Advertisement
ಕ್ಷೇತ್ರದಲ್ಲೆ ಬದುಕನ್ನು ಕಟ್ಟಿಕೊಂಡಿರುವ ಶಾಸಕರಿಗೆ ಕ್ಷೇತ್ರದ ಸಮಸ್ಯೆಗಳ ಕುರಿತು ಅರಿವಿದೆ. ದಿನನಿತ್ಯ ಜನಸಾಮಾನ್ಯರಿಂದ ಅಹುವಾಲುಗಳನ್ನು ಸ್ವೀಕರಿಸಿ ಸಣ್ಣಪುಟ್ಟ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಹುಡುಕಲು ಮುಂದಾಗುತ್ತಿದ್ದಾರೆ.
Related Articles
Advertisement
ಪಟ್ಟಣದ ಕಸ ವಿಲೇವಾರಿ ಸಮಸ್ಯೆ: ಪಟ್ಟಣ ವ್ಯಾಪ್ತಿಯ ಪುರಸಭೆಯ ಕಸ ವಿಲೇವಾರಿ ಸಮಸ್ಯೆಯನ್ನು ಹಿಂದಿನ ಶಾಸಕರು ಹಾಗೂ ಪುರಸಭೆ ಆಡಳಿತ ಬಗೆ ಹರಿಸುವಲ್ಲಿ ವಿಫಲವಾಗಿದೆ. ಎಲ್ಲಿ ಬೇಕೆಂದರಲ್ಲಿ ತಾತ್ಕಾಲಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿತ್ತು. ಅಲ್ಲದೆ ಕಸ ವಿಲೇವಾರಿ ಹೆಸರಿನಲ್ಲಿ ಪುರಸಭೆ ವತಿಯಿಂದ ಪ್ರತಿ ತಿಂಗಳು ಲಕ್ಷಾಂತಾರ ರೂ ಹಣ ವ್ಯಯಿಸುತ್ತಿದೆ. ಈ ಹಿನ್ನೆಲೆ ನೂತನ ಶಾಸಕರು ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಕೂಡಲೇ ಮುಂದಾಗಬೇಕಾಗಿದೆ.
ಶುದ್ಧ ಕುಡಿಯುವ ನೀರಿನ ಕೊರತೆ: ಎರಡು ದಶಕಗಳಿಂದ ಪುರಸಭೆಯಲ್ಲಿ ಜೆಡಿಎಸ್ ಶಾಸಕರು ಹಾಗೂ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಆಡಳಿತ ನಡೆಸಿದ್ದರೂ ಸಹ ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ನೀಡುವಲ್ಲಿ ಪುರಸಭಾ ಆಡಳಿತ ವರ್ಗ ಮುಂದಾಗದಿರುವುದು ಸಹ ಈ ಬಾರಿ ಚುನಾವಣೆಯಲ್ಲಿ ಮಾಜಿ ಶಾಸಕರ ವಿರುದ್ಧ ಪಟ್ಟಣದ ನಾಗರಿಕರು ಬೇಸರಗೊಳ್ಳಲು ಕಾರಣವಾಗಿತ್ತು. ಈ ಹಿನ್ನೆಲೆ ಪಟ್ಟಣ ದ ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಸಕರು ಮುಂದಾಗಬೇಕಾಗಿದೆ.
ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ: ತಾಲೂಕಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇದರಿಂದ ಜನಸಾಮಾನ್ಯರ ಕೆಲಸಗಳು ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ. ಕಂದಾಯ ಇಲಾಖೆ, ಸರ್ವೆ ಇಲಾಖೆ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಂತೂ ಭ್ರಷ್ಟಾಚಾರ ಮಿತಿ ಮೀರಿದೆ. ಈ ಹಿನ್ನೆಲೆ ನೂತನ ಶಾಸಕರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕಾಗಿದೆ.
ಮೂಲಭೂತ ಸೌಕರ್ಯ ಒದಗಿಸುವಿಕೆ: ಸಕಲೇಶಪುರ ಪಟ್ಟಣದಲ್ಲಿ ಯಾವುದೆ ರೀತಿಯಲ್ಲೂ ಸಹ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಪಟ್ಟಣದಲ್ಲಿ ಉದ್ಯಾನ ವನವಿಲ್ಲ. ಮಕ್ಕಳಿಗೆ ಆಟವಾಡಲು ಯಾವುದೇ ಸೌಲಭ್ಯವಿಲ್ಲ. ಒಳಾಂಗಣ ಕ್ರೀಡಾಂಗಣ ಹಾಗೂ ಈಜುಕೊಳಗಳು ಇನ್ನು ಕನಸಾಗಿಯೆ ಉಳಿದಿದೆ. ಪಟ್ಟಣದಲ್ಲಿ ಒಳ ಚರಂಡಿ ವ್ಯವಸ್ಥೆ ಸಹ ಇರುವುದಿಲ್ಲ. ಈ ಹಿನ್ನೆಲೆ ನೂತನ ಶಾಸಕರು ಇತ್ತ ಗಮನ ಹರಿಸಿ ಪಟ್ಟಣದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಬೇಕಾಗಿದೆ.
ಪ್ರವಾಸೋದ್ಯಮಕ್ಕಿಲ್ಲ ಆದ್ಯತೆ: ತಾಲೂಕಿನಲ್ಲಿ ಹಲವಾರು ಪ್ರವಾಸಿ ಕೇಂದ್ರಗಳಿದ್ದರು ಸಹ ಪ್ರವಾಸೋದ್ಯಮಕ್ಕೆ ಆದ್ಯತೆ ಇಲ್ಲದಂತಾಗಿದೆ. ಈ ಹಿನ್ನೆಲೆ ನೂತನ ಶಾಸಕರು ಇತ್ತ ಗಮನವರಿಸಿ ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಉದ್ಯೋಗ ಸೃಷ್ಟಿಸಬೇಕಿದೆ: ತಾಲೂಕಿನಲ್ಲಿ ಯಾವುದೆ ಕೈಗಾರಿಕೆಗಳಿಲ್ಲದ ಕಾರಣ ಉದ್ಯೋಗಗಳು ತಾಲೂಕಿನಲ್ಲಿ ಸೃಷ್ಟಿಯಾಗುತ್ತಿಲ್ಲ. ಇದರಿಂದಾಗಿ ಬಹುತೇಕ ಯುವ ಜನಾಂಗ ಉದ್ಯೋಗ ಅವಕಾಶಗಳನ್ನು ಹುಡುಕಿಕೊಂಡು ಹೊರ ಊರುಗಳಿಗೆ ಹೋಗಬೇಕಾಗಿದೆ. ಈ ಹಿನ್ನೆಲೆ ಉದ್ಯೋಗಗಳ ಸೃಷ್ಟಿಗೆ ನೂತನ ಶಾಸಕರು ಆದ್ಯತೆ ಕೊಡಬೇಕಾಗಿದೆ.
ಶಿಕ್ಷಣಕ್ಕಿಲ್ಲ ಆದ್ಯತೆ: ತಾಲೂಕಿನಲ್ಲಿ ಹಲವು ಶಾಲಾ ಕಾಲೇಜುಗಳಿದ್ದು ಆದರೆ ಹೆಸರಾಂತ ಶಿಕ್ಷಣ ಕೇಂದ್ರಗಳು ಒಂದು ಇರುವುದಿಲ್ಲ. ಈ ಹಿನ್ನೆಲೆ ನೂತನ ಶಿಕ್ಷಕರು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಆದ್ಯತೆ ನೀಡಬೇಕಾಗಿದೆ. ಜಿಲ್ಲಾ ಕೇಂದ್ರ ಹಾಸನಕ್ಕೆ ದಿನನಿತ್ಯ ಸಾವಿರಾರು ವಿದ್ಯಾರ್ಥಿ ಗಳು ವಿವಿಧ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಹೋಗುತ್ತಿದ್ದು ಕೂಡಲೇ ತಾಲೂಕಿನಲ್ಲಿ ಶಿಕ್ಷಣ ಕೇಂದ್ರಗಳನ್ನು ತೆರೆಯುವ ಮುಖಾಂತರ ಜನಸಾಮಾನ್ಯರ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.
ಆರೋಗ್ಯ ಕ್ಷೇತ್ರ ಸುಧಾರಿಸಬೇಕು: ತಾಲೂಕಿನ ರೋಗಿಗಳಿಗಾಗಿ ಏಕೈಕ ದೊಡ್ಡ ಆಸ್ಪತ್ರೆ ಪಟ್ಟಣದಲ್ಲಿದ್ದು ಇಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಹೆಚ್ಚಿನ ವೈದ್ಯರನ್ನು ತರಬೇಕಾದ ಹೊಣೆ ಶಾಸಕರ ಮೇಲಿದೆ. ಅಲ್ಲದೇ ಆಸ್ಪತ್ರೆಯಲ್ಲಿ ಕೊರತೆಯಿರುವ ಸ್ಕ್ಯಾನಿಂಗ್ , ಕುಡಿಯುವ ನೀರು, ಯುಪಿಎಸ್ ಸಮಸ್ಯೆ ಬಗೆಹರಿಸಲು ಶಾಸಕರು ಮುಂದಾಗಬೇಕಾಗಿದೆ.
ನಿರ್ಗತಿಕರಿಗೆ ನಿವೇಶನ ಹಂಚಿಕೆ: ಕಳೆದ 15 ವರ್ಷಗಳಿಂದ ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಯಾಗಿರುವುದಿಲ್ಲ. ಕೊಲ್ಲಹಳ್ಳಿ ಗ್ರಾಮ ಸೇರಿ ದಂತೆ ಹಲವಡೆ ಜನರು ನಿವೇಶನಕ್ಕಾಗಿ ಹೋರಾಟ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿವೇಶನಗಳನ್ನು ಹಂಚಲು ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಮುಂದಾಗುತ್ತೇನೆ. ಜನ ನನ್ನ ಮೇಲೆ ನಂಬಿಕೆ ಇಟ್ಟು ಸಾಮಾನ್ಯ ಕಾರ್ಯಕರ್ತನ ಪರ ಮತದಾನ ಮಾಡಿದ್ದಾರೆ. ಈ ಹಿನ್ನೆಲೆ ನದಲ್ಲಿ ಕನಿಷ್ಠ 15 ಗಂಟೆಗಳನ್ನು ಜನಸೇವೆಗಾಗಿ ಮೀಸಲಿಡುತ್ತೇನೆ. – ಸಿಮೆಂಟ್ ಮಂಜು, ಶಾಸಕರು
ನೂತನ ಶಾಸಕರಿಗೆ ಸಮಸ್ಯೆಗಳನ್ನು ಬಗೆಹರಿಸಲು ಕಾಲವಕಾಶ ಕೊಡುತ್ತೇವೆ. ಸಮಸ್ಯೆಗಳನ್ನು ಬಗೆಹರಿಸಲು ನಾವು ಸಹ ಅವರೊಂದಿಗೆ ಕೈಜೋಡಿಸುತ್ತೇವೆ. ಸಮಸ್ಯೆಗಳು ಬಗೆಹರಿಯದಿದ್ದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹೋರಾಟಗಳನ್ನು ಮಾಡಲಾಗುವುದು. – ಕವನ್ ಗೌಡ, ಜೆಡಿಎಸ್ ಮುಖಂಡರು
– ಸುಧೀರ್ ಎಸ್.ಎಲ್