Advertisement

ಜೋತು ಬಿದ್ದ ವಿದ್ಯುತ್‌ ತಂತಿ

08:03 PM Nov 29, 2019 | Naveen |

„ಭೀಮಣ್ಣ ಬಿ. ವಡವಟ್‌

Advertisement

ಸೈದಾಪುರ: ವಿದ್ಯುತ್‌ ಅವಶ್ಯಕತೆ ಇರುವಷ್ಟೇ ಅಪಾಯ ಕೂಡ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಮರ್ಪಕ ವಿದ್ಯುತ್‌ ಪೂರೈಕೆ ಮಾಡುವ ಜತೆಗೆ ಸುರಕ್ಷತೆಗೆ ಒತ್ತು ನೀಡಬೇಕಾದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಜನರು ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯುತ್ತಿರುವ ಸನ್ನಿವೇಶ ಗ್ರಾಮದಲ್ಲಿ ಎದುರಾಗಿದೆ.

ಪಟ್ಟಣದಲ್ಲಿನ ಪೊಲೀಸ್‌ ಕಾಲೋನಿ ಹಾಗೂ ತಾಯಿ ಕಾಲೋನಿ ಸೇರಿದಂತೆ ಇತರ ಪ್ರದೇಶಗಳಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದಿವೆ. ಅಲ್ಲದೇ ಪೊಲೀಸ್‌ ವಸತಿ ಗೃಹಗಳಿಗೆ ಹತ್ತಿರದಲ್ಲಿಯೇ ತಂತಿಗಳಿವೆ. ಜೆಸ್ಕಾಂ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ದಶಕಗಳ ಹಿಂದಿನ ಶಿಥಿಲ ವಿದ್ಯುತ್‌ ಕಂಬ ಹಾಗೂ ತಂತಿ ಬದಲಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ಆದರೆ ಜೆಸ್ಕಾಂ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಜನರ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ವಿದ್ಯುತ್‌ ಉಳಿತಾಯದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಾದ ಗ್ರಾಪಂನಿಂದಲೇ ವಿದ್ಯುತ್‌ ಪೋಲಾಗುತ್ತಿದೆ ಎಂಬುದಕ್ಕೆ ಸೈದಾಪುರ ಪಟ್ಟಣದಲ್ಲಿ ದಿನವಿಡಿ ಉರಿಯುವ ಬೀದಿ ದೀಪಗಳೇ ಉತ್ತಮ ಉದಾಹರಣೆಯಾಗಿವೆ. ಇಲ್ಲಿನ ವಿದ್ಯುತ್‌ ಕಂಬಗಳಿಗೆ ಹಾಕಲಾದ ಬಲ್ಬ್ಗಳು ಕರೆಂಟ್‌ ಬಂದ ಕೂಡಲೇ ಬೆಳಗಿ ಮತ್ತೆ ಕರೆಂಟ್‌ ಹೋದಾಗಲೇ ಆರುತ್ತವೆ. ವಿದ್ಯುತ್‌ ಬಲ್ಬ್ ಗಳನ್ನು ನಿಯಂತ್ರಿಸಲು ಜೆಸ್ಕಾಂ ಅಧಿಕಾರಿಗಳು ಹಾಗೂ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮ ಅನಾವಶ್ಯಕವಾಗಿ ವಿದ್ಯುತ್‌ ಪೋಲಾಗುತ್ತಿದೆ.

Advertisement

ವಿದ್ಯುತ್‌ ಸೋರಿಕೆ ತಡೆಗಟ್ಟುವ ತಂತಿಗಳು ನಿರುಪಯುಕ್ತವಾಗಿವೆ. ವಿದ್ಯುತ್‌ ಸೋರಿಕೆ ಮತ್ತು ಅಪಘಾತ ತಡೆಗಟ್ಟಲು ಪಟ್ಟಣದ ಅನೇಕ ಕಡೆ ನೂತನ ತಂತಿ ಹಾಕಲಾಗಿದೆ. ಆದರೆ ಹಾಕಿರುವ ಗುತ್ತಿಗೆದಾರರ ಕಳಪೆ ಕಾರ್ಯ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವುಗಳು ನಿರುಪಯುಕ್ತವಾಗಿದೆ.ಸೈದಾಪುರದಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದಿವೆ.

ಸ್ವಲ್ಪ ಗಾಳಿ ಬೀಸಿದರೂ ಬೆಂಕಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿಯೂ ಪೊಲೀಸ್‌ ಕಾಲೋನಿಯಲ್ಲಿರುವ ತಂತಿಗಳು ಅನೇಕ ಬಾರಿ ಕಡಿದು ಬಿದ್ದಿವೆ. ಇದರ ಬಗ್ಗೆ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಇನ್ನೂ ಕೂಡ ಬಗೆಹರಿಸಿಲ್ಲ. ಇನ್ನು ಮುಂದಾದರು ಜೋತು ಬಿದ್ದಿರುವ ತಂತಿಗಳನ್ನು ಬಿಗಿಗೊಳಿಸಬೇಕು.
ಭೀಮಣ್ಣ ಮಡಿವಾಳಕರ್‌
ಸ್ಥಳೀಯ ನಿವಾಸಿ

ಸೈದಾಪುರ ಪೊಲೀಸ್‌ ಕಾಲೋನಿಗೆ ಜೆಸ್ಕಾಂ ಸಿಬ್ಬಂದಿ ಕಳುಹಿಸಿ ಅಲ್ಲಿರುವ ಸಮಸ್ಯೆ ಪರಿಹರಿಸಲು ಸೂಚಿಸುತ್ತೇನೆ. ಸಮಯಕ್ಕೆ ತಕ್ಕಂತೆ ಬೀದಿ ದೀಪಗಳನ್ನು ನಿಯಂತ್ರಿಸುವುದು ಗ್ರಾಪಂ ಜವಾಬ್ದಾರಿ. ಆದರೂ ಈ ಬಗ್ಗೆ ಗ್ರಾಪಂ ಅಧ್ಯಕ್ಷರು ಮತ್ತು ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುತ್ತೇನೆ.
ವಿಶ್ವನಾಥರೆಡ್ಡಿ
ಜೆಸ್ಕಾಂ ಎಇಇ ಯಾದಗಿರಿ

Advertisement

Udayavani is now on Telegram. Click here to join our channel and stay updated with the latest news.

Next