ಹೈದರಾಬಾದ್/ಮುಂಬಯಿ: ಭಾರತದ ಸಿನಿರಂಗದಲ್ಲಿ ವರ್ಷಾಂತ್ಯಕ್ಕೆ ದೊಡ್ಡ ಸಿನಿಮಾಗಳು ರಿಲೀಸ್ ಆಗಲಿವೆ. ʼಡಂಕಿʼ, ಸಲಾರ್ʼ ರಿಲೀಸ್ ನಿಂದಾಗಿ ನಾರ್ತ್ – ಸೌತ್ ಬಾಕ್ಸ್ ಆಫೀಸ್ ದಂಗಲ್ ಗೆ ಕ್ಷಣಗಣನೆ ಆರಂಭವಾಗಿದೆ.
ಈಗಾಗಲೇ ಎರಡೂ ಸಿನಿಮಾಗಳ ಅಡ್ವಾನ್ಸ್ ಬುಕಿಂಗ್ ಆರಂಭಗೊಂಡಿದೆ. ಇದರಲ್ಲೂ ತೀವ್ರ ಪೈಪೋಟಿ ಉಂಟಾಗಿದೆ. ದಕ್ಷಿಣ ಭಾರತ ಮಾತ್ರವಲ್ಲದೆ ಪ್ರಭಾಸ್ ಅವರ ʼಸಲಾರ್ʼ ಉತ್ತರ ಭಾರತದಲ್ಲೂ ಭಾರೀ ಬೇಡಿಕೆ ಎದುರಾಗಿದೆ. ಮುಂಗಡವಾಗಿ 6 ಲಕ್ಷ ಟಿಕೆಟ್ ಮಾರಾಟವಾಗುವ ಮೂಲಕ 13.70 ಕೋಟಿಯ ಗಳಿಕೆಯನ್ನು ʼಸಲಾರ್ʼ ಗಳಿಸಿದೆ.
ಇನ್ನೊಂದೆಡೆ ಶಾರುಖ್ ಖಾನ್ ಅವರ ʼಡಂಕಿʼ ಸಿನಿಮಾದ ಟಿಕೆಟ್ ಗೂ ಭಾರೀ ಬೇಡಿಕೆಯಿದೆ. ಪ್ಯಾನ್ ಇಂಡಿಯಾ ರಿಲೀಸ್ ಅಲ್ಲದಿದ್ರು, ದಕ್ಷಿಣದ ಕೆಲವೆಡೆ ʼಡಂಕಿʼಯ ಟಿಕೆಟ್ ಗೆ ಬೇಡಿಕೆಯಿದೆ. ಆದರೆ ಇದೀಗ ʼಸಲಾರ್ʼ , ʼಡಂಕಿʼ ನಡುವೆ ಸ್ಕ್ರೀನಿಂಗ್ ವಿಚಾರದಲ್ಲಿ ಜಟಾಪಟಿ ಉಂಟಾಗಿದೆ ಎನ್ನಲಾಗಿದೆ.
ಉತ್ತರ ಭಾರತದಲ್ಲಿ ʼಸಲಾರ್ʼ ಸಿನಿಮಾಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಚೈನ್ಸ್ (ಪಿವಿಆರ್, ಐನಾಕ್ಸ್) ಗಳಲ್ಲಿ ʼಸಲಾರ್ʼ ಸಿನಿಮಾಕ್ಕೆ ಹೆಚ್ಚಿನ ಸ್ಕ್ರೀನ್ ಗಳನ್ನು ನೀಡದೆ ಬಹುತೇಕ ಸ್ಕ್ರೀನ್ಸ್ ಗಳನ್ನು ʼಡಂಕಿʼ ಸಿನಿಮಾಕ್ಕೆ ಮೀಸಲಿಟ್ಟಿದೆ. ಇದರಿಂದ ಹೊಂಬಾಳೆ ಫಿಲ್ಮ್ಸ್ ʼಸಲಾರ್ʼ ಸಿನಿಮಾವನ್ನು ದಕ್ಷಿಣದ ರಾಜ್ಯದಲ್ಲಿರುವ ಪಿವಿಆರ್, ಐನಾಕ್ಸ್ ಮತ್ತು ಮೀರಜ್ ಮಲ್ಟಿಪ್ಲೆಕ್ಸ್ ಗಳಲ್ಲಿ ರಿಲೀಸ್ ಮಾಡದಿರಲು ನಿರ್ಧರಿಸಿದೆ. ಈಗಾಗಲೇ ನಿಗದಿಗೊಳಿಸಿದ ಸ್ಕ್ರೀನ್ಸ್ ಗಳನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಮುಂಬಯಿ ಪಿವಿಆರ್, ಐನಾಕ್ಸ್ ನಲ್ಲಿ ʼಡಂಕಿʼ ಗೆ ಸಿನಿಮಾಕ್ಕೆ ಎಲ್ಲ ಶೋ ಟೈಮ್ ಗಳನ್ನು ನೀಡಲಾಗಿದೆ. ಆದರೆ ʼಸಲಾರ್ʼ ಗೆ ಯಾವುದೇ ಸ್ಲಾಟ್ ನ್ನು ನೀಡಿಲ್ಲ ಎನ್ನಲಾಗಿದೆ. ಈ ಕಾರಣದಿಂದ ʼಸಲಾರ್ʼ ಸಿನಿಮಾವನ್ನು ದಕ್ಷಿಣದ ಪ್ರಮುಖ ಮಲ್ಟಿಪ್ಲೆಕ್ಸ್ ಗಳಲ್ಲಿ ರಿಲೀಸ್ ಮಾಡದಿರಲು ನಿರ್ಧರಿಸಿದೆ ಎನ್ನಲಾಗಿದೆ. ಇದರ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿದರೆ ಮಾತ್ರ ʼಸಲಾರ್ʼ ದಕ್ಷಿಣದ ಪ್ರಮುಖ ಮಲ್ಟಿಪ್ಲೆಕ್ಸ್ ನಲ್ಲಿ ರಿಲೀಸ್ ಆಗಬಹುದೆಂದು ವರದಿ ತಿಳಿಸಿದೆ.
ಹೊಂಬಾಳೆ ಪ್ರೊಡಕ್ಷನ್ಸ್, ಶಾರುಖ್ ಅವರ ರೆಡ್ ಚಿಲ್ಲಿಸ್ ಮತ್ತು ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿಂಗಲ್ ಸ್ಕ್ರೀನ್‌ಗಳು ಕಳೆದ ವಾರದಲ್ಲಿ ಪರಸ್ಪರ ಮಾತುಕತೆ ನಡೆಸಿದ್ದರು. ʼಸಲಾರ್ʼ ನಿರ್ಮಾಪಕರು ಶಾರುಖ್ ಅವರನ್ನು ಭೇಟಿಯಾಗಿ, ಎರಡೂ ಸಿನಿಮಾಗಳು 50-50 ಸ್ಕ್ರೀನಿಂಗ್ ಹಕ್ಕುಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಒಮ್ಮತದ ಒಪ್ಪಂದವನ್ನು ಮಾಡಿಕೊಂಡಿದ್ದರು. ಆದರೆ ಆ ಒಪ್ಪಂದ ಪಾಲನೆಯಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.