ಸೈದಾಪುರ: ಗ್ರಾಮೀಣ ಭಾಗದ ಶಿಕ್ಷಣದಿಂದ ದೇಶ ಅಭಿವೃದ್ಧಿ ಸಾಧ್ಯ. ಆದ್ದರಿಂದ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಗ್ರಾಮೀಣ ಭಾಗದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಹೇಳಿದರು.
ಪಟ್ಟಣದ ವಿದ್ಯಾವರ್ಧಕ ಪ್ರೌಢಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ವಿವಿಧ ಶಾಲೆಗಳಿಗೆ ವಿದ್ಯಾರ್ಥಿಗಳ ಮೇಜು ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಮತ್ತು ನಗರ ಪ್ರದೇಶ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸಂಸ್ಥೆಯಿಂದ ಮೇಜು ವಿತರಿಸಲಾಗುತ್ತಿದೆ. ಇವುಗಳನ್ನು ಶಾಲೆ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದರ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.
ವಿದ್ಯಾವರ್ಧಕ ಪ್ರೌಢಶಾಲೆ ಮುಖ್ಯಶಿಕ್ಷಕ ಲಿಂಗರೆಡ್ಡಿ ನಾಯಕ ಮಾತನಾಡಿ. ಶಾಲೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳು ಅತ್ಯವಶ್ಯಕವಾಗಿದೆ. ಅದನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಉತ್ಕೃಷ್ಟ ಮಟ್ಟದ ಮೇಜುಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಸಂಸ್ಥೆ ಕಾರ್ಯ ಶ್ಲಾಘಿಸಿದರು. ಗುರುಕುಲ ವಿದ್ಯಾಪೀಠದ ಕಾರ್ಯದರ್ಶಿ ರಾಜು ದೊರೆ, ಕೂಡಲೂರು ಶಾಲೆ ಮುಖ್ಯಶಿಕ್ಷಕ ಪ್ರೇಮಕುಮಾರ, ಸಂತೋಷ ದೇಸಾಯಿ, ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಕೃಷ್ಣ, ಅಮರೇಶ ನಾಯಕ ಕೂಡಲೂರು, ವಲಯ ಮೇಲ್ವಿಚಾರಕ ದಾದಾಖಲಂದರ್, ಸೇವಾ ಪ್ರತಿನಿಧಿ ಶರಣು ನಾಚವರ, ವಿವಿಧ ಶಾಲೆ ಶಿಕ್ಷಕರು ಇದ್ದರು.