Advertisement

ಸಲಾಂ ಮಂಗಳಾರತಿ ಕುರಿತು ಕೊಲ್ಲೂರು ದೇಗುಲದ ಸ್ಪಷ್ಟನೆಯಲ್ಲೇನಿದೆ?

12:04 PM Mar 30, 2022 | Team Udayavani |

ಕೊಲ್ಲೂರು ಮಾ. 29: ಕೊಲ್ಲೂರು ದೇಗುಲದ ಆಡಳಿತ ಮಂಡಳಿಯು ಸಲಾಂ ಮಂಗಳಾರತಿಯ ಬಗ್ಗೆ ಸ್ಪಷ್ಟನೆ ನೀಡಿದ್ದು, ದೇಗುಲದಲ್ಲಿ ಸಂಪ್ರದಾಯದಂತೆ ಪೂಜೆ ನಡೆಯುತ್ತಿದೆ. ಸಂಜೆ ಪ್ರದೋಷ ಪೂಜೆ ಹೊರತುಪಡಿಸಿ ಇನ್ನಿತರ ಯಾವುದೇ ಪೂಜೆ ನಡೆಯುತ್ತಿಲ್ಲ. ಸಂಜೆ ನಡೆಯುವ ಈ ಪ್ರದೋಷ ಪೂಜೆಯನ್ನು ಸ್ಥಳೀಯರು ಸಲಾಂ ಮಂಗಳಾರತಿ ಅನ್ನುತ್ತಾರೆ. ಆದರೆ ದೇಗುಲದಿಂದ ವ್ಯಕ್ತಿ ಪೂಜೆ ಮಾಡುತ್ತಿಲ್ಲ ಎಂದು ತಿಳಿಸಲಾಗಿದೆ.

Advertisement

ವಿಶ್ವ ಹಿಂದೂ ಪರಿಷತ್‌ ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿಗೆ ಪತ್ರ ಬರೆದು ಸಲಾಂ ಮಂಗಳಾರತಿ ಕೈ ಬಿಡುವಂತೆ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ಪತ್ರಿಕಾ ಹೇಳಿಕೆ ನೀಡಿ ಈ ವಿಚಾರವನ್ನು ಸ್ಪಷ್ಟಪಡಿಸಿದೆ.

ಸಲಾಂ ಮಂಗಳಾರತಿ ಇಲ್ಲ: ಸುಕುಮಾರ ಶೆಟ್ಟಿ
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಸಲಾಂ ಮಂಗಳಾರತಿಯ ಯಾವುದೇ ದಾಖಲೆ ಪುರಾವೆಗಳಿಲ್ಲ. ಇಲ್ಲಿ ನಡೆಯುತ್ತಿರುವ ಪ್ರದೋಷ ಪೂಜೆಯನ್ನು ಆ ಅರ್ಥದಲ್ಲಿ ಗ್ರಹಿಸಿರಬೇಕು. ದೇಗುಲದಲ್ಲಿ ಹಿಂದೂ ಧಾರ್ಮಿಕ ಪದ್ಧತಿಯ ಪ್ರಕಾರವೇ ಎಲ್ಲ ಪೂಜೆ ಪುನಸ್ಕಾರಗಳು ನಡೆಯುತ್ತಿವೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ.

ಉದಯವಾಣಿ ಪ್ರತಿನಿಧಿಯೊಡನೆ ಮಾತನಾಡಿದ ಶಾಸಕರು, ದೇಗುಲದ ಕಟ್ಟುಪಾಡುಗಳಿಗೆ ಅದರದೇ ಆದ ಮಹತ್ವವಿದೆ. ಧರ್ಮ ಪರಂಪರೆಯಂತೆ ಶ್ರದ್ಧಾ ಭಕ್ತಿಯಿಂದ ಅನುಷ್ಠಾನ ಗೊಳಿಸಲಾಗುತ್ತಿದೆ. ನಾನು ಶಾಸಕ ನಾಗುವ ಮೊದಲು ಕೊಲ್ಲೂರು ಕ್ಷೇತ್ರದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಾಗಿ ಸೇವೆ ಸಲ್ಲಿಸಿರುವ ಸಂದರ್ಭದಲ್ಲಿ ಸಲಾಂ ಮಂಗಳಾರತಿಯ ದಾಖಲೆ ಕಂಡುಬಂದಿಲ್ಲ. ಹಾಗಾಗಿ ರೂಢಿಯಲ್ಲಿರುವ ಪದಬಳಕೆಗೆ ಪ್ರಾಧಾನ್ಯ ಕೊಡುವ ಅಗತ್ಯವಿಲ್ಲ. ಪ್ರದೋಷ ಪೂಜೆ ಕೊಲ್ಲೂರು ಕ್ಷೇತ್ರದ ಪೂಜೆಗಳಲ್ಲಿ ಹೆಚ್ಚಿನ ಮಹತ್ವ ಪಡೆದಿದ್ದು, ಅದೇ ಹೆಸರನ್ನು ಬಳಸತಕ್ಕದ್ದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕೊಲ್ಲೂರು ದೇಗುಲ ಸನಾತನ ಧರ್ಮ ಸಂಸ್ಕೃತಿಯ ಪರಂಪರೆಯನ್ನು ಕಾಪಾಡಿಕೊಂಡು ಬಂದಿದೆ. ಇಲ್ಲಿ ಯಾವುದೇ ಲೋಪವಾಗದಂತೆ ಅರ್ಚಕರು ನಿಷ್ಠೆ ಹಾಗೂ ಭಕ್ತಿಯಿಂದ ದೈನಂದಿನ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಲಾಂ ಮಂಗಳಾರತಿ ಎಂಬ ಹೆಸರಿಗೆ ಮನ್ನಣೆ ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next