Advertisement

ಸಹ್ಯಾದ್ರಿ ಪಂಚಮುಖಿ ಭತ್ತದ ತಳಿ: ಉತ್ತಮ ಇಳುವರಿ ನಿರೀಕ್ಷೆ

07:30 PM Oct 09, 2021 | Team Udayavani |

ಕುಂದಾಪುರ: ನೆರೆ ಬಾಧಿತ ಕರಾವಳಿ ಪ್ರದೇಶಗಳಿಗೆ ಸರಿ ಹೊಂದುವಂತೆ ಹೊಸದಾಗಿ ಬ್ರಹ್ಮಾವರ ಕೃಷಿ ಸಂಶೋಧನ ಕೇಂದ್ರದವರು ಸಂಶೋಧಿಸಿದ ಸಹ್ಯಾದ್ರಿ ಪಂಚಮುಖಿ (ಕೆಂಪಕ್ಕಿ) ಭತ್ತದ ತಳಿಯನ್ನು ಈ ಬಾರಿ ಕುಂದಾಪುರ ಭಾಗದಲ್ಲಿ ಅನೇಕ ಮಂದಿ ರೈತರು ಪ್ರಾಯೋಗಿಕವಾಗಿ ಬೆಳೆದಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

Advertisement

ಈ ಬಾರಿ ಕುಂದಾಪುರದ ಅನೇಕ ಕಡೆಗಳಲ್ಲಿ ರೈತರು ಈ ಸಹ್ಯಾದ್ರಿ ಪಂಚಮುಖಿ ಭತ್ತದ ತಳಿಯನ್ನು ಪ್ರಾಯೋಗಿಕ ನೆಲೆಯಲ್ಲಿ ಬೆಳೆಸಿದ್ದು, ಎಂ.ಒ.-4 ಗಿಂತಲೂ ಮೊದಲೇ ಫಸಲು ಬಂದಿದೆ. ಮಾತ್ರವಲ್ಲದೆ ಇಳುವರಿಯೂ ಉತ್ತಮವಾಗಿ ಇರುವಂತೆ ತೋರುತ್ತಿದೆ.

ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಬೀಳುವುದರಿಂದ ತಗ್ಗು ಪ್ರದೇಶದ ಗದ್ದೆಗಳಲ್ಲಿ ನೀರು ನಿಂತು, ಭತ್ತದ ಪೈರು ಕೊಳೆಯುತ್ತಿರುತ್ತದೆ. ಈ ಸಮಸ್ಯೆಯನ್ನು ಅರಿತು ಇಲ್ಲಿನ ಪ್ರದೇಶಕ್ಕೆ ಅನುಕೂಲವಾಗುವಂತಹ ಸಹ್ಯಾದ್ರಿ ಪಂಚಮುಖಿ ತಳಿಯನ್ನು ಬ್ರಹ್ಮಾವರದ ಕೃಷಿ ಸಂಶೋಧನ ಕೇಂದ್ರದವರು ಅನ್ವೇಷಿಸಿದ್ದಾರೆ.

ಎಲ್ಲೆಲ್ಲಿ?
ಕುಂದಾಪುರ, ಬೈಂದೂರು ತಾಲೂಕಿನ ಸಿದ್ದಾಪುರ, ಗಂಗೊಳ್ಳಿ, ಅರಾಟೆ, ಹೆಮ್ಮಾಡಿ, ಮರವಂತೆ, ಬೆಳ್ವೆ, ಆರ್ಡಿ, ಅಲ್ಬಾಡಿ, ಹೈಕಾಡಿ, ಕಾಳಾವರ ಮತ್ತಿತರ ಪ್ರದೇಶಗಳಲ್ಲಿ ರೈತರು ಬೆಳೆದಿದ್ದಾರೆ. ಹೆಚ್ಚಿನವರು ಒಂದೆರಡು ಗದ್ದೆಗಳಲ್ಲಿ ಅಷ್ಟೇ ಬೆಳೆದಿದ್ದಾರೆ. ಈ ಬಾರಿಯ ಇಳುವರಿಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿಗೆ ಬೆಳೆಸುವ ಯೋಜನೆ ಹಾಕಿಕೊಂಡಿದ್ದಾರೆ ರೈತರು.

110 ದಿನಗಳಲ್ಲೇ ಫಸಲು
ಎಂ.ಒ.-4 ಭತ್ತದ ತಳಿಯು ನಾಟಿ ಮಾಡಿದ ಅನಂತರ ಸುಮಾರು 130 ರಿಂದ 135 ದಿನಗಳಲ್ಲಿ ಫಸಲು ಬಂದಿದ್ದರೆ, ಅದಕ್ಕೆ ಪರ್ಯಾಯವಾಗಿ ಬೆಳೆಸಿದ ಈ ಸಹ್ಯಾದ್ರಿ ಪಂಚಮುಖಿ ಭತ್ತದ ತಳಿಯು 110ರಿಂದ 120 ದಿನಗಳಲ್ಲಿಯೇ ಫಸಲು ಬಿಟ್ಟಿದೆ. 1 ಬುಡದಲ್ಲಿ 15ರಿಂದ 20 ಪೈರು ಬೆಳೆದಿವೆ. ಎಂ.ಒ.-4 ಗಿಂತ 4 ಇಂಚು ಎತ್ತರವಾಗಿ ಬೆಳೆದಿದೆ.

Advertisement

ಇದನ್ನೂ ಓದಿ:ಗೋವಾದಲ್ಲಿ ಚಾರ್ಟರ್ ವಿಮಾನಗಳು ಆರಂಭ: ಉತ್ತಮ ಪ್ರವಾಸಿ ಋತು ನಿರೀಕ್ಷೆ

ಉತ್ತಮ ಫಲಿತಾಂಶ
ನಮ್ಮ 2 ಸೆನ್ಸ್‌ ಗದ್ದೆಯೊಂದರಲ್ಲಿ ಈ ಸಹ್ಯಾದ್ರಿ ಪಂಚಮುಖಿ ಭತ್ತದ ತಳಿಯನ್ನು ಬೆಳೆದಿದ್ದೇನೆ. ಎಂ.ಒ.4 ಗಿಂತ ಉತ್ತಮ ಇಳುವರಿಯ ನಿರೀಕ್ಷೆಯಿದೆ. ಈಗಾಗಲೇ ಉತ್ತಮವಾಗಿ ಫಸಲು ಬಂದಿದೆ. ರೋಗಬಾಧೆ ಸಹ ಸ್ವಲ್ಪ ಮಟ್ಟಿಗೆ ಕಡಿಮೆಯಿದ್ದಂತೆ ಕಾಣುತ್ತಿದೆ. ಫಸಲು ಬೇಗ ಆದರೆ ಕಟಾವಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಆಗಬಹುದು. 1 ಸಾಲಿನಿಂದ ಇನ್ನೊಂದು ಸಾಲಿಗೆ 10 ಇಂಚು ಅಂತರ ಬಿಡಬೇಕು. ಒಂದೊಂದು ಗಿಡ ನೆಟ್ಟಿದ್ದು, ಈಗ 15-20 ಗಿಡಗಳು ಒಂದು ಬುಡದಲ್ಲಿ ಬಂದಿದೆ.
– ಕೃಷ್ಣ ನಾಯ್ಕ ಬೆಳ್ವೆ, ಕೃಷಿಕರು

ಪ್ರಾಯೋಗಿಕ ಪ್ರಯತ್ನ
ಕುಂದಾಪುರ ಭಾಗದ ಹಲವು ಮಂದಿ ರೈತರು ಈ ಸಹ್ಯಾದ್ರಿ ಭತ್ತದ ತಳಿಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವ ಸಲುವಾಗಿ ಬೆಳೆದಿದ್ದಾರೆ. ಹೆಚ್ಚು ಎತ್ತರ ಬೆಳೆಯುವುದರಿಂದ ಭತ್ತದ ಪೈರುಗಳು ಗಾಳಿಗೆ ಗದ್ದೆಗೆ ಬಾಗಿ, ಮಲಗಿದೆ. ಈವರೆಗೆ ಉತ್ತಮ ಫಸಲು ಬಂದಿದ್ದು, ಒಳ್ಳೆಯ ಇಳುವರಿಯ ನಿರೀಕ್ಷೆಯೂ ಇದೆ. ಒಂದು ಎಕರೆಗೆ 20 ಕ್ವಿಂಟಾಲ್‌ ಇಳುವರಿ ನಿರೀಕ್ಷೆಯಿದೆ. ನೆರೆ ಹಾವಳಿಗೂ ಇದು ಸಹಕಾರಿ. ಮಲೆನಾಡು, ಕರಾವಳಿಗೆ ಹೆಚ್ಚು ಸೂಕ್ತ.
– ಚೇತನ್‌, ತಾ| ಕೃಷಿ ಅಧಿಕಾರಿ,
ಎಸ್‌ಕೆಡಿಆರ್‌ಡಿಪಿ

Advertisement

Udayavani is now on Telegram. Click here to join our channel and stay updated with the latest news.

Next