Advertisement

ಸಾಹಿತ್ಯ ಪರಿಷತ್‌ ಚುನಾವಣೆಗೆ ಅಖಾಡ ಸಜ್ಜು

05:57 PM Apr 16, 2021 | Team Udayavani |

ಕಲಬುರಗಿ: ಕನ್ನಡ ನಾಡು, ನುಡಿ ಅಭಿವೃದ್ಧಿಗೆ ಶ್ರಮಿಸುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಅಧ್ಯಕ್ಷ ಸ್ಥಾನದ ಚುನಾವಣೆ ಐದು ವರ್ಷಗಳ ನಂತರ ನಡೆಯುತ್ತಿದ್ದು, ಐವರು ಸ್ಪರ್ಧಿಸಿದ್ದರಿಂದ ಚುನಾವಣಾ ಕಣ ರಂಗೇರಿದೆ. ಕಳೆದ ಆರು ತಿಂಗಳಿನಿಂದಲೇ ಸ್ಪರ್ಧಾ ಅಭ್ಯರ್ಥಿಗಳು ಚುನಾವಣೆಗೆ ಸಿದ್ಧತೆ ಮಾಡಿ ಕೊಂಡಿದ್ದು, ಸ್ಪರ್ಧಾ ಅಭ್ಯರ್ಥಿಗಳೆಲ್ಲರೂ ಪ್ರತಿಷ್ಠೆ ಒರೆಗೆ ಹಚ್ಚಿದ್ದರಿಂದ ಹಾಗೂ ರಾಜಕೀಯ ಕ್ಷೇತ್ರದ ಚುನಾವಣೆ ಮೀರಿಸುವ ಮಟ್ಟಿಗೆ ಪೈಪೋಟಿ ಏರ್ಪಟ್ಟಿದ್ದರಿಂದ ಮೇ. 9ರಂದು ನಡೆಯುವ ಚುನಾವಣೆ ಎದುರು ನೋಡುವಂತಾಗಿದೆ.

Advertisement

ಪರಿಷತ್‌ ಹಾಲಿ ಅಧ್ಯಕ್ಷ ವೀರಭದ್ರ ಸಿಂಪಿ, ಪರಿಷತ್‌ ಮಾಜಿ ಗೌರವ ಕಾರ್ಯದರ್ಶಿ ಬಿ.ಎಚ್‌. ನಿರಗುಡಿ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ , ಬರಹಗಾರ ವಿಶ್ವನಾಥ ಭಕ್ರೆ, ಹೋರಾಟಗಾರ ಎ.ಬಿ. ಹೊಸಮನಿ ಕಣದಲ್ಲಿರುವ ಹುರಿಯಾಳುಗಳು. ಸ್ಪರ್ಧಾ ಅಭ್ಯರ್ಥಿಗಳು ಈಗಾಗಲೇ ಮತದಾರರ ಬಳಿ ಒಂದೆರಡು ಸಲ ಹೋಗಿ ಬಂದಿದ್ದಾರೆ. ಕಳೆದ ಸಲಕ್ಕಿಂತ ಈ ಬಾರಿ ಮತದಾರರ ಸಂಖ್ಯೆ 4600ಕ್ಕೆ ಹೆಚ್ಚಳವಾಗಿದೆ.

ಈಗ ಒಟ್ಟಾರೆ ಕಸಾಪದಲ್ಲಿ 16619 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ತಾವು ಮಾಡಿದ ಕೆಲಸಗಳನ್ನು ನೋಡಿ ಪುನರ್‌ ಆಶೀರ್ವದಿಸಿ ಎಂದು ಈಗಾಗಲೇ ಮೂರು ಸಲ ಅಧ್ಯಕ್ಷರಾಗಿರುವ ಸಿಂಪಿ ಮತದಾರರಲ್ಲಿ ವಿನಂತಿಸುತ್ತಿದ್ದರೆ, ಉಪನ್ಯಾಸಕ, ಯುವ ಸಾಹಿತಿಯಾಗಿರುವ ಬಿ.ಎಚ್‌. ನಿರಗುಡಿ ತಮ್ಮದೇಯಾದ ಕನ್ನಡಾಭಿವೃದ್ಧಿಯ ಸಂಕಲ್ಪಗಳನ್ನು ಮುಂದಿಟ್ಟು ಸಾಹಿತಿಗಳ ಮನಗೆಲ್ಲಲು ಕಸರತ್ತು ನಡೆಸುತ್ತಿದ್ದಾರೆ. ಸತತ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮುನ್ನಡೆದು ಬರುತ್ತಿರುವ ವಿಜಯಕುಮಾರ ತೇಗಲತಿಪ್ಪಿ ತಮ್ಮದೇಯಾದ ತಂಡದೊಂದಿಗೆ ಮತದಾರರ ಮನ ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಹೋರಾಟಗಾರ ಎ.ಬಿ. ಹೊಸಮನಿ ಹಾಗೂ ಬರಹಗಾರ ವಿಶ್ವನಾಥ ಭಕರೆ ತಮ್ಮದೇಯಾದ ಸಾಹಿತ್ಯ ಸೇವೆ ಹಾಗೂ ಹೋರಾಟದ ನೆಲೆಗಟ್ಟಿನಲ್ಲಿ ಮತಯಾಚಿಸುತ್ತಿದ್ದಾರೆ.

ಸಾಹಿತ್ಯ ಸೇವೆ ಜತೆಗೆ ಮತ್ತಿತರ ವಿಷಯ ಚಾಲ್ತಿಗೆ:
ಸಾಹಿತ್ಯ ಪರಿಷತ್‌ ಸೇವೆ ಜಾತಿ, ಧರ್ಮ ಮೀರಿದ್ದಾಗಿದೆ. ಆದರೆ ಈ ಸಲದ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜಾತಿ ವಿಷಯ ಮೆಲ್ಲಗೆ ನುಸುಳಿರುವುದು ಸಾಹಿತ್ಯ ವಲಯದಲ್ಲಿ ತೀವ್ರ ಮಟ್ಟಿಗೆ ಚರ್ಚೆಯಾಗುತ್ತಿದೆ. ರಾಜಕೀಯ ಕ್ಷೇತ್ರದ ಚುನಾವಣೆಯಂತೆ ಇಲ್ಲೂ ಜಾತಿಯತೆ ಕುರಿತು ಒಂದು ಶಬ್ದವೂ ಸುಳಿಯಬಾರದು ಎಂಬುದು ಸಾಹಿತಿಗಳ ಅಭಿಪ್ರಾಯ ಹಾಗೂ ಕಾಳಜಿಯಾಗಿದೆ.

ಆಗಬೇಕಾಗಿದ್ದೇನು?: ಕಾರ್ಯಕ್ರಮಗಳಿಗಿಂತ ಸಾಹಿತ್ಯ ಬೆಳವಣಿಗೆ ಪೂರಕ ವಾತಾವರಣ ನಿರ್ಮಾಣವಾಗುವುದು ಅಗತ್ಯವಾಗಿದೆ. ಅಂದರೆ ಯುವಕರಲ್ಲಿ ಬರವಣಿಗೆ ಆಸಕ್ತಿ ಹೆಚ್ಚಿಸುವ ಆಂದರೆ ಬರವಣಿಗೆ ಕೌಶಲ್ಯ ಹೆಚ್ಚಿಸುವ ವಾತಾವರಣ ನಿರ್ಮಿಸುವುದರ ಜತೆಗೆ ಗಡಿ ನಾಡಲ್ಲಿ ಕನ್ನಡಕ್ಕೆ ಆಗುತ್ತಿರುವ ಹಿನ್ನೆಡೆ ಹೊಡೆದೊಡಿಸುವ ಕಾರ್ಯವಾಗಬೇಕಿದೆ. ಇದರತ್ತ ಗಮನ ಕೊಡುವುದು ಅತ್ಯವಶ್ಯಕ ಎನ್ನುತ್ತಾರೆ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು. ಒಂದು ವೇಳೆ ಕೊರೊನಾ ಹತೋಟಿ ಕೈ ಮೀರಿ ಚುನಾವಣೆ ಮೇಲೆ ಕರಿನೆರಳು ಬೀರಿದರೆ? ಎನ್ನುವ ಆತಂಕ ಕಾಡುತ್ತಿದೆ. ಒಟ್ಟಾರೆ ಕನ್ನಡ ತಾಯಿ ಸೇವೆ ಸಲ್ಲಿಸುವ ಈ ಚುನಾವಣೆ ಹತ್ತಾರು ದಿಕ್ಕಿಗೂ ವ್ಯಾಪಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮತದಾನಕ್ಕಾಗಿ ಎಲ್ಲ ತಾಲೂಕುಗಳಲ್ಲಿ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ನಗರದ ಸೂಪರ್‌ ಮಾರ್ಕೆಟ್‌ನ ಎಂಪಿಎಚ್‌ಎಸ್‌ದಲ್ಲಿ 10 ಮತಗಟ್ಟೆಗಳು ಸೇರಿ ಜಿಲ್ಲೆಯಲ್ಲಿ 23 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಒಟ್ಟಾರೆ ಚುನಾವಣೆಯನ್ನು ಕೋವಿಡ್‌ ನಿಯಂತ್ರಣ ನಿಯಮಾವಳಿಯೊಂದಿಗೆ ನಡೆಸಲಾಗುವುದು.
ಪ್ರಕಾಶ ಕುದರಿ,
ಸಹಾಯಕ ಚುನಾವಣಾಧಿಕಾರಿ
ಹಾಗೂ ತಹಶೀಲ್ದಾರ, ಕಲಬುರಗಿ

ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹಾಗೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ತಂದಿದ್ದಲ್ಲದೇ ಸುವರ್ಣ ಭವನ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಕೈಗೊಂಡಿರುವುದನ್ನು ಮುಂದಿಟ್ಟುಕೊಂಡು ಹಾಗೂ ಮತದಾರರ ಅಭಿಲಾಷೆ ಮೇರೆಗೆ ಮತ್ತೆ ಹೊಸ ಉತ್ಸಾಹದೊಂದಿಗೆ ಕಣಕ್ಕೆ ಇಳಿದಿದ್ದೇನೆ.
ವೀರಭದ್ರ ಸಿಂಪಿ, ಕಸಾಪ ಅಧ್ಯಕ್ಷ

ಹೊಸ ಕಲ್ಪನೆ ಹಾಗೂ ಕನ್ನಡ ಭವನಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಕಳೆದ ಸಲ ಎರಡನೇ ಸ್ಥಾನಕ್ಕೆ ಬಂದು ಸೋತಿದ್ದೇನೆ. ಹೀಗಾಗಿ ಎಲ್ಲ ಮತದಾರರ ಹಾಗೂ ಹಿರಿಯ ಸಾಹಿತಿಗಳ ವಿಶ್ವಾಸದೊಂದಿಗೆ ಕಣಕ್ಕೆ ಇಳಿಯಾಗಿದೆ. ಈ ಸಲ ಮತದಾರರು ಗೆಲ್ಲಿಸುತ್ತಾರೆಂಬ ದೃಢ ವಿಶ್ವಾಸ ಹೊಂದಲಾಗಿದೆ.
ವಿಜಯಕುಮಾರ ತೇಗಲತಿಪ್ಪಿ, ಅಭ್ಯರ್ಥಿ

ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಭವನ ಸಾಹಿತಿಗಳಿಂದ ಕೂಡಿರಬೇಕು. ಈಗಾಗಲೇ ತಾವು ಕೈಗೊಂಡಿರುವ ಸಾಹಿತ್ಯದ ಅಮೋಘ ಕಾರ್ಯಕ್ರಮಗಳು ಎಲ್ಲರಿಗೂ ಹಿಡಿಸಿವೆಯಲ್ಲದೇ ಮಾದರಿಯಾಗಿವೆ. ಹೊಸ ಹುಮ್ಮಸ್ಸು, ನೂತನ ಯೋಜನೆಗಳೊಂದಿಗೆ ಅಖಾಡಕ್ಕೆ ಧುಮುಕಲಾಗಿದೆ.
ಬಿ.ಎಚ್‌. ನಿರಗುಡಿ, ಅಭ್ಯರ್ಥಿ

*ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next