ದೇಶ ಕಾಯುವ ಸೈನಿಕರನ್ನು ಸೆಲೆಬ್ರೆಟಿಯಂತೆ ಕಾಣುವುದನ್ನು ನಮ್ಮ ಶಾಲೆ-ಕಾಲೇಜುಗಳಲ್ಲಿ ಮಕ್ಕಳಿಗೆ ಪಠ್ಯದಲ್ಲೇ ಬೋಧಿಸಬೇಕಿದೆ. ಅವರು ಗಣ್ಯರು ಎಂದು ತಿಳಿದುಕೊಳ್ಳಬೇಕಿದೆ. ಯಾವ ತ್ಯಾಗ, ದೇಶಪ್ರೇಮ ಇಲ್ಲದ ಎಸಿ ಕಾರಲ್ಲಿ ಹಾಯಾಗಿ ಸಂಚರಿಸುವ ರಾಜಕಾರಣಿ, ಸಿನೆಮಾ ನಟರನ್ನು ಕಾರ್ಯಕ್ರಮಗಳಿಗೆ ಕರೆಸಿ ಪಟಾಕಿ ಸಿಡಿಸಿ ಸ್ವಾಗತಿಸುವುದಕ್ಕಿಂತ ಪ್ರತಿ ರಾಜ್ಯೋತ್ಸವ ಹಾಗೂ ಇತರ ಸಮಾರಂಭಗಳಿಗೆ ಒಬ್ಬ ಸೈನಿಕರನ್ನು ಅತಿಥಿಯಾಗಿ ಕರೆಸಿ ಗೌರವಿಸಿ ಅವರ ಬಲವನ್ನು ಹೆಚ್ಚಿಸಬೇಕಾಗಿದೆ. ನನ್ನನ್ನು ಇಷ್ಟು ಗೌರವಿಸುವ ಈ ಜನರಿಗೆ ನಾನು ನನ್ನ ಜೀವವನ್ನೇ ಕೊಡಬೇಕು- ಎನ್ನುವ ಮನಸ್ಸಾಗುವುದು ಸೈನಿಕರಿಗೆ ಮಾತ್ರವೇ ಹೊರತು ರಾಜಕಾರಣಿಗಳಿಗಲ್ಲ. ರಾಜಕಾರಣಿಗಳು ಅಧಿಕಾರದ ಗದ್ದುಗೆ ಹಿಡಿದ ಮೇಲೆ ಜನರನ್ನು ಮರೆತುಬಿಡುತ್ತಾರೆ. ಸಿನೆಮಾ ನಟ ಏನು ಮಾಡಿದರೂ ಜನ ನೋಡುತ್ತಾರೆ, ಏನೇ ಅಂದರೂ ಚಪ್ಪಾಳೆ ಹೊಡೆಯುತ್ತಾರೆ! ಆದರೆ, ಸೈನಿಕರು ಈ ಯಾವ ಅಭಿಲಾಷೆಯೂ ಇಲ್ಲದೆ ದೇಶಕ್ಕಾಗಿ ದುಡಿಯುತ್ತಾರೆ.
ಫೆ. 14 ಗುರುವಾರ ಜೈಶ್ ಉಗ್ರನೋರ್ವ ನಡೆಸಿದ ಭಯೋತ್ಪಾದಕರ ದಾಳಿಯಲ್ಲಿ 40ಕ್ಕೂ ಹೆಚ್ಚು ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ. ಹಲವು ಯೋಧರು ಗಾಯಗೊಂಡಿದ್ದಾರೆ. ಸುಮಾರು 350 ಕೆಜಿ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಬಸ್ಸಿಗೆ ಢಿಕ್ಕಿ ಹೊಡೆಸುವ ಮೂಲಕ ಈ ಭೀಕರ ದಾಳಿ ನಡೆಯಿತು. “ದೇಶಕ್ಕಾಗಿ ನನ್ನ ಇನ್ನೊಬ್ಬ ಮಗನನ್ನು ತ್ಯಾಗ ಮಾಡಲು ಸಿದ್ಧªನಿದ್ದೇನೆ’- ಹೀಗೆಂದು ಪುಲ್ವಾಮದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ನಮ್ಮ ಯೋಧ ರತನ್ ಠಾಕೂರ್ ತಂದೆ ಹೇಳಿದರು.
ಸೈನಿಕರು ತಮ್ಮ ತಂದೆ-ತಾಯಿ, ಮಕ್ಕಳು, ಪತ್ನಿ ಕುಟುಂಬಸ್ಥರನ್ನು ಬಿಟ್ಟು ನಮ್ಮ ದೇಶವನ್ನು ಕಾಯಲು ಹೊರಡುತ್ತಾರೆ. ನಮ್ಮ ಯೋಧರು ನಮ್ಮ ದೇಶವನ್ನು ಹಗಲು-ರಾತ್ರಿ ಎನ್ನದೆ ಕಾಯುತ್ತಾರೆೆ. ಆದರೆ, ನಮ್ಮ ಯೋಧರನ್ನು ಕಾಯುವ ವ್ಯವಸ್ಥೆ ಬಹಳ ಕಡಿಮೆ. ಜೀವದ ಹಂಗು ತೊರೆದು ಹೋರಾಡುವ ಈ ನಮ್ಮ ಯೋಧರು ಬದುಕಿ ಬಂದ ಮೇಲೆ ತಾನು ಕಾಪಾಡಿದ ಈ ದೇಶದ ಜನ ತನಗೊಂದು ಗೌರವ ಕೊಡಲಿ, ಸನ್ಮಾನಿಸಲಿ, ತನ್ನ ಅನುಭವ ಕೇಳಲಿ, ಅದನ್ನು ಚಿತ್ರೀಕರಿಸಲಿ, ಧ್ವನಿ ಮುದ್ರಿಸಿಕೊಳ್ಳಲಿ ಅಂತ ಕಾಯುತ್ತಿರುತ್ತಾರೆಯೆ?
ಇನ್ನು ಮುಂದಾದರೂ ನಾವು ನಮ್ಮ ಯೋಧರನ್ನು ನಮ್ಮ ಕಾರ್ಯಕ್ರಮಗಳಿಗೆ ಕರೆಸಿಕೊಂಡು ಗೌರವಿಸೋಣ. ಅವರಿಗೆ ಗೌರವ-ಮಾನ್ಯತೆ ಕೊಡೋಣ. ದೇಶವನ್ನು ಕಾಯುವ ಸೈನ್ಯದಲ್ಲಿ ನಮ್ಮ ದೇಶದ ಬೇರೆ ಬೇರೆ ರಾಜ್ಯಗಳ ಸೈನಿಕರು ಇದ್ದಾರೆ. ನಮ್ಮ ಕರ್ನಾಟಕದಿಂದಲೂ ಹಲವಾರು ವೀರ ಯೋಧರು ಇದ್ದಾರೆ ಎನ್ನುವಾಗ ನಮಗೆ ಹೆಮ್ಮೆ ಎನಿಸುತ್ತದೆ. ದೇಶದ ರಕ್ಷಣೆಗೆ ಹೋರಾಡಿ ಯೋಧರು ಹುತಾತ್ಮರಾದರೆ ಅವರ ಮೃತ ದೇಹದ ಮೇಲೆ ರಾಷ್ಟ್ರದ ತ್ರಿವರ್ಣ ಧ್ವಜ ಹೊದಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ದೇಶ ಕಾಯುವ ನಮ್ಮ ಯೋಧರಿಗೆ ನನ್ನದೊಂದು ಸಲಾಮ್.
ಜಾಬಿರ್ ಮುಬಶ್ಶಿರ್ ಬಿ. ಎ.
ಪತ್ರಿಕೋದ್ಯಮ ವಿದ್ಯಾರ್ಥಿ, ಸಂತ ಫಿಲೋಮಿನ ಕಾಲೇಜು, ಪುತ್ತೂರು