದರು. ಸರ್ಕಾರದಿಂದ ಬಿಡುಗಡೆ ಮಾಡಲಾದ ಹಣವನ್ನು ಆ್ಯಂಬುಲೆನ್ಸ್‌ ನಿರ್ವಹಣೆಯಂತಹ ಕೆಲಸಕ್ಕೆ ಬಳಸಲಾಗಿದೆ. ಈ ಪೈಕಿ ಉಳಿಕೆಯಾದ 4 ಕೋಟಿ ರೂ. ಡಿಸೆಲ್‌ಗೆ ಬೇಕಾಗುತ್ತದೆ. ಸಿಬ್ಬಂದಿ ವೇತನಕ್ಕೆ ಇನ್ನೂ 12 ರಿಂದ 16 ಕೋಟಿ ರೂ. ಬೇಕಾಗುತ್ತದೆ ಎಂದು ಜಿವಿಕೆ ಸಂಸ್ಥೆಯ ಸಿಬ್ಬಂದಿ ವಿವರಿಸಿದರು.

ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ವಾರದೊಳಗೆ ವೇತನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಸಮಸ್ಯೆ ಪರಿಹರಿಸುವ ಆಶ್ವಾಸನೆ: ಸದ್ಯ ಕೆಲಸ ನಿರ್ವಹಿಸುತ್ತಿರುವ 35 ವರ್ಷ ಮೇಲ್ಪಟ್ಟ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕದಿರುವುದೂ ಸೇರಿ ಕೆಲ ಸಮಸ್ಯೆಗಳನ್ನು ಆಯುಕ್ತರಿಗೆ ಮನವರಿಕೆ ಮಾಡಿದ್ದೇವೆ. ನಮ್ಮ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಆಯುಕ್ತರು ಆಶ್ವಾಸನೆ ಕೊಟ್ಟಿದ್ದಾರೆ ಎಂದು 108 ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ “ಉದಯವಾಣಿ’ಗೆ ತಿಳಿಸಿದ್ದಾರೆ.

ಏನಿದು ಪ್ರಕರಣ ?
ಜಿವಿಕೆ ಕಂಪನಿಯಡಿ ಕೆಲಸ ಮಾಡುವ 108 ಆ್ಯಂಬುಲೆನ್ಸ್‌ ಸಿಬ್ಬಂದಿಗೆ 2 ತಿಂಗಳಿಂದ ಸಂಬಳ ಆಗಿಲ್ಲ. ಇದರಿಂದ ಆಕ್ರೋಶಗೊಂಡು ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು. ಇಲ್ಲದಿದ್ದರೆ ಸಾಮೂಹಿಕವಾಗಿ ಎಲ್ಲ ಸಿಬ್ಬಂದಿ ರಜೆ ಹಾಕಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next