ಹೈದರಾಬಾದ್: ಪ್ರಶಾಂತ್ ನೀಲ್ ನಿರ್ದೇಶನದ ʼಸಲಾರ್ʼ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಆಗಿದೆ. 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಿದೆ.
ಡಾರ್ಲಿಂಗ್ ಪ್ರಭಾಸ್ ಅವರಿಗೆ ʼಬಾಹುಬಲಿʼ ಬಳಿಕ ʼಸಲಾರ್ʼ ಹಿಟ್ ತಂದುಕೊಟ್ಟಿದೆ. ಕಳೆದ ವರ್ಷ ಡಿ.22 ರಂದು ತೆರೆಕಂಡ ಸಿನಿಮಾ ಈಗಲೂ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆಗಿ ಒಂದು ತಿಂಗಳು ಕಳೆಯುತ್ತಾ ಬರುತ್ತಿದ್ದಂತೆ ಸಿನಿಮಾದ ಓಟಿಟಿ ಸ್ಟ್ರೀಮ್ ಬಗ್ಗೆ ಚರ್ಚೆ ಆರಂಭವಾಗಿದೆ.
ʼಸಲಾರ್ʼ ಓಟಿಟಿ ರೈಟ್ಸ್ ನ್ನು ನೆಟ್‌ಫ್ಲಿಕ್ಸ್ ಸುಮಾರು 160 ಕೋಟಿ ರೂಪಾಯಿಗಳ ದಾಖಲೆ ಬೆಲೆಗೆ ಪಡೆದುಕೊಂಡಿದೆ. ಶೀಘ್ರದಲ್ಲಿ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ ಎಂದು ನೆಟ್ ಫ್ಲಿಕ್ಸ್ ಹೇಳಿದೆ. ನೆಟ್‌ಫ್ಲಿಕ್ಸ್ ಹಿಂದಿಯ ಆವೃತ್ತಿಯ ಹಕ್ಕುಗಳನ್ನು ಸಹ ಪಡೆದುಕೊಂಡಿದೆ ಎನ್ನಲಾಗಿದ್ದು, ಆದರೆ ಅದರ ಸ್ಟ್ರೀಮಿಂಗ್ ವಿಳಂಬಗೊಳ್ಳುತ್ತದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಗಣರಾಜ್ಯೋತ್ಸವ ದಿನದಂದು ʼಸಲಾರ್ʼ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.
ಸಿನಿಮಾದಲ್ಲಿ ಪ್ರಭಾಸ್ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ತಿನ್ನು ಆನಂದ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತು ಬಾಬಿ ಸಿಂಹ ಮುಂತಾದವರು ನಟಿಸಿದ್ದಾರೆ.