ನವದೆಹಲಿ/ತಿರುವನಂತಪುರಂ: ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕಮಾಂಡರ್ ಅಭಿಲಾಷ್ ಟಾಮಿ ಅವರು ಎರಡನೇ ಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಸೆಪ್ಟೆಂಬರ್ 4, 2022 ರಂದು ಫ್ರಾನ್ಸ್‌ನ ಲೆಸ್ ಸೇಬಲ್ಸ್ – ಡಿ’ಒಲೋನ್‌ನಿಂದ ಪ್ರಾರಂಭವಾದ ವಿಶ್ವಾದ್ಯಂತ ಏಕವ್ಯಕ್ತಿ ನೌಕಾಯಾನ ರೇಸ್‌ನಲ್ಲಿ ಪೂರ್ಣಗೊಳಿಸಿದ 44 ವರ್ಷದ ಟಾಮಿ ಅವರು ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಭಿಲಾಷ್ ಟಾಮಿ ಅವರ ಬಯಾನಾತ್ ದೋಣಿ 236 ದಿನಗಳ ನೌಕಾಯಾನದ ನಂತರ ಶನಿವಾರ ಫ್ರೆಂಚ್ ಕರಾವಳಿಯನ್ನು ತಲುಪಿತು.
ಇಲ್ಲಿನ ಉತ್ತರ ಅಟ್ಲಾಂಟಿಕ್ ಪ್ರದೇಶದಲ್ಲಿ ಹಠಾತ್ ಹವಾಮಾನ ಬದಲಾವಣೆಯಿಂದಾಗಿ, ಅಭಿಲಾಷ್ ಆಗಮನದ ಸಮಯವನ್ನು ನಿಖರವಾಗಿ ಊಹಿಸಲು ಸಂಘಟಕರಿಗೆ ಸಾಧ್ಯವಾಗಲಿಲ್ಲ.
ಗುರುವಾರ ರಾತ್ರಿ ಪ್ರಥಮ ಸ್ಥಾನಗಳಿಸಿದ ದಕ್ಷಿಣ ಆಫ್ರಿಕಾದ 40 ವರ್ಷದ ನಾವಿಕ ಕರ್ಸ್ಟನ್ ನ್ಯೂಶಾಫರ್ ಅವರಿಗೆ ಸಂಘಟಕರು ಭವ್ಯ ಸ್ವಾಗತ ನೀಡಿದ್ದರು. ಸಮುದ್ರದಲ್ಲಿ ಇದ್ದಕ್ಕಿದ್ದಂತೆ ಗಾಳಿಯಿಲ್ಲದ ಕಾರಣ ಕರ್ಸ್ಟನ್ ಕೊನೆಯ 2-3 ನಾಟಿಕಲ್ ಮೈಲುಗಳನ್ನು ಕ್ರಮಿಸಲು ಕೆಲವು ಗಂಟೆಗಳನ್ನು ತೆಗೆದುಕೊಂಡರು.
ಗೋಲ್ಡನ್ ಗ್ಲೋಬ್ ರೇಸ್ ಅನ್ನು ವಿಶ್ವದ ಅತ್ಯಂತ ಕಠಿಣ ನೌಕಾಯಾನ ರೇಸ್ ಎಂದು ಪರಿಗಣಿಸಲಾಗಿದೆ.