Advertisement

108 ಸಿಬಂದಿಗೆ ವೇತನ ಬಾಕಿ! 16 ಕೋ.ರೂ. ಅನುದಾನ ಬಿಡುಗಡೆ ವಿಳಂಬ

01:02 AM Nov 11, 2024 | Team Udayavani |

ಉಡುಪಿ: ರಾಜ್ಯದಲ್ಲಿ 108 ಆರೋಗ್ಯ ಕವಚ ಸಿಬಂದಿಗೆ ಮೂರು ತಿಂಗಳುಗಳಿಂದ ವೇತನ ಪಾವತಿ ಆಗಿಲ್ಲ; ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬೀದಿಗೆ ಬೀಳುವ ಸ್ಥಿತಿಗೆ ತಲುಪಿದ್ದಾರೆ.

Advertisement

ರಾಜ್ಯದಲ್ಲಿ 740ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಇಎಂಟರ್‌ಐ ಗ್ರೀನ್‌ ಹೆಲ್ತ್‌ ಸರ್ವೀಸಸ್‌ ಸಂಸ್ಥೆಯಡಿ ಗುತ್ತಿಗೆ ಆಧಾರ ದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇವುಗಳಲ್ಲಿ 3,500ಕ್ಕೂ ಅಧಿಕ ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತೀ ಸಿಬಂದಿಗೆ ತಲಾ 12ರಿಂದ 16 ಸಾವಿರ ರೂ. ಬಾಕಿಯಿದೆ. ಸೆಪ್ಟಂಬರ್‌ ತಿಂಗಳಿನಿಂದ ವೇತನ ಬಾಕಿಯಾಗಿದ್ದು, ಸರಕಾರದಿಂದ ಅಂದಾಜು ಸಿಬಂದಿ ವೇತನ, ನಿರ್ವಹಣೆ ಸಹಿತ 16 ಕೋಟಿ ರೂ. ಹಣ ಬಿಡುಗಡೆಯಾಗಿಲ್ಲ ಎನ್ನಲಾಗುತ್ತಿದೆ. ಪರಿಣಾಮವಾಗಿ ಗುತ್ತಿಗೆ ಸಂಸ್ಥೆ ತನ್ನ ಅನೇಕ ಸಿಬಂದಿಗೆ ವೇತನ ಪಾವತಿ ಬಾಕಿ ಇರಿಸಿಕೊಂಡಿದ್ದು, ಸಂಕಷ್ಟಕ್ಕೆ ಒಳಗಾಗಿರುವ ಸಿಬಂದಿ ಕುಟುಂಬ ನಿರ್ವಹಣೆಗೆ ಹೆಣಗಾಡುತ್ತಿದ್ದಾರೆ.

ಮನೆ ಬಾಡಿಗೆ ಪಾವತಿಗೂ ಪರದಾಟ
ಆರೋಗ್ಯ ಕವಚದಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಚಾಲಕರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಅನೇಕ ಮನೆ ಮಾಲಕರು ಬಾಡಿಗೆ ಪಾವತಿಸದ ಕಾರಣ ಅವರನ್ನು ಮನೆ ಖಾಲಿ ಮಾಡಲು ಸೂಚಿಸಿದ್ದಾರೆ. ನಾವು ದುಡಿದ ಹಣ ಕೈ ಸೇರದೆ ನಾವಷ್ಟೇ ಅಲ್ಲ, ಕುಟುಂಬದವರೂ ನೋವು ಅನುಭವಿಸುವ ಸ್ಥಿತಿ ನಿರ್ಮಾಣವಾ
ಗಿದೆ ಎನ್ನುತ್ತಿದ್ದಾರೆ ನೊಂದ ಸಿಬಂದಿ.

ಅನ್ಯ ಕೆಲಸಕ್ಕೆ ಮೊರೆ
ಅನೇಕ ಸಿಬಂದಿ ಕೈ ತುಂಬ ಸಾಲ ಮಾಡಿಕೊಂಡಿದ್ದಾರೆ. ಕೆಲವರು ಮೀಟರ್‌ ಬಡ್ಡಿಗೆ ಹಣ ಪಡೆದುಕೊಂಡಿದ್ದು, ಕೈಗೆ ಸಿಗುವುದೆಲ್ಲ ಬಡ್ಡಿಗೆ ಸಂದಾಯ ಮಾಡುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ. ರಾತ್ರಿ ಪಾಳಿಯಲ್ಲಿ ಆ್ಯಂಬುಲೆನ್ಸ್‌ ಚಾಲಕರಾಗಿ ಕೆಲಸ ಮಾಡುವ ಕೆಲವರು ಹಗಲು ಹೊತ್ತಿನಲ್ಲಿ ಇತರ ಕೆಲಸಕ್ಕೆ ಹೋಗುತ್ತಿದ್ದಾರೆ. ಇದರಿಂದಾಗಿ ಸರಿಯಾದ ನಿದ್ರೆಯಿಲ್ಲದೆ ಆರೋಗ್ಯ ಹದಗೆಡುತ್ತಿರುವುದರ ಜತೆಗೆ ಆ್ಯಂಬುಲೆನ್ಸ್‌ ಚಾಲನೆ ಮಾಡಲು ಸಮಸ್ಯೆಯಾಗುತ್ತಿದೆ.

Advertisement

ಕತ್ತಲಿನಲ್ಲಿ ದೀಪಾವಳಿ ಕಳೆದರು
ದೀಪಾವಳಿ ಹಬ್ಬದ ವೇಳೆಗಾದರೂ ಬಾಕಿ ಸಂಬಳ ಬರಬಹುದೆಂದು ನಿರೀಕ್ಷೆಯಲ್ಲಿದ್ದ ಸಿಬಂದಿ ನಿರಾಶೆಗೊಳಗಾಗಿದ್ದರು. ದೀಪಾವಳಿಯನ್ನು ಕತ್ತಲೆಯಲ್ಲೇ ಕಳೆದಿದ್ದಾರೆ.

ಹಳೆ ಒಡಂಬಡಿಕೆಗೂ ಎಳ್ಳು-ನೀರು
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಆರೋಗ್ಯ ಕವಚ ಸಿಬಂದಿಗೆ ಕನಿಷ್ಠ ವೇತನ 35ರಿಂದ 36 ಸಾವಿರ ರೂ. ನೀಡುವಂತೆ ಸರಕಾರ ಮತ್ತು ಇಎಂಆರ್‌ಐ ಗ್ರೀನ್‌ ಹೆಲ್ತ್‌ ಸರ್ವಿಸಸ್‌ ಸಂಸ್ಥೆ ಮಧ್ಯೆ ಒಡಬಂಡಿಕೆ ಆಗಿತ್ತು. ಅದಕ್ಕೆ ಅನುಗುಣವಾಗಿ ಆರು ತಿಂಗಳ ವರೆಗೆ ಕನಿಷ್ಠ ವೇತನವಾಗಿ 35ರಿಂದ 36 ಸಾವಿರ ರೂ., ಅನಂತರದ 7 ತಿಂಗಳು 32 ಸಾವಿರ ರೂ. ಹಣ ಪಾವತಿಸಲಾಗಿತ್ತು. ಪ್ರತೀ ವರ್ಷ ವೇತನ ಹೆಚ್ಚಳಕ್ಕೂ ಒಪ್ಪಿಗೆ ಸೂಚಿಸಲಾಗಿತ್ತು. ಅನಂತರ ಸರಕಾರ ಹಿಂದಿನ ಒಡಂಬಡಿಕೆ ರದ್ದುಪಡಿಸಿದೆ ಎಂದು ಸಿಬಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕನಿಷ್ಠ ವೇತನವನ್ನು ಹೆಚ್ಚುವರಿ ವೇತನ ಎಂದು ಪರಿಗಣಿಸಿ, ಆ ಕಂತಿನ ಹೆಚ್ಚುವರಿ ವೇತನವನ್ನು ಕಡಿತಗೊಳಿಸಲಾಗಿದೆ ಎಂದು ಸಿಬಂದಿ ದೂರಿದ್ದಾರೆ.

ಸಂಬಳ ಬಾಕಿ
ಕೂಗಿಗೆ ಕೊನೆಯಿಲ್ಲ
ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಸೇವೆ ಯಾಗಿ 108 ಆ್ಯಂಬುಲೆನ್ಸ್‌ ಕಾರ್ಯನಿರ್ವ ಹಿಸುತ್ತಿದೆ. ಲಕ್ಷಾಂತರ ಮಂದಿಯ ಪ್ರಾಣ ರಕ್ಷಣೆಗಾಗಿ ತುರ್ತು ಸೇವೆಗೈಯುವ ಇವರ ಸೇವಾ ಅವಧಿಯ ಸವಲತ್ತುಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತ ಬಂದಿರುವುದು ಇಂದು- ನಿನ್ನೆಯಲ್ಲ. ಈ ಹಿಂದೆಯೂ ಹಲವು ಬಾರಿ ವೇತನ ಬಾಕಿ ಸಮಸ್ಯೆ ಸದ್ದು ಮಾಡಿದೆ.

ಸಂಸ್ಥೆಗೆ ಸರಕಾರದಿಂದ ಬರಬೇಕಾದ ಅನುದಾನ ದೊರಕುವಲ್ಲಿ ಕೊಂಚ ವಿಳಂಬವಾಗಿತ್ತು. ಈಗ ಅನುದಾನ ಖಜಾನೆಗೆ ಬಂದಿದೆ. ನಮ್ಮ ಸಂಸ್ಥೆಗೆ ಅನುದಾನ ಜಮಾವಣೆಯಾದ ತತ್‌ಕ್ಷಣ ಪಾವತಿಸುತ್ತೇವೆ.
-ಹನುಮಂತ,
ರಾಜ್ಯ ಮುಖ್ಯಸ್ಥ ಇಎಂಆರ್‌ ಗ್ರೀನ್‌ ಹೆಲ್ತ್ ಸರ್ವೀಸಸ್‌ ಸಂಸ್ಥೆ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next