ಹುಣಸಗಿ: ಸಕಾಲ ಯೋಜನೆಯಿಂದ ಸಾರ್ವಜನಿಕರಿಗೆ ನಿಗದಿತ ಅವಧಿಯೊಳಗೆ ಕೋರಿರುವ ದಾಖಲಾತಿ ಗಳು ಕೈಗೆ ಸಿಗಲಿದ್ದು, ಬಹಳ ಅನುಕೂಲ ವಾಗಿದೆ ಎಂದು ಜಿಲ್ಲಾ ಉಪ- ವಿಭಾಗ ಅಧಿಕಾರಿ ಶಾ ಅಲಂ ಹುಸೇನ್ ಹೇಳಿದರು.
ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಸಕಾಲ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಕಾಲ ಯೋಜನೆ ಬರುವುದಕ್ಕಿಂತ ಮುಂಚೆ ಅರ್ಜಿ ಸಲ್ಲಿಸಿದಾಗ ವಿಲೇವಾರಿ ಆಗದೆ ಹಾಗೇ ಇರುತ್ತಿದ್ದವು ಹಾಗೂ ಕಳೆದು ಹೋಗುತ್ತಿದ್ದವು. ಇದರಿಂದಾಗಿ ಸಾರ್ವಜನಿಕರು ಅನೇಕ ಸಮಸ್ಯೆಗಳು ಎದುರಿಸಬೇಕಿತ್ತು. ಸದ್ಯ ಸಕಾಲದಿಂದಾಗಿ ಪ್ರತಿಯೊಂದು ದಾಖಲಾತಿ ಮತ್ತು ಉತ್ತರ ಇಲಾಖೆಗಳಿಂದ ದೊರೆಯುತ್ತಿವೆ ಎಂದು ತಿಳಿಸಿದರು.
ಹತ್ತು ವರ್ಷಗಳ ಅವಧಿಯಲ್ಲಿ 28.63 ಲಕ್ಷ ಅರ್ಜಿಗಳನ್ನು ಪಡೆದು, ಸಮರ್ಪಕವಾಗಿ 26.41 ಲಕ್ಷ ಅರ್ಜಿದಾರರಿಗೆ ಉತ್ತರ ಹಾಗೂ ದಾಖಲೆ ವಿತರಿಸಿದ ತೃಪ್ತಿ ಇದೆ ಎಂದರು.
ಗ್ರೇಡ್-2 ತಹಶೀಲ್ದಾರ್ ಮಹಾದೇವಪ್ಪ ಬಿರಾದಾರ ಮಾತನಾಡಿ, ಸಕಾಲದಡಿಯಲ್ಲಿ ಅನೇಕರಿಗೆ ನಿಗದಿತ ಅವಧಿಯಲ್ಲಿ ದಾಖಲಾತಿ ಸಿಗುವಂತೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಸಕಾಲ ಕುರಿತು ಜಾಥಾ ನಡೆಸಲಾಯಿತು. ತಹಶೀಲ್ದಾರ್ ಅಶೋಕ ಸುರಪುರಕರ್, ಬಸವರಾಜ ಬಿರಾದಾರ, ಅರುಣಕುಮಾರ ಚವ್ಹಾಣ, ಗೋವಿಂದಪ್ಪ ಟಣಕೆದಾರ, ಗುರು ರಾಠೊಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.