Advertisement

ಒಬ್ಬಳೇ ವನಿತಾ ಅಥ್ಲೀಟ್‌, ಹೀಗಾಗಿ ಕ್ರೀಡಾಕೂಟಕ್ಕೆ ಕಳಿಸಲ್ಲ!

09:20 PM Aug 09, 2021 | Team Udayavani |

ಚೆನ್ನೈ:  ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕಡೈಯಾಲುಮೂಡು ಎಂಬ ಪುಟ್ಟ ಪಟ್ಟಣದ ಪ್ರತಿಭಾನ್ವಿತ ಅಥ್ಲೀಟ್‌, 18 ವರ್ಷದ ಸಮೀಹಾ ಬಾರ್ವಿನ್‌ ಅವರನ್ನು ವಿಚಿತ್ರ ಕಾರಣಕ್ಕೆ ಭಾರತದ ಅಥ್ಲೆಟಿಕ್ಸ್‌ ತಂಡದಿಂದ ಕೈಬಿಡಲಾಗಿದೆ. ಆ.23ರಿಂದ ಪೋಲೆಂಡ್‌ನ‌ಲ್ಲಿ ನಡೆಯಲಿರುವ 4ನೇ ವಿಶ್ವ ಕಿವುಡರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿರುವ ತಂಡದ ಏಕೈಕ ವನಿತಾ ಅಥ್ಲೀಟ್‌ ಎಂಬುದೇ ಇದಕ್ಕೆ ಕಾರಣ!

Advertisement

ಪುರುಷರೊಂದಿಗೆ ಕಳಿಸಲಾಗದು: ತಂಡಕ್ಕೆ ಐದು ಮಂದಿ ಪುರುಷ ಅಥ್ಲೀಟ್‌ಗಳೂ ಆಯ್ಕೆಯಾಗಿದ್ದಾರೆ. ಆದರೆ ಇವರ ಜತೆಗೆ ಏಕಮಾತ್ರ ಮಹಿಳಾ ಕ್ರೀಡಾಪಟುವನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಭಾರತ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ. ಅರ್ಹತಾ ಪರೀಕ್ಷೆಯಲ್ಲಿ ಯಶಸ್ವಿಯಾದ ಏಕೈಕ ಮಹಿಳಾ ಕ್ರೀಡಾಳಾಗಿರುವ ಸಮೀಹಾ, ಲಾಂಗ್‌ ಜಂಪ್‌ ಮತ್ತು 100 ಮೀ. ರೇಸ್‌ನಲ್ಲಿ ಪ್ರತಿನಿಧಿಸಬೇಕಿತ್ತು.

2017ರ ಜಾರ್ಖಂಡ್‌ನ‌ಲ್ಲಿ ನಡೆದ ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌, 2018 ಮತ್ತು 2019ರಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಮೀಹಾ ಚಿನ್ನದ ಪದಕ ಜಯಿಸಿದ್ದರು.

ತೀವ್ರ ಆರ್ಥಿಕ ಸಂಕಟ: ಸಮೀಹಾ ಬಾರ್ವಿನ್‌ ಜತೆಗೆ ಒಬ್ಬ ಸಹಾಯಕರನ್ನು ಕಳುಹಿಸಲು ಹಣದ ಕೊರತೆಯಿದೆ. ಸಣ್ಣ ಕಾಫಿ ಶಾಪ್‌ ನಡೆಸುತ್ತಿರುವ ಸಮೀಹಾ ಕುಟುಂಬ ತೀವ್ರ ಆರ್ಥಿಕ ಸಮಸ್ಯೆಯಲ್ಲಿದೆ. ಆಕೆಯ ಪ್ರವಾಸದ ಖರ್ಚನ್ನು ಕುಟುಂಬವೇ ಭರಿಸುವುದು ಕಷ್ಟ ಎಂದು ಕನ್ಯಾಕುಮಾರಿ ಸಂಸದ ವಿ. ವಿಜಯ್‌ಕುಮಾರ್‌ ಅವರು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರಿಗೆ ಜುಲೈ 26ರಂದು ಪತ್ರ ಬರೆದಿದ್ದರು. ಅವರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭಾರತದ ತಂಡ ಆ. 14ರಂದು ಪೋಲೆಂಡ್‌ಗೆ ತೆರಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next