ಮೈಸೂರು: ಆಸ್ತಿ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾದ ಗೊಂದಲದಿಂದ ಇಬ್ಬರು ವ್ಯಕ್ತಿಗಳು ದೇವಸ್ಥಾನವೊಂದಕ್ಕೆ ಪ್ರತ್ಯೇಕವಾಗಿ ಬೀಗ ಹಾಕಿಕೊಂಡಿದ್ದು ವಿವಾದವಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಬೀಗ ತೆರವುಗೊಳಿಸಿದರು.
ರಾಮಾನುಜ ರಸ್ತೆಯ 9ನೇ ಕ್ರಾಸ್‌ನಲ್ಲಿರುವ 60×40 ಅಡಿ ವಿಸ್ತೀರ್ಣದ ಸತ್ಯಸಾಯಿ ಟ್ರಸ್ಟ್‌ಗೆ ಸೇರಿದ ಶ್ರೀಶಿರಡಿ ಸಾಯಿ ಬಾಬಾ ಮಂದಿರದ ಕಟ್ಟಡ ತಮಗೆ ಸೇರಿದ್ದೆಂದು ವಾದಿಸಿ ಪ್ರಸಾದ್ ಹಾಗೂ ಭವಾನಿಶಂಕರ್ ಎಂಬುವರು ಕಟ್ಟಡಕ್ಕೆ ಪ್ರತ್ಯೇಕ ಬೀಗ ಹಾಕಿಕೊಂಡಿದ್ದರು.
ಆದರೆ ಇವರಿಬ್ಬರ ನಡುವಿನ ಗೊಂದಲ ಟ್ರಸ್ಟ್ ನ ಸದಸ್ಯರು ಹಾಗೂ ದೇವಸ್ಥಾನದ ಭಕ್ತರಲ್ಲಿ ಅಸಮಾಧಾನ ಮೂಡಿಸಿತು. ಬಳಿಕ ಮಧ್ಯಪ್ರವೇಶಿಸಿದ ಕೆ.ಆರ್.ಠಾಣೆ ಪೊಲೀಸರು ಸಾಯಿ ಮಂದಿರಕ್ಕೆ ಹಾಕಲಾಗಿದ್ದ ಎರಡೂ ಬೀಗಗಳನ್ನು ತೆರವುಗೊಳಿಸಿದರು. ಆ ಮೂಲಕ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದಾರೆ.
ಪ್ರಕರಣದ ವಿವರ: ಜೆ.ಪಿ.ನಗರ ನಿವಾಸಿ ಲಕ್ಷ್ಮೀಕಾಂತ ಎಂಬವರು ಒಂದೂವರೆ ತಿಂಗಳ ಹಿಂದೆ ಮೃತಪಟ್ಟಿದ್ದರು. ಸಾವಿಗೂ ಮುನ್ನ ಜೆ.ಪಿ.ನಗರದ 60×40 ವಿಸ್ತೀರ್ಣದ ಮನೆಯನ್ನು ಪ್ರಸಾದ್ ಎಂಬುವರ ಹೆಸರಿಗೆ ಹಾಗೂ ರಾಮಾನುಜ ರಸ್ತೆಯಲ್ಲಿರುವ ಕಟ್ಟಡವನ್ನು ಸತ್ಯಸಾಯಿ ಟ್ರಸ್ಟ್ ಹೆಸರಿಗೆ ಬರೆದಿದ್ದಾರೆ ಎನ್ನಲಾಗಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡ ಪ್ರಸಾದ್ ಅವರು ಭಾನುವಾರ ರಾತ್ರಿ 10 ಗಂಟೆಗೆ ಟ್ರಸ್ಟ್ ಕಚೇರಿಗೆ ಬೀಗ ಹಾಕಿದ್ದರು.
ಈ ಜಾಗ ತಮಗೆ ಸೇರಿದೆ ಎಂದು ಭವಾನಿಶಂಕರ್ ಎಂಬುವರು ಸಹ ಇದೇ ಕಟ್ಟಡಕ್ಕೆ ಮತ್ತೂಂದು ಬೀಗ ಹಾಕಿದ್ದರು. ಅಲ್ಲದೆ ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಸಂಪೂರ್ಣ ದಾಖಲಾತಿ ಇದೆ ಎಂದು ಇಬ್ಬರೂ ಹೇಳುತ್ತಿದ್ದರು. ಆದರೆ ಭವಾನಿಶಂಕರ್ ಟ್ರಸ್ಟ್ ಕಟ್ಟಡಕ್ಕೆ ಅಕ್ರಮವಾಗಿ ಬೀಗ ಹಾಕಿದ್ದಾರೆ ಎಂದು ಆರೋಪಿಸಿ ಕೆ.ಆರ್. ಠಾಣೆಗೆ ದೂರು ನೀಡಿದ್ದರು.
ಬೀಗ ತೆರವು: ಅದರಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಜಾಗಕ್ಕೆ ಸಂಬಂಧಿಸಿದಂತೆ ತಮ್ಮ ಬಳಿಯೂ ದಾಖಲಾತಿ ಇದೆ ಎಂದು ಭವಾನಿಶಂಕರ್ ಪೊಲೀಸರಿಗೆ ತೋರಿಸಿದರು. ಅಷ್ಟರಲ್ಲೇ ಸ್ಥಳಕ್ಕೆ ಬಂದ ಹಿಂದೂ ಸಂಘಟನೆಗಳ ಪ್ರಮುಖರು ಆಸ್ತಿವಿವಾದವನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಿ.
ಇದನ್ನು ಹೊರತುಪಡಿಸಿ ಭಕ್ತರ ಭಾವನೆಗೆ ಧಕ್ಕೆಯುಂಟು ಮಾಡದೆ, ದೇಗುಲದ ಬಾಗಿಲು ತೆರೆಯುವಂತೆ ಪಟ್ಟುಹಿಡಿದರು. ಭಕ್ತರ ಒತ್ತಾಯಕ್ಕೆ ಮಣಿದ ಪ್ರಸಾದ್ ಹಾಗೂ ಭವಾನಿಶಂಕರ್ ಶ್ರೀಶಿರಡಿ ಸಾಯಿಬಾಬಾ ಮಂದಿರಕ್ಕೆ ಹಾಕಿದ್ದ ತಮ್ಮ ತಮ್ಮ ಬೀಗಗಳನ್ನು ತೆರವುಗೊಳಿಸಿದರು. ಬಳಿಕ ಪೊಲೀಸರ ಎದುರೇ ಸಾರ್ವಜನಿಕರು ಸಾಯಿ ಮಂದಿರ ಪ್ರವೇಶಿಸಿ ಬಾಬಾ ಮೂರ್ತಿಗೆ ಪೂಜೆ ಸಲ್ಲಿಸಿದರು.