ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ನಡೆ ತೋರಿ ಪೊಲೀಸರಿಗೆ ಸಿಕ್ಕಿಬಿದ್ದ ರಾಜಸ್ಥಾನದ ಝುನ್‌ಜುನು ಜಿಲ್ಲೆಯ ಸಾಜಿದ್ ಖಾನ್, “ಕೂಲಿ ಕಾರ್ಮಿಕ’ ಎಂಬುದು ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ.
ಆರ್.ಟಿ.ನಗರದ ಮಸೀದಿ ಬಳಿ ಶುಕ್ರವಾರ ತಡರಾತ್ರಿ ಸಾಜಿದ್‌ಖಾನ್‌ನನ್ನು ವಶಕ್ಕೆ ಪಡೆದ ಉಪ್ಪಾರಪೇಟೆ ಪೊಲೀಸರು, ಕೂಡಲೇ ಕಾಟನ್‌ಪೇಟೆಯ ಲಾಡ್ಜ್ನಲ್ಲಿದ್ದ ಆತನ ಪತ್ನಿ ಮತ್ತು ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದರು.
ನಂತರ ಆತನ ಸ್ವಂತ ಊರಾದ ಝುನ್‌ಜುನು ಜಿಲ್ಲೆಯದ ಜಿರಾದಿನ್ ಗ್ರಾಮಕ್ಕೆ ಸಬ್‌ಇಸ್ಪೆಕ್ಟರ್ ನೇತೃತ್ವದ ತಂಡ ತೆರೆಳಿ ಆತನ ಪೂರ್ವಾಪರ ಪರಿಶೀಲನೆ ನಡೆಸಿದೆ. ಈ ವೇಳೆ ಸಾಜಿದ್ ಖಾನ್, ಒಬ್ಬ ಮಧ್ಯಮ ವರ್ಗದ ವ್ಯಕ್ತಿಯಾಗಿದ್ದು, ಕೂಲಿ ಕಾರ್ಮಿಕನಾಗಿದ್ದಾನೆ.
ಆತನ ಪತ್ನಿ ಕೂಡ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ರಂಜಾನ್ ಹಬ್ಬದ ಪ್ರಯುಕ್ತ ಬೆಂಗಳೂರಿಗೆ ಬಂದಿದ್ದ ಸಾಜಿದ್ ಖಾನ್ ಮತ್ತು ಕುಟುಂಬ ನಗರದ ವಿವಿಧ ಮಸೀದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನರು ಕೊಡುವ ದಾನ ಪಡೆಯಲು ಬಂದಿದ್ದರು ಎಂದು ಪೊಲೀಸರು ಹೇಳಿದರು.
ಮೇ 6ರಂದು ವಿವಿಧ ಮಸೀದಿಗಳ ಬಳಿ ದಾನವಾಗಿ ಪಡೆದಿದ್ದ ನಾಣ್ಯಗಳು ಹಾಗೂ ಸೊಂಟದಲ್ಲಿದ್ದ ತಾಯತಗಳಿಂದ ಲೋಹಶೋಧಕ ಯಂತ್ರದಲ್ಲಿ ಕೆಂಪು ದೀಪ ಹೊತ್ತಿಕೊಂಡು ಬೀಪ್ ಸದ್ದು ಜೋರಾಗಿ ಕೇಳಿ ಬಂದಿತ್ತು.
ಈ ದೃಶ್ಯಾವಳಿಗಳನ್ನಾಧರಿಸಿ ಕೆಲ ಮಾಧ್ಯಮಗಳು ಅನುಮಾನಸ್ಪದ ವ್ಯಕ್ತಿ ಎಂದು ಊಹಾಪೋಹ ಸುದ್ದಿ ಹಬ್ಬಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಶುಕ್ರವಾರ ರಾತ್ರಿ ಆರ್.ಟಿ.ನಗರದ ಮಸೀದಿ ಬಳಿ ಸಾಜಿದ್‌ಖಾನ್ ಪತ್ತೆಯಾಗಿದ್ದ.