Advertisement

ಸಿಗ್ನಲ್‌ ಜಂಪ್‌ ಮಾಡಿದರೆ ಸ್ಯಾಲರಿ ಕಟ್‌!

01:17 AM Sep 10, 2019 | Lakshmi GovindaRaju |

ಬೆಂಗಳೂರು: ಸಾರಿಗೆ ನಿಯಮಗಳ ಉಲ್ಲಂಘನೆಗೆ ವಿಧಿಸಿರುವ ಭಾರಿ ದಂಡ “ಪ್ರಯೋಗ’ವು ಅಕ್ಷರಶಃ ಬಿಎಂಟಿಸಿ ಬಸ್‌ ಚಾಲಕರ ನಿದ್ದೆಗೆಡಿಸಿದೆ. ಯಾಕೆಂದರೆ, ಒಂದು ಸಿಗ್ನಲ್‌ ಜಂಪ್‌ ಮಾಡಿದರೆ ಅಥವಾ ನಿಗದಿಪಡಿಸಿದ ಜಾಗದಿಂದ ಸ್ವಲ್ಪ ಆಚೀಚೆ ಬಸ್‌ ನಿಲ್ಲಿಸಿದರೂ ಇಡೀ ದಿನದ ವೇತನಕ್ಕೇ ಕತ್ತರಿ ಬೀಳಲಿದೆ!

Advertisement

ಒಂದೆಡೆ ಸಂಚಾರದಟ್ಟಣೆಯಲ್ಲಿ ನಿಗದಿಪಡಿಸಿದ ಟ್ರಿಪ್‌ಗ್ಳನ್ನು ಪೂರ್ಣಗೊಳಿಸುವ ಒತ್ತಡ, ಮತ್ತೂಂದೆಡೆ ಪ್ರತಿ ಪಾಳಿಗೆ ಹೆಚ್ಚು ಆದಾಯ ತರುವ ಗುರಿ. ಇವುಗಳನ್ನು ಪೂರೈಸುವ ಭರದಲ್ಲಿ ನಿಯಮ ಉಲ್ಲಂಘನೆಯಾದರೆ ದಿನದ ವೇತನವೇ ದಂಡದ ರೂಪದಲ್ಲಿ ಸಂಚಾರ ಪೊಲೀಸರ ಪಾಲಾಗುತ್ತದೆ. ಇವೆರಡನ್ನೂ ಸಮತೋಲನ ಮಾಡುವುದು ಬಿಎಂಟಿಸಿ ಚಾಲಕರಿಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ತಿದ್ದುಪಡಿ ನಿಯಮವು ಪರೋಕ್ಷವಾಗಿ ಅವರ ನೆಮ್ಮದಿ ಕದಡಿದೆ.

ಕೇಂದ್ರ ಸರ್ಕಾರವು ಆಗಸ್ಟ್‌ 9ರಂದು ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿ, ಅಧಿಸೂಚನೆ ಹೊರಡಿಸಿದೆ. ಅಲ್ಲಿಂದ ಇದುವರೆಗೆ ಸಾರಿಗೆ ನಿಯಮಗಳ ಉಲ್ಲಂಘನೆಗಳು ಕಡಿಮೆ ಆಗಿಲ್ಲ. ಸಂಚಾರ ಪೊಲೀಸರು ನೀಡಿದ ಮಾಹಿತಿ ಪ್ರಕಾರ ನಿತ್ಯ ಸರಾಸರಿ 40ರಿಂದ 50 ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತವೆ. ಆಗಸ್ಟ್‌ನಲ್ಲಿ 1,049 ಸಾರಿಗೆ ನಿಯಮಗಳ ಉಲ್ಲಂಘನೆಯಾಗಿದ್ದು, ಈ ಪೈಕಿ ಸಿಗ್ನಲ್‌ ಜಂಪ್‌ ಮತ್ತು ತಪ್ಪು ಜಾಗದಲ್ಲಿ ವಾಹನಗಳ ನಿಲುಗಡೆಗೆ ಸಂಬಂಧಿಸಿದ ಪ್ರಕರಣಗಳು ಕ್ರಮವಾಗಿ 359 ಹಾಗೂ 539 ಇವೆ.

ಈ ನಿಯಮಗಳ ಉಲ್ಲಂಘನೆಗೆ ಪ್ರಸ್ತುತ ದಂಡ ಪ್ರಮಾಣ ಕ್ರಮವಾಗಿ 500 ರೂ. ಹಾಗೂ 1,000 ರೂ. ಇದೆ. ಈ ಮೊದಲು ತಲಾ 100 ರೂ. ಇತ್ತು. ಅಂದರೆ, ಐದುಪಟ್ಟು ಹೆಚ್ಚಳವಾಗಿದೆ. ಅದೇ ರೀತಿ, ಬಸ್‌ ಚಾಲನೆ ವೇಳೆ ಮೊಬೈಲ್‌ ಬಳಕೆಗೆ ಸಾವಿರ ರೂ. ಹಾಗೂ ನೋ-ಎಂಟ್ರಿಯಲ್ಲಿ ವಾಹನ ನುಗ್ಗಿಸಿದರೆ 500 ರೂ. ದಂಡ ವಿಧಿಸಲಾಗುತ್ತಿದೆ. ಇದು ಕೂಡ ಈ ಮೊದಲು ತಲಾ 100 ರೂ. ಇತ್ತು. ಚಾಲಕರ ಮಾಸಿಕ ವೇತನ ಟ್ರೈನಿ ಆಗಿದ್ದರೆ, ಹತ್ತು ಸಾವಿರ ರೂ. ಹಾಗೂ ಎರಡು ವರ್ಷ ಪೂರ್ಣಗೊಳಿಸಿದರೆ, 23 ಸಾವಿರ ರೂ. ಆಗುತ್ತದೆ.

ಅಂದರೆ, ಒಂದು ದಿನಕ್ಕೆ ಸರಾಸರಿ ಕ್ರಮವಾಗಿ 330 ರೂ. ಹಾಗೂ 750 ರೂ. ಆಗುತ್ತದೆ. ಸಾರಿಗೆ ನಿಯಮಗಳ ಉಲ್ಲಂಘನೆಗಾಗಿ ಸಂಚಾರ ಪೊಲೀಸರು ವಿಧಿಸುವ ದಂಡವನ್ನು ಆಯಾ ಚಾಲಕರಿಂದಲೇ ವಸೂಲಿ ಮಾಡಿ, ಪ್ರತಿ ತಿಂಗಳು ಸಂಚಾರ ಪೊಲೀಸ್‌ ಆಯುಕ್ತರ ಕಚೇರಿಗೆ ಪಾವತಿಸಲಾಗುತ್ತದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

Advertisement

ಆದಾಯ ಪೈಪೋಟಿಗಾಗಿ ಉಲ್ಲಂಘನೆ: ಮಾರ್ಗಗಳ ಆಧಾರದ ಮೇಲೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಟ್ರಿಪ್‌ಗ್ಳ ಗುರಿ ನೀಡಲಾಗಿರುತ್ತದೆ. ಆ ಟ್ರಿಪ್‌ ಪೂರ್ಣಗೊಳಿಸಲು “ಪೀಕ್‌ ಅವರ್‌’ನಲ್ಲಿ ಹೆಚ್ಚು ಸಮಯ ನಿಗದಿಪಡಿಸಲಾಗಿರುತ್ತದೆ. ಜಿಪಿಎಸ್‌ ನೆರವಿನಿಂದ ನಿಯಂತ್ರಣ ಕೊಠಡಿಯಲ್ಲೇ ಕುಳಿತು ಅಧಿಕಾರಿಗಳು ಬಸ್‌ ಮೇಲೆ ನಿಗಾ ಇಟ್ಟಿರುತ್ತಾರೆ. ಟ್ರಿಪ್‌ ಪೂರೈಸಲು ಒತ್ತಡವೂ ಇಲ್ಲ.

ಆದರೆ, ಆದಾಯ ತಂದುಕೊಡುವಲ್ಲಿ ನಮ್ಮ ಸಹೋದ್ಯೋಗಿಗಳೊಂದಿಗೆ ಪೈಪೋಟಿ ಇರುತ್ತದೆ. ಇದರ ಭರಾಟೆಯಲ್ಲಿ ನಿಯಮಗಳ ಉಲ್ಲಂಘನೆ ಹೆಚ್ಚಾಗುತ್ತಿದೆ. ಆದಾಯದ ಗುರಿ ತಲುಪಿದರೆ, ಆ ಮೊತ್ತದ ಶೇ. 1.5ರಷ್ಟು ಪ್ರೋತ್ಸಾಹಧನ ಚಾಲಕರಿಗೆ ದೊರೆಯುತ್ತದೆ ಎಂದು ಜೆ.ಪಿ. ನಗರ-ದೊಮ್ಮಲೂರು ಮಾರ್ಗದ ಬಿಎಂಟಿಸಿ ಚಾಲಕರೊಬ್ಬರು ತಿಳಿಸುತ್ತಾರೆ. ಅದೇನೇ ಇದ್ದರೂ ಸಾರಿಗೆ ನಿಯಮಗಳು ಎಲ್ಲರಿಗೂ ಒಂದೇ. ಈ ನಿಯಮಗಳಿಗೆ ದುಬಾರಿ ದಂಡ ವಿಧಿಸಿರುವುದು ಒಂದು ರೀತಿ ಸ್ವಾಗತಾರ್ಹ ಎಂದೂ ಆ ಚಾಲಕರು ಹೇಳಿದರು.

ಸಾರಿಗೆ ನಿಯಮಕ್ಕೆ ತಿಂಗಳ ಹಿಂದೆ ತಿದ್ದುಪಡಿ ತಂದಿದ್ದರೂ, ರಾಜ್ಯದಲ್ಲಿ ಸೆಪ್ಟೆಂಬರ್‌ 3ರಿಂದ ಜಾರಿಗೆ ಬಂದಿದೆ. ಹಾಗಾಗಿ, ಇತ್ತೀಚೆಗೆ ಚಾಲಕರಿಗೆ ಈ ಬಗ್ಗೆ ಅರಿವು ಮೂಡುತ್ತಿದೆ. ಮುಂದಿನ ದಿನಗಳಲ್ಲಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಸಾಕಷ್ಟು ತಗ್ಗುವುದರಲ್ಲಿ ಅನುಮಾನವಿಲ್ಲ. ಅಷ್ಟಕ್ಕೂ ಸಂಸ್ಥೆಯಲ್ಲಿ 6,500 ಬಸ್‌ಗಳಿದ್ದು, ನಿತ್ಯ ಸಾವಿರಾರು ಟ್ರಿಪ್‌ಗ್ಳು ಹಾಗೂ ಲಕ್ಷಾಂತರ ಕಿ.ಮೀ. ಇವು ಕ್ರಮಿಸುತ್ತವೆ. ಇದಕ್ಕೆ ಹೋಲಿಸಿದರೆ, ನಿಯಮಗಳ ಉಲ್ಲಂಘನೆ ಪ್ರಕರಣಗಳು ಕಡಿಮೆಯೇ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ಬಸ್‌ಗಳಿಗೂ ದಂಡ ವಿಧಿಸಿ: ಭಾರಿ ದಂಡ ಪ್ರಯೋಗದ ನಂತರವೂ ಖಾಸಗಿ ಬಸ್ಸುಗಳು ಎಲ್ಲೆಂದರಲ್ಲಿ ನಿಲುಗಡೆ ಆಗುತ್ತಿವೆ. ಸಾರಿಗೆ ನಿಯಮಗಳ ಉಲ್ಲಂಘನೆ ನಿಂತಿಲ್ಲ. ಇವುಗಳ ವಿರುದ್ಧ ಸಂಚಾರ ಪೊಲೀಸರು ಪರಿಣಾಮಕಾರಿ ಕಾರ್ಯಾಚರಣೆ ನಡೆಸಬೇಕಿದೆ ಎಂದು ಬಿಎಂಟಿಸಿ ಚಾಲಕರೊಬ್ಬರು ಒತ್ತಾಯಿಸಿದ್ದಾರೆ.

ಬಿಎಂಟಿಸಿ ವಿರುದ್ಧ ಕಳೆದ ತಿಂಗಳು ದಾಖಲಾದ ಪ್ರಕರಣಗಳು
ಉಲ್ಲಂಘನೆ ಪ್ರಕರಣಗಳು
ಸಿಗ್ನಲ್‌ ಜಂಪ್‌ 359
ತಪ್ಪು ಜಾಗದಲ್ಲಿ ನಿಲುಗಡೆ 539
ನೋ-ಎಂಟ್ರಿ 34
ಚಾಲನೆ ವೇಳೆ ಮೊಬೈಲ್‌ ಬಳಕೆ 23
ಮಾರ್ಗ ಶಿಸ್ತು ಉಲ್ಲಂಘನೆ 49

ಗುರಿಗಿಂತ ಮನುಷ್ಯನ ಪ್ರಾಣ ಮುಖ್ಯ. ಹಾಗಾಗಿ, ಚಾಲಕರು ಸಾರಿಗೆ ನಿಯಮಗಳನ್ನು ಪಾಲಿಸಬೇಕು. ಯಾವುದೇ ಒತ್ತಡಕ್ಕೆ ಒಳಗಾಗುವ ಅವಶ್ಯಕತೆಯೇ ಇಲ್ಲ. ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜತೆಗೆ ಬಿಎಂಟಿಸಿಯಿಂದ ಕೂಡ ಮತ್ತೂಮ್ಮೆ ಸೂಚನೆ ನೀಡಲಾಗುವುದು.
-ಅನುಪಮ್‌ ಅಗರವಾಲ್‌, ಬಿಎಂಟಿಸಿ ನಿರ್ದೇಶಕರು (ಭದ್ರತೆ ಮತ್ತು ಜಾಗೃತ)

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next