ಒಂದು ಸಿನಿಮಾ ಅಂದ್ರೆ ಅಲ್ಲೊಂದಷ್ಟು ಭರ್ಜರಿ ಆ್ಯಕ್ಷನ್ ದೃಶ್ಯಗಳು, ಖಡಕ್ ಡೈಲಾಗ್ಸ್, ಹೀರೋಗೆ ಬಿಲ್ಡಪ್, ಹೀರೋಯಿನ್ ಗೆ ಗ್ಲಾಮರಸ್ ಲುಕ್, ನಡುವೆ ಬೇಕೋ, ಬೇಡವೂ ಮೂರು-ನಾಲ್ಕು ಸಾಂಗ್ಸ್ ಇದು ಬಹುತೇಕ ಕಮರ್ಷಿಯಲ್ ಸಿನಿಮಾಗಳ ಸಿದ್ಧಸೂತ್ರ. ಇಂಥ ಸಿದ್ಧಸೂತ್ರ ಸೂತ್ರಗಳನ್ನು ಬದಿಗಿಟ್ಟು ತೆರೆಗೆ ಬರುವ ಸಿನಿಮಾಗಳು ವಿರಳ. ಅಂಥ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾ ಈ ವಾರ ತೆರೆಗೆ ಬಂದಿರುವ “ಸಕುಟುಂಬ ಸಮೇತ’.
ಮೊದಲೇ ಹೇಳಿದಂತೆ, ಇಲ್ಲಿ ಮಾಮೂಲಿ ಕಮರ್ಷಿಯಲ್ ಸಿನಿಮಾಗಳಲ್ಲಿ ನೋಡುವ ಯಾವ ಅಂಶಗಳೂ ತೆರೆಮೇಲೆ ಕಾಣಲು ಸಿಗುವುದಿಲ್ಲ. ಹಾಗಂತ ಇಲ್ಲಿ ಮನರಂಜನೆ ಏನೂ ಕೊರತೆಯಿಲ್ಲ. ಸಿದ್ಧ ಸೂತ್ರಗಳನ್ನು ಬದಿಗಿಟ್ಟು ಸದ್ದುಗದ್ದಲವಿಲ್ಲದೆ ತಣ್ಣಗೆ ಕುಳಿತ ಪ್ರೇಕ್ಷಕರನ್ನು ನಿಧಾನವಾಗಿ ಆವರಿಸಿಕೊಳ್ಳುವ ಕಥಾಹಂದರ, ಅದಕ್ಕೆ ಜೀವ ತುಂಬುವ ಪಾತ್ರಗಳು ಮತ್ತು ನಿರೂಪಣೆ ಇಡೀ ಸಿನಿಮಾದ ಹೈಲೈಟ್ಸ್.
30 ವರ್ಷ ದಾಟಿದ ಮಧ್ಯಮ ವರ್ಗದ ಒಬ್ಬ ಹುಡುಗ ಮತ್ತು ಮೇಲು ಮಧ್ಯಮ ವರ್ಗದ ಹುಡುಗಿಯ ಮದುವೆ ಮಾತುಕತೆಯಿಂದ ಶುರುವಾಗುವ ಸಿನಿಮಾದ ಸರಳವಾದ ಕಥೆ, ಮುಂದೆ ಹೋಗುತ್ತಾ ಒಂದೊಂದೆ ಪಾತ್ರಗಳು ಮತ್ತು ಸನ್ನಿವೇಶಗಳ ಮೂಲಕ ಕೌಟುಂಬಿಕ ಸಂಬಂಧಗಳು, ಭಾವನೆಗಳು, ಬದುಕಿನ ಓಟ ಎಲ್ಲವನ್ನೂ ತೆರೆಮೇಲೆ ತೆರೆದಿಡುತ್ತ ಸಾಗುತ್ತದೆ. ನೋಡು ನೋಡುತ್ತಲೇ ಪ್ರೇಕ್ಷಕರ ಮನಸ್ಸಿನಲ್ಲಿ ಸಣ್ಣದೊಂದು ಪ್ರಶ್ನೆಯನ್ನು ಬಿಟ್ಟು ಸಿನಿಮಾ ಕ್ಲೈಮ್ಯಾಕ್ಸ್‌ಗೆ ಬಂದು ನಿಲ್ಲುತ್ತದೆ.
ಇದನ್ನೂ ಓದಿ:ನಟಿ Swathishta Krishnan ಬ್ಯೂಟಿಫುಲ್ ಫೋಟೋ ಗ್ಯಾಲರಿ
ಬೆರಳೆಣಿಯಷ್ಟು ಪಾತ್ರಗಳು, ಸೀಮಿತ ಲೊಕೇಶನ್, ಮನಮುಟ್ಟುವ ಮಾತುಗಳು ಎಲ್ಲವನ್ನೂ ಜೋಡಿಸಿ ಅಚ್ಚುಕಟ್ಟಾಗಿ “ಸಕುಟುಂಬ ಸಮೇತ’ರಾಗಿ ನೋಡುವಂತ ಸಿನಿಮಾವನ್ನು ತೆರೆಮೇಲೆ ತಂದಿರುವ ಚಿತ್ರತಂಡ ಪ್ರಯತ್ನ ಮೆಚ್ಚುವಂತಿದೆ.
ಸ್ವಲ್ಪ ಗಂಭೀರವೆನಿಸಿದರೂ, ಸಮಾಧಾನದಿಂದ ಕುಳಿತು ನೋಡುವವ ಮನಸ್ಸಿರುವ ಪ್ರೇಕ್ಷಕರಿಗೆ “ಸಕುಟುಂಬ ಸಮೇತ’ ಹೊಸಥರ ಯೋಚನೆಯೊಂದನ್ನು ಪ್ರೇಕ್ಷಕರ ಮುಂದಿಡುತ್ತದೆ. ಹಾಗಾಗಿ ಮಾಮೂಲಿ ಕಮರ್ಷಿಯಲ್ ಸಿನಿಮಾಗಳ ಹೊರತಾಗಿಯೂ ಹೊಸಥರದ, ಹೊಸ ಆಲೋಚನೆಯ ಸಿನಿಮಾಗಳನ್ನು ಆಸ್ವಧಿಸುವವರಿಗೆ “ಸಕುಟುಂಬ ಸಮೇತ’ ಇಷ್ಟವಾಗಬಹುದಾದ ಸಿನಿಮಾ ಎನ್ನಲು ಅಡ್ಡಿಯಿಲ್ಲ.
ಜಿ.ಎಸ್.ಕೆ