ನವದೆಹಲಿ: ಮೊರ್ಬಿ ಸೇತುವೆ ದುರಂತದ ಸಮಯದಲ್ಲಿ ಮಾಡಿದ ಟ್ವೀಟ್ ನಿಂದಾಗಿ ಟಿಎಂಸಿ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆಂದು ಟಿಎಂಸಿಯ ಹಿರಿಯ ನಾಯಕ ಡೆರೆಕ್ ಒಬ್ರಿಯಾನ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಸಾಕೇತ್ ಅವರು ಸೋಮವಾರ ರಾತ್ರಿ 9 ಗಂಟೆಗೆ ದಿಲ್ಲಿಯಿಂದ ಜೈಪುರಕ್ಕೆ ಫ್ಲೈಟ್ ಮೂಲಕ ಹೋಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಳಿದಾಗ ಗುಜರಾತ್ ಪೊಲೀಸರು ಸಾಕೇತ್ ಅವರನ್ನು ಬಂಧಿಸಿದ್ದಾರೆಂದು ಟ್ವೀಟ್ ಮಾಡಿದ್ದಾರೆ.
ನಡುರಾತ್ರಿ 2 ಗಂಟೆ ಸಮಯದಲ್ಲಿ ಸಾಕೇತ್ ಅವರು ತನ್ನ ತಾಯಿಗೆ ಕರೆ ಮಾಡಿ, ನನ್ನನು ಅಹಮದಾಬಾದ್ ಗೆ ಕರೆದುಕೊಂಡು ಹೋಗುತ್ತಿದ್ದಾರೆ ಮಂಗಳವಾರ ಮಧ್ಯಾಹ್ನದ ವೇಳೆಗೆ ಅಹಮದಾಬಾದ್ ತಲುಪುತ್ತೇನೆ ಎಂದು ಹೇಳಿದ್ದಾರೆ. ಅಷ್ಟು ಹೇಳಿದ ಮೇಲೆ ಪೊಲೀಸರು ಅವರ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಡೆರಿಕ್ ಟ್ವೀಟ್ ಮಾಡಿದ್ದಾರೆ.
ಅಹಮದಾಬಾದ್ ಸೈಬರ್ ಸೆಲ್ ನಲ್ಲಿ ಮೊರ್ಬಿ ದುರಂತದ ಟ್ವೀಟ್ ಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಬಿಜೆಪಿ ಸೇಡಿನ ರಾಜಕೀಯವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದೆ. ಇದ್ಯಾವುದರಿಂದಲೂ ಟಿಎಂಸಿಯ ಮಾತನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಡೆರಿಕ್ ಹೇಳಿದ್ದಾರೆ.
ಅ.30 ರಂದು ಗುಜರಾತ್ ನಲ್ಲಿ ಮೊರ್ಬಿ ಸೇತುವೆ ದುರಂತ ಸಂಭವಿಸಿತ್ತು. ಈ ದುರಂತದಲ್ಲಿ 130 ಮಂದಿ ಮೃತಪಟ್ಟಿದ್ದರು.