ಸೈದಾಪುರ: ಮಕ್ಕಳ ಕಲಿಕೆಯಲ್ಲಿ ಪೋಷಕರ ಜವಾಬ್ದಾರಿ ಅತಿ ಮುಖ್ಯವಾಗಿದೆ. ಈ ದಿಸೆಯಲ್ಲಿ ನಾವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಜಿಲ್ಲಾ ಯೋಜನ ಸಮನ್ವಯಾಧಿಕಾರಿ ನಾಗಪ್ಪ ಪೊತಲ್ ಅಭಿಪ್ರಾಯಪಟ್ಟರು.
ಮಧ್ವಾರ ಗ್ರಾಮದ ಕುವೆಂಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲಿಕಾ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂಗನವಾಡಿ ಮತ್ತು ದಾಖಲಾತಿ, ಹಾಜರಾತಿ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲಿಸಬೇಕು. ಅಲ್ಲದೆ ಹಾಜರಾತಿಗೆ ಹೆಚ್ಚಿನ ಮಹತ್ವ ನೀಡಿದಾಗ ಮಾತ್ರ ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಸ್ವಾಲಂಬನೆ ಜೀವನ ಸಾಗಿಸಬಹುದು.ಹಾಗಾಗಿ ಶಿಕ್ಷಕರು ಮತ್ತು ಪೋಷಕರು ದಾಖಲಾತಿ ಹಾಗೂ ಹಾಜರಾತಿಗೆ ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕಲಿಕೆ ಟಾಟಾ ಟ್ರಸ್ಟ್ ಕಾರ್ಯಕ್ರಮ ಅಧಿಕಾರಿ ಮಯೂರ ಪೂಜಾರಿ ಮಾತನಾಡಿ, ರಜೆ ಕಳೆದಿರುವ ಮಕ್ಕಳು ಶಾಲಾ ಆರಂಭದ ದಿನಗಳಲ್ಲಿ ಶಾಲೆಗೆ ಬರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಎತ್ತಿನಗಾಡಿ ಮೆರವಣಿಗೆ ಮಾಡುವ ಮೂಲಕ ಗ್ರಾಮದಲ್ಲಿ ದಾಖಲಾತಿ ಆಂದೋಲನ ಮತ್ತು ಶಾಲೆಗೆ ಮಕ್ಕಳನ್ನು ಕಳುಹಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನೆ ನಿರ್ದೇಶಕ ರಘುವೀರಸಿಂಗ್ ಠಾಕೂರ ಮಾತನಾಡಿ, ಮಕ್ಕಳನ್ನು ಅಂಗಡಿ, ಸಂಸ್ಥೆ, ಗ್ಯಾರೇಜ್, ಹೋಟೆಲ್ ಕೆಲಸಕ್ಕೆ ಇಟ್ಟುಕೊಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಗ್ರಾಮೀಣ ಭಾಗದ ಜನರು ತಮ್ಮ ಮಕ್ಕಳನ್ನು ಕೃಷಿ ಚಟುವಟಿಕೆ ಕಳುಹಿಸದೇ ದಿನನಿತ್ಯ ಶಾಲೆಗೆ ಕಳುಹಿಸಿ ಉತ್ತಮ ಶಿಕ್ಷಣ ಕೊಡಿಸಿ ದೇಶದ ಉತ್ತಮ ಪ್ರಜೆಯಾಗಿ ನಿರ್ಮಾಣ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಗ್ರಾಮದ ವಿವಿಧ ಬೀದಿಗಳಲ್ಲಿ ಶಾಲಾ ಮಕ್ಕಳು ಬಿತ್ತಿ ಪತ್ರ ಹಿಡಿದು ಘೋಷಣೆ ಕೂಗುತ್ತ ಜಾಗೃತಿ ಜಾಥಾ ಮೂಲಕ ವಿವಿಧ ಮಕ್ಕಳನ್ನು ದಾಖಲಾತಿ ಮಾಡಿಕೊಳಲಾಯಿತು.
ಕಲಿಕಾ ಟಾಟಾ ಟ್ರಸ್ಟ್ ಸಂಯೋಜಕ ರುದ್ರಸ್ವಾಮಿ ಚಿಕ್ಕಮಠ, ಶಾಲಾ ಮುಖ್ಯಶಿಕ್ಷಕ ಮಲ್ಲಪ್ಪ ಅರಿಕೇರಿಕರ್, ಎಎಸ್‌ಐ ತಿಮ್ಮಪ್ಪ, ಬೋರಮ್ಮ, ಸಂಯೋಜಕರ ಮಹೇಶ ಪಾಟೀಲ, ಶಿವಪುತ್ರ, ಮುದ್ದೇಶ, ಮೂರ್ತಿ, ಸುನಿಲ, ಬಾಷಾ, ಮಹಾದೇವಪ್ಪ ಕರಣಿಗಿ, ಶಿಕ್ಷಕರಾದ ಯಂಕಮ್ಮ, ಫಯಾಜ್‌ಸಾಬ್, ಯಂಕಮ್ಮ, ಮಂಜುನಾಥ, ರಾಜು, ಆನಂದಪ್ಪ, ಗುರುನಾಥರೆಡ್ಡಿ, ಸಾಗರ ಇದ್ದರು.