Advertisement

ಮನರಂಜನೆ ಲೆಸ್‌, ಮನೋರಂಜನ್‌ ಫ‌ುಲ್‌!

04:29 PM Aug 27, 2017 | |

ಚಿತ್ರ: ಸಾಹೇಬ  ನಿರ್ಮಾಣ: ಜಯಣ್ಣ ಮತ್ತು ಭೋಗೇಂದ್ರ, ನಿರ್ದೇಶನ: ಭರತ್‌
ಒ ತಾರಾಗಣ: ಮನೋರಂಜನ್‌, ಶಾನ್ವಿ ಶ್ರೀವಾತ್ಸವ್‌, ಜ್ಯೂಲಿ ಲಕ್ಷ್ಮೀ, ಪ್ರಮೀಳಾ ಜೋಷಾಯ್‌, ಚಿದಾನಂದ್‌ ಇತರರು.

Advertisement

“ಅಮ್ಮ ಅವಳು ನನಗೆ ಬೇಕು…’ – ಪ್ರೀತಿಯ ಮಗ ಆಮ್ಮನ ಮಡಿಲಲ್ಲಿ ಮಲಗಿ ಹೀಗೆ ಹೇಳುತ್ತಿದ್ದಂತೆಯೇ, ಆ ಅಮ್ಮನ ಮೊಗದಲ್ಲಿ ಮಂದಹಾಸ. ಅಷ್ಟೇ ಯಾಕೆ, ಮಗ “ಅವಳು ಬೇಕು’ ಅಂದಾಗ, ಆ ಪದಕೆ ಏನು ಹೆಸರಿಡಬೇಕೋ ಅನ್ನೋ ಗೊಂದಲದಲ್ಲೇ ಮಗನ ತಲೆ ಸವರಿ, ಹಾಗೊಂದು ಮಮತೆಯ ನಗು ಬೀರುತ್ತಾಳಷ್ಟೇ. ಅವನು, ಅವಳು ನನಗೆ ಬೇಕು ಅಂತ ಹೇಳುವ ಹೊತ್ತಿಗಾಗಲೇ, ಏನೂ ಇಲ್ಲದ ಆ ಹುಡುಗಿ ನೋಡ ನೋಡುತ್ತಲೇ ಬಹು ಎತ್ತರಕ್ಕೆ ಬೆಳೆದಿರುತ್ತಾಳೆ. ಆಕೆ ಅವನಿಗೆ ಸಿಗುತ್ತಾಳ್ಳೋ, ಇಲ್ಲವೋ ಅನ್ನೋದೇ “ಸಾಹೇಬ’ನ ಕಥೆ.

ಇದು ರವಿಚಂದ್ರನ್‌ ಪುತ್ರ ಮನೋರಂಜನ್‌ ಅವರ ಚೊಚ್ಚಲ ಚಿತ್ರ. ಹಾಗಂತ, “ಸಾಹೇಬ’ರು ಡಿಫ‌ರೆಂಟ್‌ ಅಂತ ಬಹು ನಿರೀಕ್ಷೆ ಇಟ್ಟುಕೊಂಡರೆ, ಆ ಊಹೆ ತಪ್ಪು. ಇಲ್ಲೊಂದು ಚೆಂದದ ಕಥೆ ಇದೆ. ಆದರೆ, ಅದನ್ನು ಪರಿಪೂರ್ಣವಾಗಿ ಉಣಬಡಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಒಂದು ಮುದ್ದಾದ ಪ್ರೇಮಕಥೆಯನ್ನು ಇನ್ನಷ್ಟು ಚೆನ್ನಾಗಿ ಹೇಳುವ ಮತ್ತು
ತೋರಿಸುವ ಅವಕಾಶವನ್ನು ಕೈ ಚೆಲ್ಲಿದ್ದಾರೆ.

ಇಲ್ಲಿ “ಮನರಂಜನೆ’ ಕಾಣದಿದ್ದರೂ, ಮನೋರಂಜನ್‌ ಅವರು ಎದ್ದು ಕಾಣುತ್ತಾರೆ. ಮಾಡಿರುವ ಪಾತ್ರದ ಮೂಲಕ “ಡೀಸೆಂಟ್‌’ ಎನಿಸಿಕೊಳ್ಳುತ್ತಾರೆ ಅನ್ನೋದೇ ವಿಶೇಷ. ಇಡೀ ಚಿತ್ರದ ಕಥೆ ನಾಯಕನ ಸುತ್ತವೇ ಗಿರಕಿಹೊಡೆಯುವುದರಿಂದ ಮನರಂಜನೆಗಿಂತ ಮನೋರಂಜನ್‌ ಅವರ ಸಹಜ ನಟನೆ, ಡ್ಯಾನ್ಸು ಹಾಗು ಫೈಟು ನೋಡುಗರನ್ನು ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ.

ಸ್ಟಾರ್‌ ಮಗ ಎಂಬ ಕಾರಣಕ್ಕೆ ಇಲ್ಲಿ ವಿನಾಕಾರಣ, ಬಿಲ್ಡಪ್‌ಗ್ಳಾಗಲಿ, ಉದ್ದುದ್ದ ಸಂಭಾಷಣೆಗಳಾಗಲಿ, ಪಂಚಿಂಗ್‌ ಡೈಲಾಗ್‌ ಗಳಾಗಲಿ, ಎರ್ರಾಬಿರ್ರಿ ಆ್ಯಕ್ಷನ್‌ ಆಗಲಿ ಇಲ್ಲ. ಆದರೆ, ನಿರೂಪಣೆಯಲ್ಲಿ ಒಂದಷ್ಟು ಬಿಗಿ ಹಿಡಿತ ಇಟ್ಟುಕೊಂಡು, ವೇಗಮಿತಿ ಕಡೆ ಗಮನಹರಿಸಿದ್ದರೆ, “ಸಾಹೇಬ’ರನ್ನು ಮನಸಾರೆ ಬಿಗಿದಪ್ಪಿಕೊಳ್ಳಬಹುದಿತ್ತು! ಚಿತ್ರದಲ್ಲಿನ ಲೊಕೇಷನ್‌ಗೆ ಕೊಟ್ಟಷ್ಟು ಒತ್ತು, ಮೇಕಿಂಗ್‌ ಕಡೆ ಕೊಟ್ಟಿದ್ದರೆ, “ಸಾಹೇಬ’ ಮತ್ತಷ್ಟು ಕಲರ್‌ಫ‌ುಲ್‌ ಆಗಿ ಕಾಣುತ್ತಿದ್ದನೇನೋ? ಚಿತ್ರದ ಕಥೆಯಲ್ಲಿ ಫೋರ್ಸ್‌ ಇರದಿದ್ದರೂ, ಚಿತ್ರದೊಳಗಿನ ಕೆಲ ಪಾತ್ರಗಳಲ್ಲಿ ವಿಶೇಷತೆಗಳಿವೆ, ಆಸೆ, ಕನಸು, ಪ್ರೀತಿ, ಗೆಳೆತನ, ವ್ಯಕ್ತಿತ್ವ, ಸೆಂಟಿಮೆಂಟ್‌ ಜತೆಗೆ ಅಲ್ಲಲ್ಲಿ ಬರುವ ಟೆಸ್ಟು ಮತ್ತು ಟ್ವಿಸ್ಟು ಚಿತ್ರದ ಹೈಲೈಟು. ಕೆಲವು ಕಡೆ ಸಣ್ಣಪುಟ್ಟ ತಪ್ಪುಗಳು ಕಂಡರೂ, ಅವೆಲ್ಲವೂ ಕಾಣಸಿಗುವ ಹಾಡುಗಳ ಮೂಲಕ ಮರೆಯಾಗುತ್ತವೆ. ಇನ್ನು, ಸಂಭಾಷಣೆ ವಿಷಯಕ್ಕೆ ಬಂದರೆ, ಕೆಲವು ಕಡೆ ಅದು ಬೇಕಿತ್ತಾ ಎನಿಸುವುದುಂಟು. ಸರಿ, ತಪ್ಪುಗಳಿದ್ದರೂ, ಒಂದೊಮ್ಮೆ ಡೀಸೆಂಟ್‌ “ಸಾಹೇಬ’ರನ್ನು ಕಣ್ತುಂಬಿಕೊಳ್ಳಲ್ಲಡ್ಡಿಯಿಲ್ಲ.

Advertisement

ಮನು (ಮನೋರಂಜನ್‌)ಗೆ ಪ್ರಪಂಚ ಸುತ್ತೋದು, ವರ್ಲ್ಡ್ ಸಿನಿಮಾ ನೋಡೋದು, ಮಕ್ಕಳ ಜೊತೆ ಆಡಿ, ಹರಟುವುದೆಂದರೆ ಇಷ್ಟ. ಎಲ್ಲಾ ಇದ್ದರೂ, ಅದೆಲ್ಲ ಬಿಟ್ಟು, ಏಕಾಂತ ಕಾಣಲು ಆಗಾಗ ದನ, ಕುರಿ ಕಾಯೋದೂ ಅವನಿಗಿಷ್ಟ! ಅವನಿಗೆ ಶಾಲೆ ಓದುವುದು ಇಷ್ಟವಿಲ್ಲ. ಆದರೆ, ಚಿಕ್ಕಂದಿನಿಂದ ಸಿಕ್ಕ ಸಿಕ್ಕ ಪುಸ್ತಕ ಓದುತ್ತಲೇ ಒಂದು ಪುಸ್ತಕ ಅಂಗಡಿ ಇಟ್ಟುಕೊಂಡು ಬದುಕು ಕಟ್ಟಿಕೊಂಡವನು. ಅಂದುಕೊಂಡಿದ್ದನ್ನು ಸಾಧಿಸು  ಛಲ ಅವನದು. ಅಂತಾ ಹೊತ್ತಲ್ಲಿ, ನಂದಿನಿ (ಶಾನ್ವಿ) ಎಂಬ ಮಹಾನ್‌ ದೈವಭಕ್ತೆಯೊಬ್ಬಳು ಕಣ್ಣಿಗೆ ಬೀಳುತ್ತಾಳೆ. ಅವಳನ್ನು ಗೊತ್ತಿಲ್ಲದ ಹಾಗೇ ಪ್ರೀತಿಸುವ ಮನು, ಅವಳಿಗೂ ಗೊತ್ತಾಗದಂತೆ, ಅವಳನ್ನು ಎತ್ತರಕ್ಕೆ ಬೆಳೆಸುವ ಕನಸು ಕಾಣುತ್ತಾನೆ.

ಹಂತ ಹಂತವಾಗಿ, ಅವಳ ಬೆನ್ನ ಹಿಂದೆ ನಿಂತು, ಅವಳನ್ನು ದೊಡ್ಡ ಸಿನಿಮಾ ನಟಿ ಆಗಿಸುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ, ಅಷ್ಟೊಂದು ಎತ್ತರಕ್ಕೆ ಬೆಳೆದ ಆಕೆಗೆ ಮನು ಯಾರು ಅನ್ನೋದೇ ಗೊತ್ತಿಲ್ಲ!. ಅದಾಗಲೇ, ಮನುಗೆ ನಂದಿನಿ ಮೇಲೆ ಪ್ರೀತಿ ಹುಟ್ಟಿರುತ್ತೆ. ಒಂದು ಹಂತದಲ್ಲಿ ಮನು ಜೊತೆಗಿದ್ದರೂ, ಅವನನ್ನು ಬೇಜವಾಬ್ದಾರಿಯಿಂದ ನೋಡುವ ನಂದಿನಿಗೆ, ಒಮ್ಮೆ ತಾನು ಈ ಮಟ್ಟಕ್ಕೆ ಬೆಳೆಯಲು ಮನು ಕಾರಣ ಅಂತ ಗೊತಾಗುತ್ತೆ. ಆಮೇಲೆ ಮನುಗೆ ಆಕೆ ಸಿಗುತ್ತಾಳ್ಳೋ, ಇಲ್ಲವೋ ಎಂಬುದು ಸಸ್ಪೆನ್ಸ್‌. ಆ ಕುತೂಹಲವಿದ್ದರೆ, ಸಿನಿಮಾ ನೋಡಬಹುದು. ಮನೋರಂಜನ್‌ ಸೂಕ್ತ ತಯಾರಿಯೊಂದಿಗೇ ಬಂದಿದ್ದಾರೆ. ಕೆಲ ಡೈಲಾಗ್‌, ಬಾಡಿಲಾಂಗ್ವೇಜ್‌ನಲ್ಲಿ ಥೇಟ್‌ ಅಪ್ಪನಂತೆ ಕಂಡರೂ, ಇಲ್ಲಿ ಡ್ಯಾನ್ಸ್‌ ಹಾಗೂ ಫೈಟ್‌ನಲ್ಲಿ ಬಲು ಇಷ್ಟವಾಗುತ್ತಾರೆ.

ನಟನೆಯಲ್ಲಿ ಇನ್ನಷ್ಟು ಪಕ್ವತೆ ಬೇಕಿತ್ತು. ಹರಿಬಿಡುವ ಮಾತುಗಳಲ್ಲಿ ಸ್ವಲ್ಪ ಸ್ಪಷ್ಟತೆ ನೋಡಿಕೊಳ್ಳಬೇಕಿದೆ.
ಮತ್ತೆ ಬಳಕೆಯಾಗಿರುವ “ಯಾರೇ ನೀನು ರೋಜಾ ಹೂವೇ’ ಹಾಡಲ್ಲಿ ಅಪ್ಪನ ಹಾಗೆಯೇ ಹುಡುಗಿಯರ ಜತೆ ಸ್ಟೆಪ್‌ ಹಾಕಿರೋದು ಖುಷಿ ಕೊಡುತ್ತೆ. ಇನ್ನು, ಮೊದಲ ಸಿನಿಮಾವಾದರೂ, ಹಾಗನಿಸದಂತೆ ಕುಣಿದು, ಕುಪ್ಪಳಿಸಿರುವುದೇ ಹೈಲೈಟ್‌. ಒಟ್ಟಾರೆ ಅವರಿಗೆ ಇದೊಂದು ಡೀಸೆಂಟ್‌ ಡೆಬ್ಯೂಟ್‌ ಸಿನಿಮಾ ಆಗಿದೆಯಷ್ಟೆ. ಇನ್ನು, ಶಾನ್ವಿ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಲಕ್ಷ್ಮೀ, ಚಿದಾನಂದ್‌, ಪ್ರಮೀಳಾ ಜೋಷಾಯ್‌ ಹಾಗು ಬರುವ ಇತರೆ ಪಾತ್ರಗಳು ಗಮನಸೆಳೆಯುತ್ತವೆ. ಹರಿಕೃಷ್ಣ ಅವರ ಸಂಗೀತದಲ್ಲಿ “ಸಾಹೇಬ’ ಹಾಡೊಂದು ನೆನಪಲ್ಲುಳಿಯುವಂತಿದೆ. ಸೀತಾರಾಮ್‌ ಅವರ ಕ್ಯಾಮೆರಾ ಕೈಚಳಕದಲ್ಲಿ “ಸಾಹೇಬ’ ಶ್ರೀಮಂತ.

 ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next