ಹೊಸದಿಲ್ಲಿ: ‘ಭಾರತದ ಅತ್ಯಂತ ಕಿರಿಯ ವಾಣಿಜ್ಯ ಪೈಲಟ್’ ಆಗಿ ಸಾಕ್ಷಿ ಕೊಚ್ಚರ್ ಅವರು ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ 19 ವರ್ಷ ವಯಸ್ಸಿನಲ್ಲೇ ಕಿರಿಯ ವಾಣಿಜ್ಯ ಪೈಲಟ್ ಆಗಿದ್ದ ಮೈತ್ರಿ ಪಟೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.
18 ನೇ ವಯಸ್ಸಿನಲ್ಲಿ ಪೂರ್ಣ ಪ್ರಮಾಣದ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಹರಾಗುತ್ತಾರೆ, ಹಿಮಾಚಲ ಪ್ರದೇಶದ ಪರ್ವಾನೂ ಎಂಬ ಸಣ್ಣ ಪಟ್ಟಣದ 18 ವರ್ಷದ ಸಾಕ್ಷಿ ಕೊಚ್ಚರ್ ಅವರು ಅತ್ಯಂತ ಕಿರಿಯ ಭಾರತೀಯ ವಾಣಿಜ್ಯ ಪೈಲಟ್ ಎಂಬ ದಾಖಲೆಯನ್ನು ಸ್ಥಾಪಿಸಿದ್ದಾರೆ. 18 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಂದೇ ವಾಣಿಜ್ಯ ಪೈಲಟ್ ಪರವಾನಗಿ ಪ್ರಮಾಣೀಕರಣವನ್ನು ನೀಡಲಾಗಿದೆ.
ನನಗೆ 18 ವರ್ಷ ತುಂಬಿದ ದಿನ, ನಾನು ವಾಣಿಜ್ಯ ಪೈಲಟ್‌ಗಾಗಿ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದೆ ಮತ್ತು ಅದೇ ದಿನ ನಾನು ಅದನ್ನು ಸ್ವೀಕರಿಸಿದ್ದೇನೆ ಎಂದು ಸಾಕ್ಷಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಸಣ್ಣ ಪಟ್ಟಣದಿಂದ ಬಂದ ಸಾಕ್ಷಿ ತರಬೇತಿಗಾಗಿ ಅಮೆರಿಕಕ್ಕೆ 8,500-ಮೈಲಿ ದೂರ ಪ್ರಯಾಣವನ್ನು ಕೈಗೊಂಡರು. ಇದೇ ಮೊದಲ ಬಾರಿಗೆ ತನ್ನ ಕುಟುಂಬದಿಂದ ದೂರ ವಾಸಿಸಿದರು. ಆರಂಭಿಕ ನಾಲ್ಕು ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಏವಿಯೇಷನ್ ಕ್ಲಬ್ ಯುಎಸ್ ಎ ನಲ್ಲಿರುವ ತರಬೇತಿ ಕೇಂದ್ರದಲ್ಲಿ ಸುಧಾರಿತ ಹಾರಾಟದ ತರಬೇತಿ ಪಡೆದರು. ತನ್ನ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ವಾಣಿಜ್ಯ ಪೈಲಟ್ ಲೈಸೆನ್ಸ್ (CPL) ತರಬೇತಿಗಾಗಿ ಮುಂಬೈನ ಸ್ಕೈಲೈನ್ ಏವಿಯೇಷನ್ ಕ್ಲಬ್‌ಗೆ ಸೇರಿದರು.
ವ್ಯಾಪಾರಸ್ಥರ ಕುಟುಂಬದಲ್ಲಿ ಜನಿಸಿದ ಸಾಕ್ಷಿ ಬಾಲ್ಯದಲ್ಲೇ ಪೈಲಟ್ ಆಗಬೇಕೆಂಬ ಮಹದಾಸೆ ಹೊತ್ತಿದ್ದರು. ಕೇವಲ ಒಂದೇ ಗುರಿ ಅಲ್ಲದೆ ಕಲೆ, ಸಾಹಿತ್ಯ ಸೇರಿ ಇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು. ಸಂಗೀತ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದ ಈಕೆ ಹಾರ್ಮೋನಿಯಂ ಬಾರಿಸುವಲ್ಲಿಯೂ ಪರಿಣತೆ. ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಗಮನ ಸೆಳೆದಿದ್ದರು.
ಕುಟುಂಬದ ಸಂಪೂರ್ಣ ಪ್ರೋತ್ಸಾಹ ದೊಡ್ಡ ಮಟ್ಟದ ತನ್ನ ಸಾಧನೆಗೆ ಪ್ರಮುಖ ಕಾರಣ, ನನ್ನ ಅಜ್ಜ, ಅಜ್ಜಿ, ತಂದೆ, ತಾಯಿ ಮತ್ತು ಅಣ್ಣ ನಿರಂತರವಾಗಿ ನನ್ನ ಮಹದಾಸೆ ಈಡೇರಿಸಲು ಪ್ರೋತ್ಸಾಹಿಸುತ್ತಲೇ ಇದ್ದರು. ನಾನೂ ಆ ನಿಟ್ಟಿನಲ್ಲಿ ಪ್ರಯತ್ನಶೀಲಳಾಗಿದ್ದೆ. ವೈಮಾನಿಕ ತರಬೇತಿ ಅತ್ಯಂತ ದುಬಾರಿ, ಸುಮಾರು 70 ಲಕ್ಷ ರೂ.ತರಬೇತಿಗಾಗಿ ವ್ಯಯಿಸಿದ್ದೇನೆ. ನನಗೆ ಉದ್ಯೋಗ ಸಿಕ್ಕ ಬಳಿಕ ಅದನ್ನು ಪೋಷಕರಿಗೆ ಹಿಂದಿರುಗಿಸುತ್ತೇನೆ ಎಂದು ಸಾಕ್ಷಿ ಹೇಳಿದ್ದಾರೆ.
ಚಂಡೀಗಢದಲ್ಲಿ SSC (12)ವ್ಯಾಸಂಗ ಮಾಡುತ್ತಿರುವಾಗಲೇ ದೊಡ್ಡ ಮಟ್ಟದ ಸಾಧನೆ ಮಾಡಿ ಸಾಕ್ಷಿ ಮಹಿಳಾ ಸಬಲೀಕರಣದ ದಾರಿಯಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದಾರೆ.ಈ ಹಿಂದೆ ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಾಧನೆ ಮಾಡಿದ ಮೈತ್ರಿ ಕೂಡ ಸೂರತ್ ಮೂಲದ ರೈತನ ಮಗಳು ಎನ್ನುವುದು ವಿಶೇಷ. ಯುವ ಸಾಧಕಿಯರು ಇನ್ನಷ್ಟು ಬಾಲಕಿಯರಿಗೆ ಪ್ರೇರಣೆಯಾಗಲಿ ಎನ್ನುವುದು ಆಶಯ.