Advertisement
ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಿರಿದಾಗಿರುವ ಕಾರಣ ದಿನನಿತ್ಯ ಟ್ರಾಫಿಕ್ ಕಿರಿಕಿರಿ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯರಸ್ತೆ ಅಗಲೀಕರಣ ಮಾಡ ಬೇಕೆಂಬ ಒತ್ತಾಯ ಕಳೆದ ಎರಡು ದಶಕಗಳಿಂದ ಕೇಳಿ ಬರುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಿಲ್ಲ. ನಿತ್ಯ ಭಾರೀ ಗಾತ್ರದ ವಾಹನಗಳು, ಟ್ಯಾಂಕರ್ ಗಳು ಸೇರಿ 8000ಕ್ಕೂ ಹೆಚ್ಚು ವಾಹನಗಳು ಓಡಾಡುತ್ತವೆ. ಹೀಗಾಗಿ ರಸ್ತೆ ಬದಿ ವಾಹನ ನಿಲುಗಡೆ ನಿಷೇಧ ಹೇರಿದ್ದು, ವರ್ತಕರು, ವ್ಯಾಪಾರಿಗಳು ಕಂಗಾಲಾಗಿದ್ದಾರೆ.
Related Articles
Advertisement
ಶುದ್ಧ ಕುಡಿಯುವ ನೀರು ಮರೀಚಿಕೆ: ಎತ್ತಿನಹೊಳೆ ಯೋಜನೆಯಡಿ 12 ಕೋಟಿ ರೂ.ನಲ್ಲಿ ಶುದ್ಧ ಕುಡಿ ಯುವ ನೀರಿನ ಯೋಜನೆ ರೂಪಿಸಲಾಗಿದೆ ಎಂದು ಶಾಸಕರು ಹೇಳುತ್ತಿದ್ದಾರೆ. ಆದರೆ, ಇದುವರೆಗೆ ಈ ಯೋಜನೆ ಕಾರ್ಯಗತವಾಗಿಲ್ಲ. ಪಟ್ಟಣದ ಹೇಮಾವತಿ ನದಿ ನೀರನ್ನೇ ನೇರವಾಗಿ ಕುಡಿಯಬೇಕಾಗಿದೆ.
ಒಳಚರಂಡಿ ವ್ಯವಸ್ಥೆ ನಾಪತ್ತೆ: ಪಟ್ಟಣದಲ್ಲಿ ಸರಿಯಾದ ರೀತಿಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ, ಹಲವು ಬಡಾವಣೆಗಳಲ್ಲಿ ಮಳೆ ನೀರು ಚರಂಡಿ ಮೇಲೆ ಉಕ್ಕಿ ಹರಿಯುತ್ತದೆ. ಹಲವು ಕಡೆ ಚರಂಡಿ ನೀರು ಹೇಮಾವತಿ ನದಿಗೆ ಹೋಗುತ್ತಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.
ಪಾರ್ಕಿಂಗ್, ಬೀದಿ ದೀಪಗಳ ಸಮಸ್ಯೆ: ಪಟ್ಟಣ ವ್ಯಾಪ್ತಿಯ ಹಳೇ ತಾಲೂಕು ಕಚೇರಿ ಆವರಣದಲ್ಲಿ ವಾಹ ನ ಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಆದರೆ, ಇಲ್ಲಿ ಜಾಗ ಸಾಕಾಗುತ್ತಿಲ್ಲ, ಮುಖ್ಯರಸ್ತೆ ಬದಿ ಯಲ್ಲಿ ವಾಹನಗಳ ನಿಲುಗಡೆಗೆ ನಿಷೇಧ ಇರುವುದರಿಂದ ವರ್ತಕರು ವ್ಯಾಪಾರವಿಲ್ಲದೆ ಕಂಗಾಲಾಗಿದ್ದಾರೆ. ಇನ್ನು ಗುಣಮಟ್ಟದ ಎಲ್‌ಇಡಿ ಬೀದಿ ದೀಪಗಳನ್ನು ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಳವಡಿಸಬೇಕಿದೆ. ಅದರಲ್ಲೂ ತೇಜಸ್ವಿ ಚಿತ್ರಮಂದಿರದಿಂದ ಹೇಮಾವತಿ ಸೇತುವೆ ವರೆಗೆ ಬೀದಿ ದೀಪಗಳು ಸರಿಯಾಗಿ ಬೆಳಗದೇ ಸಂಪೂರ್ಣ ಕತ್ತಲಮಯವಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ನುರಿತ ವೈದ್ಯರಿಲ್ಲ: ತಾಲೂಕಿನ ಜನರಿಗೆ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯೇ ಆಧಾರವಾಗಿದ್ದು, ಕೆಲವು ರೋಗಗಳಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗು ತ್ತದೆ. ಹೃದಯಾಘಾತ ಸೇರಿ ಗಂಭೀರ ಕಾಯಿಲೆಗಳಿಗೆ ಹಾಸನ, ಮಂಗಳೂರಿಗೆ ಹೋಗಬೇಕಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಆರೋಗ್ಯ ಕ್ಷೇತ್ರದ ಕಡೆಗೆ ಅಷ್ಟಾಗಿ ಗಮನ ಹರಿಸಿಲ್ಲ. ಅಲ್ಲದೆ, ನುರಿತ ವೈದ್ಯರ ನೇಮಕವೂ ಆಗಬೇಕಿದೆ.
ಕ್ರೀಡಾಪಟುಗಳಿಗೆ ಇಲ್ಲ ಸೌಕರ್ಯ: ಪಟ್ಟಣದಲ್ಲಿರುವ ಏಕೈಕ ಕ್ರೀಡಾ ಮೈದಾನ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಕ್ರೀಡಾಂಗಣದ ಅಭಿವೃದ್ಧಿಗೆ ಯುವಜನ ಕ್ರೀಡಾ ಇಲಾಖೆಯಿಂದ 24 ಲಕ್ಷ ರೂ. ಬಿಡುಗಡೆ ಆಗಿ ದ್ದರೂ, ಯಾವುದೇ ಕೆಲಸ ಆಗಿಲ್ಲ. ಇರುವ ಮೈದಾನ ಹಾಳು ಮಾಡಲಾಗಿದೆ. ಹೋಬಳಿ, ತಾಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕಲ್ಲು ತುಳಿದುಕೊಂಡೇ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಒಳಾಂಗಣ ಕ್ರೀಡಾಂಗಣ, ಈಜುಕೊಳ ನಿರ್ಮಾಣದ ಭರವಸೆ ನೀಡಿದ್ದ ಶಾಸಕರು, ಇದುವರೆಗೂ ಕಾರ್ಯಗತವಾಗಿಲ್ಲ.
ಪಟ್ಟಣಕ್ಕಿಲ್ಲ ಉದ್ಯಾನ: ಸಣ್ಣ ಪುಟ್ಟ ಪಟ್ಟಣಗಳಲ್ಲೂ ಉದ್ಯಾನ ಇರುತ್ತದೆ. ಆದರೆ, ಸಕಲೇಶಪುರ ತಾಲೂಕು ಕೇಂದ್ರದಲ್ಲಿ ಕನಿಷ್ಠ ಮಕ್ಕಳಿಗೆ ಆಟವಾಡಲು ಪ್ರತ್ಯೇಕ ಸ್ಥಳ ಇಲ್ಲ. ಇನ್ನೂ ಉದ್ಯಾನದ ಕಥೆ ಕೇಳುವುದೇ ಬೇಡ.
ಸೌಕರ್ಯವಿಲ್ಲದ ಹಿಂದೂ ರುದ್ರಭೂಮಿ: ಪಟ್ಟಣದಲ್ಲಿ 9 ಎಕರೆ ಹಿಂದೂಗಳ ರುದ್ರಭೂಮಿ ಇದ್ದು, ಮೂಲ ಸೌಲಭ್ಯದಿಂದ ವಂಚಿತವಾಗಿದೆ. ಮಳೆಗಾಲದಲ್ಲಿ ಶವ ಸಂಸ್ಕಾರ ಮಾಡಲು ಪರದಾಡಬೇಕಾಗಿದೆ. ಈ ಬಗ್ಗೆ ಪುರಸಭೆ ಕ್ರಮಕೈಗೊಳ್ಳಬೇಕು.
ಅಗಲೀಕರಣವಾಗದ ತೇಜಸ್ವಿ ವೃತ್ತ: ರಾಷ್ಟ್ರೀಯ ಹೆದ್ದಾರಿ -75, ಸಕಲೇಶಪುರ-ಬೇಲೂರು ರಾಜ್ಯ ಹೆದ್ದಾರಿ ಸೇರುವ ತೇಜಸ್ವಿ ವೃತ್ತ ಕಿರಿದಾಗಿದ್ದು, ಅಪಘಾತಗಳು ಸರ್ವೆ ಸಾಮಾನ್ಯವಾಗಿದೆ. ವೃತ್ತ ಅಗಲೀಕರಣ ಮಾಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟಿಸಿದ್ದರೂ ಶಾಸಕರಾಗಲಿ, ಪುರಸಭೆ ಆಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗಿರುವ ಹೇಮಾವತಿ ನದಿ ಸೇತುವೆ ಮೇಲಿನ ರಸ್ತೆ ದುರಸ್ತಿ ಮಾಡಿಲ್ಲ. ಸೇತುವೆ ಪಕ್ಕದಲ್ಲಿರುವ ಪಾದಚಾರಿ ಸೇತುವೆಯೂ ಅಭಿವೃದ್ಧಿಪಡಿಸಿಲ್ಲ. ಒಟ್ಟಾರೆಯಾಗಿ ಮೂರು ಬಾರಿ ಸಕಲೇಶಪುರದಲ್ಲಿ ಶಾಸಕರಾಗಿ ಎಚ್.ಕೆ.ಕುಮಾರಸ್ವಾಮಿ ಹಾಗೂ ಪುರಸಭಾ ಆಡಳಿತ ಪಟ್ಟಣ ಅಭಿವೃದ್ಧಿಗೆ ಸಂಪೂರ್ಣ ಕಾರಣಗಳನ್ನೇ ಹೇಳಿಕೊಂಡು ಪಟ್ಟಣದ ಅಭಿವೃದ್ಧಿಗೆ ಮುಂದಾಗದ ಕಾರಣ, ಸಾರ್ವಜನಿಕರ ವಲಯದಿಂದ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ. ಇದರಿಂದಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಮತದಾರರು ಜೆಡಿಎಸ್ ಬಿಟ್ಟು ಬೇರೆ ಪಕ್ಷಗಳತ್ತ ಮುಖ ಮಾಡುವ ಸಾಧ್ಯತೆಯಿದೆ.
ಸತತ ಮೂರು ಬಾರಿ ಗೆಲುವು ಸಾಧಿಸಿದ ಶಾಸಕ ಎಚ್.ಕೆ. ಕುಮಾರಸ್ವಾಮಿ ಸಕಲೇಶಪುರ ಪಟ್ಟಣದ ಅಭಿವೃದ್ಧಿ ಮಾಡಲು ಮುಂದಾಗದ ಕಾರಣ, ನಾಗರಿಕರು ಮೂಲ ಸೌಲಭ್ಯದಿಂದ ವಂಚಿತರಾಗಬೇಕಿದೆ. ಇದು ಬೇಸರದ ಸಂಗತಿ. -ಸುಬ್ರಹ್ಮಣ್ಯ, ಕಾಫಿ ಮೆಣಸು ವರ್ತಕರು