ಸೈದಾಪುರ: ಮಕ್ಕಳ ಹಕ್ಕುಗಳಿಗೆ ಧಕ್ಕೆ ಬರದಂತೆ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಆ ದೆಸೆಯಲ್ಲಿ ಸರ್ಕಾರದ ಅನೇಕ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗೋವಿಂದ ರಾಠೊಡ ತಿಳಿಸಿದರು.
ಯಲಸತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಪಂ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳಿಗೆ ಧಕ್ಕೆ ಬಂದಲ್ಲಿ ಕೂಡಲೇ 1098 ಸಹಾಯವಾಣಿಗೆ ಕರೆ ಮಾಡಿದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳು ನೆರವು ನೀಡುತ್ತದೆ. ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು 1989ರಲ್ಲಿ ಜಾರಿಗೊಳಿಸಿದ್ದು, ಅದಕ್ಕೆ ಭಾರತ ಸರ್ಕಾರ 1992ರಲ್ಲಿ ಸಹಮತ ವ್ಯಕ್ತಪಡಿಸಿದೆ. ಅಲ್ಲದೆ ಮಕ್ಕಳ ಹಕ್ಕುಗಳ ರಕ್ಷಣೆಗೆ ತನ್ನ ಬದ್ಧತೆ ಸೂಚಿಸಿ ಮಕ್ಕಳ ಪರವಾದ ನಿಯಮ, ಕಾಯ್ದೆ, ಕಾನೂನು ದೇಶಾದ್ಯಂತ ಜಾರಿಗೊಳಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಅಪೌಷ್ಟಿಕತೆ, ಬಾಲ್ಯವಿವಾಹ, ಶಿಶು ಹತ್ಯೆ, ದೌರ್ಜನ್ಯ ಅನಾರೋಗ್ಯ ಮುಂತಾದ ಸಮಸ್ಯೆಗಳ ವಿರುದ್ಧ ಜಾಗೃತಗೊಳಿಸಲು ಮಕ್ಕಳ ಹಕ್ಕುಗಳ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಮಕ್ಕಳು ಸಮಾಜದ ಅವಿಭಾಜ್ಯ ಅಂಗ. ಅವರ ಉಳಿವು, ರಕ್ಷಣೆ ಹಾಗೂ
ಅಭಿವೃದ್ಧಿಗಾಗಿ ಸಮುದಾಯಗಳ ಜವಾಬ್ದಾರಿ ಅತ್ಯವಶ್ಯ. ಮಕ್ಕಳಿಗೆ ಉತ್ತಮ ಪರಿಸರ ಒದಗಿಸಿ ಭವಿಷ್ಯತ್ತಿನ ಮಾನವ ಸಂಪನ್ಮೂಲವಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ರಾಹುಲ್ ಪ್ರಸಾದ್, ಶಂಕರೆಡ್ಡಿ ಪಾಟೀಲ, ರವಿಕುಮಾರ, ನಾಗರೆಡ್ಡಿ, ಮುಖ್ಯಗುರು ವಿಜಯಕುಮಾರ, ಪಿಡಿಒ ಗಿರಿಮಲ್ಲಣ, ಶಿಕ್ಷಕ ಅಜ್ಮೀರ್ ಪಾಷ ಇತರರು ಇದ್ದರು.