ಆಳಂದ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಬಂಡವಾಳ ಶಾಹಿಗಳಿಗಾಗಿ ರೈತರ ಭೂಮಿ ಮತ್ತು ನೀರು ಕಸಿಯಲು ದೊಡ್ಡಮಟ್ಟದ ಪ್ರಯತ್ನ ಮಾಡಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದರು.
ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಮಟ್ಟದ ಏಳನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ರೈತಪರ ಸಂಘಟನೆಗಳ ಹೋರಾಟದ ಫಲವಾಗಿ ಮೋದಿ ಅವರ ಬಂಡವಾಳ ಶಾಹಿಪರ ಧೋರಣೆ ಹಿಮ್ಮೆಟ್ಟಿದೆ.
ಇಷ್ಟಕ್ಕೂ ಮೋದಿ ಅವರು ಸಮ್ಮನಾಗದೆ ವಿದೇಶಗಳಿಂದ ಬೇಳೆಕಾಳು, ಎಣ್ಣೆ ಹಾಗೂ ದವಸ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ದೇಶಿ ಆಹಾರ ಧಾನ್ಯಗಳ ಬೆಲೆ ಕುಸಿದು ಹೋಗಿದೆ. ಇಲ್ಲಿನ ರೈತರ ಸ್ಥಿತಿಗತಿ ಸಂಕಷ್ಟಕ್ಕೊಳಗಾಗಿದೆ ಎಂದು ಹೇಳಿದರು. ತೊಗರಿ ಖರೀದಿಗೆ ಏ.15ರ ಗಡುವು ನೀಡಿದ್ದು ಸರಿಯಲ್ಲ.
ಇನ್ನೂ ಸಾಕಷ್ಟು ಪ್ರಮಾಣದಲ್ಲಿ ರೈತರ ತೊಗರಿ ಮಾರಾಟ ಬಾಕಿಯಿರುವುದರಿಂದ ಎಲ್ಲ ರೈತರ ತೊಗರಿ ಖರೀದಿ ಆಗಲೇಬೇಕು ಎಂದು ಒತ್ತಾಯಿಸಿದರು.ರೈತಪರ ಬೇಡಿಕೆ ಮುಂದಿಟ್ಟುಕೊಂಡು ಕಲಬುರಗಿಯಲ್ಲಿ 20ರಿಂದ ಎರಡು ದಿನ ಜಿಲ್ಲಾ ಮಟ್ಟದ ಸಮ್ಮೇಳನ ಹಾಗೂ ಹುಬ್ಬಳಿಯಲ್ಲಿ ಏ.25ರಿಂದ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಸಮ್ಮೇಳನ ನಡೆಯಲಿದೆ.
ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರ ಮುಖಂಡರು ರೈತರು ಪಾಲ್ಗೊಳ್ಳಬೇಕು ಎಂದು ಮಾನ್ಪಡೆ ಅವರು ಹೇಳಿದರು. ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ತಾಲೂಕು ಅಧ್ಯಕ್ಷ ಪ್ರಕಾಶ ಜಾನೆ ಮಾತನಾಡಿ, ತೊಗರಿಗೆ 7500 ರೂ. ಬೆಂಬಲ ಬೆಲೆ ನೀಡಬೇಕು ಹಾಗೂ ಸ್ಥಿರ ಬೆಲೆ ಕಾಯ್ದೆ ಅಡಿಯಲ್ಲಿ ಖರೀದಿ ಕೇಂದ್ರ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಮಾವೀನಕರ್ ಮಾತನಾಡಿ, ರೈತರ ಆತ್ಮಹತ್ಯೆ ತಡೆಗೆ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಪಡೆದ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಪ್ರಮುಖ ಮಧುಮತಿ, ಕಲ್ಯಾಣಿ ಹಿರೋಳಿ, ಸಾಯಬಣ್ಣ ಕವಲಗಾ, ರೈತ ಮುಖಂಡ ಸೋಮಶೇಖರ ಮುದ್ದಡಗಾ, ವೀರಭದ್ರಪ್ಪ ಕಲಬುರಗಿ, ಆನಂದರಾವ ಶಿರೂರೆ, ಶ್ರೀಮಂತ ನವಲೆ, ಅಂಬಾಜಿ ಮಾನೆ, ಅಲ್ತಾಫ್ ಮುಲ್ಲಾ ಇದ್ದರು. ಕಲ್ಯಾಣಿ ತುಕಾಣಿ ಕಾರ್ಯಕ್ರಮ ನಿರೂಪಿಸಿದರು.