“ದುನಿಯಾ’ ವಿಜಯ್ ಇದೇ ಮೊದಲ ಬಾರಿಗೆ “ಸಲಗ’ ಚಿತ್ರ ನಿರ್ದೇಶನ ಮಾಡುತ್ತಿರುವುದು ಗೊತ್ತೇ ಇದೆ. ಅವರ ಮೊದಲ ನಿರ್ದೇಶನದ ಚಿತ್ರ ಆಗಿರುವುದರಿಂದ ಎಲ್ಲರಿಗೂ ನಿರೀಕ್ಷೆ ಇದ್ದೇ ಇರುತ್ತೆ. ಮೊದಲ ಪೋಸ್ಟರ್ ಮೂಲಕವೇ ನಟ ಕಮ್ ನಿರ್ದೇಶಕ “ದುನಿಯಾ’ ವಿಜಯ್, ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ಈಗ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲು ವಿಜಯ್ ಮತ್ತು ಚಿತ್ರತಂಡ ನಿರ್ಧರಿಸಿದೆ.
ಹೌದು, ಡಿಸೆಂಬರ್ 18 ರಂದು “ಸಲಗ’ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗುತ್ತಿದೆ. ಈ ಕುರಿತು ಸ್ವತಃ “ದುನಿಯಾ’ ವಿಜಯ್ ಅವರೇ, ತಮ್ಮ ಮುಖಪುಟದಲ್ಲಿ ಬರೆದುಕೊಂಡಿದ್ದಾರೆ. ನಟನೆ ಜೊತೆಯಲ್ಲೂ ನಿರ್ದೇಶನಕ್ಕಿಳಿದಿರುವ “ದುನಿಯಾ’ ವಿಜಯ್, ತುಂಬ ಆಸಕ್ತಿ ಮತ್ತು ಶ್ರದ್ಧೆಯಿಂದ ಮಾಡಿರುವ “ಸಲಗ’ ಚಿತ್ರದಲ್ಲಿ “ಡಾಲಿ’ ಧನಂಜಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧನಂಜಯ್ ಹಾಗು ವಿಜಯ್‌ಗೂ ಇದು ಹೊಸ ಕಾಂಬಿನೇಷನ್.
ಹಾಗಾಗಿ ಇನ್ನಷ್ಟು ನಿರೀಕ್ಷೆಯೂ ಹೆಚ್ಚಿದೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಪಕ್ಕಾ ರೌಡಿಸಂ ಸಬ್ಜೆಕ್ಟ್. ಅದರಲ್ಲೂ ಇಡೀ ಚಿತ್ರ ಆ್ಯಕ್ಷನ್‌ಮಯವಾಗಿರುತ್ತೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಒಂದಷ್ಟು ಗೊತ್ತಿರದ ಅಂಶಗಳೂ ಇರಲಿವೆ ಎಂಬುದು ವಿಶೇಷ. ಪಕ್ಕಾ ಮಾಸ್ ಎಂಟರ್‌ಟೈನ್‌ಮೆಂಟ್ ಎನ್ನುವ ಚಿತ್ರತಂಡ, ಮಾಸ್ ಪ್ರಿಯರಿಗೆ ಹೇಳಿ ಮಾಡಿಸಿದ ಚಿತ್ರ ಎಂಬ ಗ್ಯಾರಂಟಿ ಕೊಡುತ್ತದೆ. ಈ ಚಿತ್ರವನ್ನು ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ.
“ಟಗರು’ ಬಳಿಕ ಶ್ರೀಕಾಂತ್ ಅವರು, ಈ ಚಿತ್ರ ನಿರ್ಮಿಸುತ್ತಿದ್ದು, ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಿಸಿದ್ದಾರೆ. “ಟಗರು’ ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್ ರಾಜ್ ಅವರೇ “ಸಲಗ’ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ಡಿ.18 ರಂದು ಬಿಡುಗಡೆಯಾಗಲಿರುವ ಮೇಕಿಂಗ್ ವಿಡಿಯೋ ಮೂಲಕ ಹೊಸದೊಂದು ಛಾಪು ಮೂಡಿಸುವ ನಿರೀಕ್ಷೆ ಚಿತ್ರತಂಡಕ್ಕಿದೆ. ಅಂದಹಾಗೆ, ಈ ಚಿತ್ರಕ್ಕೆ ಸಂಜನಾ ನಾಯಕಿಯಾಗಿದ್ದಾರೆ. ಈ ಹಿಂದೆ ಸಂಜನಾ ಅವರು “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದಲ್ಲಿ ನಟಿಸಿದ್ದರು.
ದೊಡ್ಡ ಮೊತ್ತಕ್ಕೆ ಆಡಿಯೋ ಖರೀದಿ: “ಸಲಗ’ ಚಿತ್ರದ ಆಡಿಯೋ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ ಎಂಬುದು ಇನ್ನೊಂದು ವಿಶೇಷ. ಈ ಚಿತ್ರಕ್ಕೆ “ಟಗರು’ ಖ್ಯಾತಿಯ ಚರಣ್‌ರಾಜ್ ಸಂಗೀತ ನೀಡಿದ್ದಾರೆ. ಎ2 ಆಡಿಯೋ ಕಂಪೆನಿಗೆ ಚಿತ್ರದ ಹಾಡುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿವೆ. ಆದರೆ, ಆ ಮೊತ್ತ ಎಷ್ಟು ಎಂಬುದನ್ನು ಚಿತ್ರತಂಡ ಮಾತ್ರ ಹೇಳಿಕೊಂಡಿಲ್ಲ. ಎ2 ಹೆಸರಲ್ಲಿ ಹೊಸ ಆಡಿಯೋ ಕಂಪೆನಿ ಶುರು ಮಾಡಿರುವುದು ಬೇರಾರು ಅಲ್ಲ, “ಜೋಗಿ’ ನಿರ್ಮಾಪಕ ಕೃಷ್ಣ ಪ್ರಸಾದ್.
ಅಶ್ವಿನಿ ಆಡಿಯೋದ ಕೃಷ್ಣ ಪ್ರಸಾದ್ ಅವರು ಈಗ “ಸಲಗ’ ಚಿತ್ರದ ಮೂಲಕ ಪುನಃ ಹಿಂದಿರುಗಿದ್ದಾರೆ. ಅಶ್ವಿನಿ ಆಡಿಯೋ ಕಂಪೆನಿ ಹೆಸರನ್ನು ಈಗ ಎ2 ಆಡಿಯೋ, ಎ2 ಎಂಟರ್‌ಟೈನ್‌ಮೆಂಟ್ ಹೆಸರಲ್ಲಿ ಮರು ನಾಮಕರಣ ಮಾಡಿಕೊಂಡು “ಸಲಗ’ ಚಿತ್ರದ ಆಡಿಯೋ ಖರೀದಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುವ ತಯಾರಿಯಲ್ಲಿರುವ ಚಿತ್ರತಂಡ, ಮೊದಲು ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿ, ನಂತರ ಆಡಿಯೋ ಬಿಡುಗಡೆ ಮಾಡಲಿದೆ.