Advertisement

“ಸಕಾಲ’ಸೇವೆಯಲ್ಲಿ ವಿಳಂಬ ಮಾಡಿದ್ರೆ ದಂಡ

03:47 PM Dec 16, 2018 | |

ಚಿತ್ರದುರ್ಗ: ಸಕಾಲ ಯೋಜನೆಯಡಿ ನೀಡುವ ಸೇವೆಯಲ್ಲಿ ವಿಳಂಬ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ದಂಡ ವಿಧಿಸಲಾಗುವುದು ಎಂದು ಕರ್ನಾಟಕ ಸಕಾಲ ಮಿಷನ್‌ ಆಡಳಿತಾಧಿಕಾರಿ ಕೆ.ಮಥಾಯ್‌ ಎಚ್ಚರಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕಾಲ ಯೋಜನೆಯಡಿ ಜಿಲ್ಲೆಯಲ್ಲಿ ಅರ್ಜಿಗಳ ವಿಲೇವಾರಿ, ಬಾಕಿ ಇರುವ ಅರ್ಜಿಗಳ ಕುರಿತು ಶನಿವಾರ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಸಕಾಲ ಸೇವೆ ಕಾಯ್ದೆ ಅನ್ವಯ ನಿಗದಿತ ಅವಧಿಯೊಳಗೆ ಅರ್ಜಿ ವಿಲೇವಾರಿ ಮಾಡದಿದ್ದಲ್ಲಿ ದಿನವೊಂದಕ್ಕೆ 20 ರೂ. ದಂಡವನ್ನು ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ವೇತನದಿಂದ ಕಡಿತಗೊಳಿಸಿ ಅರ್ಜಿದಾರರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ವಿಳಂಬ ಧೋರಣೆ ಅನುಸರಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ದಂಡ ವಿಧಿಸಲು ಹಿಂಜರಿಯುವುದಿಲ್ಲ ಎಂದರು.

72 ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿನ 894 ಬಗೆಯ ಸೇವೆಗಳನ್ನು ಸಮಯಬದ್ಧವಾಗಿ ನಾಗರಿಕರಿಗೆ ನೀಡುವ ವ್ಯವಸ್ಥೆ ರಾಜ್ಯದಲ್ಲಿ ಜಾರಿಯಲ್ಲಿದೆ ಎಂದ ಮಥಾಯ್‌, ಸಕಾಲ ಯೋಜನೆಯನ್ನು ವಿವಿಧ ಇಲಾಖೆಗಳು ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ. ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸದೆ, ಪರ್ಯಾಯ ಮಾರ್ಗದಲ್ಲಿ ಹಾಗೂ ಮಧ್ಯವರ್ತಿಗಳ ಮೂಲಕ ಸ್ವೀಕರಿಸಲಾಗುತ್ತಿದೆ. ಅಲ್ಲದೆ ವಿಲೇವಾರಿ ಆಗದಿರುವ ಬಗ್ಗೆ ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮದಲ್ಲೂ ದೂರುಗಳು ಬಂದಿವೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಬಹಳಷ್ಟು ಕಚೇರಿಗಳಲ್ಲಿ ಸಕಾಲ ಯೋಜನೆಯಡಿ ನೀಡುವ ಸೇವೆಗಳು, ಸಕ್ಷಮ ಪ್ರಾಧಿಕಾರ, ಮೇಲ್ಮನವಿ ಪ್ರಾಧಿಕಾರ ವಿವರವುಳ್ಳ ಫಲಕ ಹಾಕಿಲ್ಲ. ಅಲ್ಲದೆ ಸಕಾಲ ಕೌಂಟರ್‌ ತೆರೆದಿಲ್ಲ. ಈ ಮೂಲಕ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಡಲಾಗುತ್ತಿದೆ. ಸಕಾಲ ಯೋಜನೆ ಆರಂಭವಾಗಿ ಏಳು ವರ್ಷ ಕಳೆದಿದ್ದರೂ ಕೆಲವು ಇಲಾಖೆ ಇಲಾಖೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಲೋಕೋಪಯೋಗಿ ಇಲಾಖೆ ಸಾರ್ವಜನಿಕರಿಗೆ 34 ಬಗೆಯ ಸೇವೆ ಒದಗಿಸಬೇಕಿದೆ. ಆದರೆ ಚಿತ್ರದುರ್ಗದ ಲೋಕೋಪಯೋಗಿ ಇಲಾಖೆಯ ಕಚೇರಿಗಳಲ್ಲಿ ಸಕಾಲ ಯೋಜನೆಯನ್ನೇ ಪ್ರಾರಂಭಿಸಿಲ್ಲ. ಅದೇ ರೀತಿ ಆಯುಷ್‌ ಇಲಾಖೆಯಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಎರಡು ದಿನಗಳ ಒಳಗಾಗಿ ಸಕಾಲ ಸೇವೆಯನ್ನು ಪ್ರಾರಂಭಿಸಲೇಬೇಕು. ಕಂದಾಯ ಇಲಾಖೆಯಲ್ಲಿ ನಿತ್ಯ ನೂರಾರು ಅರ್ಜಿಗಳು ಸ್ವೀಕೃತಗೊಳ್ಳುತ್ತವೆ. ಆದರೆ ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡದಿರುವುದು ಕಂಡುಬಂದಿದ್ದು, ಚಿತ್ರದುರ್ಗ ತಾಲೂಕೊಂದರಲ್ಲಿಯೇ 33,203 ಅರ್ಜಿಗಳನ್ನು ನಿಗದಿತ ಕಾಲಮಿತಿಗಿಂತ ಹೆಚ್ಚು ವಿಳಂಬವಾಗಿ ವಿಲೇವಾರಿ ಮಾಡಿರುವುದು, ಚಳ್ಳಕೆರೆ ತಾಲೂಕಿನಲ್ಲಿ 23,838 ಅರ್ಜಿಗಳನ್ನು ವಿಳಂಬವಾಗಿ ವಿಲೇವಾರಿ ಮಾಡಿರುವುದು ಕಂಡುಬಂದಿದೆ. ತಹಶೀಲ್ದಾರ್‌ ಕಚೇರಿಗಳಲ್ಲೇ ಹೆಚ್ಚು ವಿಳಂಬ ಮಾಡಲಾಗುತ್ತಿದೆ. ಇನ್ನು ಮುಂದೆ ಇಂತಹ ವಿಳಂಬಕ್ಕೆ ಅಧಿಕಾರಿಗಳು ದಂಡ ತೆರಬೇಕಾಗುತ್ತದೆ ಎಂದು ತಾಕೀತು ಮಾಡಿದರು.

Advertisement

ಸರ್ಕಾರದಿಂದ ನಾಗರಿಕರಿಗೆ ನಿಗದಿತ ಅವಧಿಯೊಳಗೆ ಸೇವೆ ಒದಗಿಸುವಂತಹ ಸಕಾಲ ಮಿಷನ್‌ ಯೋಜನೆಯನ್ನು 2011 ರಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಗೆ ನೆರೆ ಹೊರೆಯ ರಾಜ್ಯಗಳಲ್ಲಷ್ಟೇ ಅಲ್ಲ, ಬಾಂಗ್ಲಾದೇಶದಲ್ಲಿಯೂ ಮನ್ನಣೆ ಪಡೆದಿದೆ ಎಂದರು.

ಜಿಪಂ ಸಿಇಒ ಪಿ.ಎನ್‌. ರವೀಂದ್ರ ಮಾತನಾಡಿ, ಇನ್ನೊಂದು ವಾರದೊಳಗೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಕಾಲ ಯೋಜನೆ ಹಾಗೂ ಆಯಾ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನೀಡುವ ಸೇವೆಗಳು, ಸಕ್ಷಮ ಪ್ರಾಧಿಕಾರ, ಮೇಲ್ಮನವಿ ಪ್ರಾಧಿಕಾರದ ಸಮಗ್ರ ವಿವರವುಳ್ಳ ಪ್ರದರ್ಶನ ಫಲಕವನ್ನು ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಈಗಾಗಲೇ ಜಿಲ್ಲೆಯ ಎಲ್ಲ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಸಕಾಲ ರ್ಯಾಕಿಂಗ್‌ನಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆ ಉತ್ತಮ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.

ಸಕಾಲ ಮಿಷನ್‌ ಆಡಳಿತಾಧಿಕಾರಿಯಾಗಿ ಯೋಜನೆಯ ಅನುಷ್ಠಾನದ ಬಗ್ಗೆ ಬಾಂಗ್ಲಾದೇಶದ 1500 ಅಧಿಕಾರಿಗಳಿಗೆ ಆರು ಹಂತಗಳಲ್ಲಿ ತರಬೇತಿ ನೀಡಿದ್ದೇನೆ. ಕರ್ನಾಟಕ ರಾಜ್ಯದ ಸಕಾಲ ಯೋಜನೆಗೆ ಅಂತಾರಾಷ್ಟ್ರೀಯ ಮಟ್ಟದ ಗೂಗಲ್‌ ಇನ್ನೋವೇಟಿವ್‌ ಪ್ರಶಸ್ತಿ, ಪ್ರಧಾನಮಂತ್ರಿಗಳ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಕಾಮನ್‌ವೆಲ್ತ್‌ ಪ್ರಶಸ್ತಿ ದೊರೆತಿದೆ. ಇದು ಈ ಯೋಜನೆಯ ಸದುದ್ದೇಶ ಹಾಗೂ ಮಹತ್ವವನ್ನು ಬಿಂಬಿಸುತ್ತದೆ.
ಕೆ. ಮಥಾಯ್‌, ಕರ್ನಾಟಕ ಸಕಾಲ ಮಿಷನ್‌ ಆಡಳಿತಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next