ಪೇಟೆಯಲ್ಲಿದ್ದ ಅಜ್ಜನ ಮನೆಯಿಂದ ಸುಮಾರು ಹದಿನೇಳು ಕಿ. ಮೀ. ದೂರದಲ್ಲಿ ಶಾಲ್ಮಲಾ ನದಿಯಲ್ಲಿ ಕಾಣುವ ಸಹಸ್ರಲಿಂಗಗಳು ಎಂದರೆ ಮಕ್ಕಳಾಗಿದ್ದ ನಮಗೆ ಆಕರ್ಷಣೆ. ಬೇಸಿಗೆಯಲ್ಲಿ ನೀರು ಕಡಿಮೆ ಇದ್ದಾಗ ಅಲ್ಲಲ್ಲಿ ಬಂಡೆಯ ಮೇಲೆ ಕುಳಿತು ಲಿಂಗಗಳನ್ನು ಲೆಕ್ಕ ಮಾಡುವುದು ಆಟವಾಗಿತ್ತು. ಯಾರು, ಯಾಕೆ ಕಟ್ಟಿಸಿದರು ಎಂಬ ನಮ್ಮ ಪ್ರಶ್ನೆಗೆ, ಬಹಳ ಹಿಂದೆ ಶಿರಸಿಯ ರಾಜನಾಗಿದ್ದ ಸದಾಶಿವರಾಯ ತನಗೆ ಸಂತಾನ ಭಾಗ್ಯ ದೊರೆಯಲಿ ಎಂಬ ಕಾರಣಕ್ಕೆ ಇಷ್ಟು ಲಿಂಗಗಳನ್ನು ಕೆತ್ತಿಸಿದನಂತೆ ಎಂದು ಅಜ್ಜ ಹೇಳುತ್ತಿದ್ದರು. ಶಿವರಾತ್ರಿಯಂದು ಅಲ್ಲಿಗೆ ಹೋಗಿ ಪೂಜೆ ಮಾಡಿದರೆ ಪುಣ್ಯ ಎಂಬ ನಂಬಿಕೆ ಇದ್ದಿದ್ದರಿಂದ ದೂರದೂರದಿಂದ ಪ್ರವಾಸಿಗರು ಸೇರುತ್ತಿದ್ದರು. ಈಗ ತೂಗು ಸೇತುವೆ ಹೊಂದಿರುವ ಸಹಸ್ರಲಿಂಗ, ಶಿರಸಿಯ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಅದು ಶಿರಸಿ, ಇದು ಸಾವಿರಾರು ಮೈಲಿ ದೂರದಲ್ಲಿರುವ ಕಾಂಬೋಡಿಯಾದ ಸಿಯಾಮ್ ರೀಪ್. ಇಲ್ಲಿಯೂ ಸಹಸ್ರಲಿಂಗವೆ! ಎಂದು ಆಶ್ಚರ್ಯವಾಯಿತು. ನೋಡುವ ಕುತೂಹಲವೂ ಮೂಡಿತು.
Advertisement
ಇರುವುದೆಲ್ಲಿ?ಕುಲೆನ್ ಬೆಟ್ಟಗಳ ಇಳಿಜಾರಿನಲ್ಲಿ, ಸ್ಟಂಗ್ ಕ್ಬಾಲ್ ಸ್ಪೀನ್ ನದಿಯಲ್ಲಿ ಕಂಡು ಬರುವ ಸುಮಾರು ನೂರಾಐವತ್ತು ಮೀ. ಜಾಗದಲ್ಲಿ ಈ ಸಹಸ್ರ ಲಿಂಗಗಳು ಕಂಡುಬರುತ್ತವೆ. ಕ್ಬಾಲ್ ಸ್ಪೀನ್ ಎಂದರೆ ಸೇತುವೆಯ ತಲೆ ಎಂದರ್ಥ. ಈ ಸ್ಥಳದಲ್ಲಿರುವ ನಿಸರ್ಗನಿರ್ಮಿತ ಕಲ್ಲಿನ ಸೇತುವೆಯಿಂದ ಈ ಹೆಸರು ಬಂದಿದೆ. ಇದು ಸಿಯಾಮ್ ರೀಪ್ ನ ಮುಖ್ಯ ದೇವಸ್ಥಾನ ಆಂಗೋರ್‌ವಾಟ್‌ನಿಂದ ಸುಮಾರು ಇಪ್ಪತ್ತೈದು ಕಿಮೀ ದೂರದಲ್ಲಿದೆ. ಕಾಂಬೋಡಿಯಾದ ತುಂಬೆಲ್ಲಾ ಹಿಂದೂ ಸಂಸ್ಕೃತಿಯನ್ನು ಸಾರುವ ನೂರಾರು ದೇವಾಲಯಗಳಿದ್ದು ಬಹಳಷ್ಟು ಇನ್ನೂ ಬೆಳಕಿಗೆ ಬಂದಿಲ್ಲ ಎನ್ನಲಾಗುತ್ತದೆ. ಅದೇ ರೀತಿ ದಟ್ಟ ಕಾಡಿನ ನಡುವೆ ಹೊರಜಗತ್ತಿಗೆ ಅಪರಿಚಿತವಾಗಿದ್ದ ಈ ಸ್ಥಳವನ್ನು 1969ರಲ್ಲಿ ಜೀನ್ ಬಾಲೆºಟ್ ಎಂಬ ಅನ್ವೇಷಕ, ಯೋಗಿಯೊಬ್ಬನ ನೆರವಿನಿಂದ ಕಂಡುಹಿಡಿದ.
ಹನ್ನೊಂದು-ಹನ್ನೆರಡನೇ ಶತಮಾನದಲ್ಲಿ ಆಳಿದ ಅರಸರಾದ ಒಂದನೆಯ ಸೂರ್ಯವರ್ಮನ್ ಮತ್ತು ಎರಡನೆಯ ಉದಯಾದಿತ್ಯವರ್ಮನ್ ಈ ಲಿಂಗಗಳನ್ನು ಕೆತ್ತಿಸಿದರು ಎನ್ನಲಾಗುತ್ತದೆ. ರಾಜಾ ಎರಡನೇ ಉದಯಾದಿತ್ಯವರ್ಮನ್ ಇಲ್ಲಿ ಚಿನ್ನದ ಲಿಂಗವನ್ನು ಸ್ಥಾಪಿಸಿದ್ದ ಎನ್ನುವ ಮಾತೂ ಕೇಳಿಬರುತ್ತದೆ. ನದಿಯ ಹರಿಯುವಾಗ ಅದರ ತಳದಲ್ಲಿ ಮರಳುಗಲ್ಲುಗಳ ಮೇಲೆ ಸಾವಿರಾರು ಲಿಂಗಗಳನ್ನು ಕೆತ್ತಲಾಗಿದೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವರ ಕೆತ್ತನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಹಾಲ್ಗಡಲಿನಲ್ಲಿ ಅನಂತ ನಾಗನ ಮೇಲೆ ಮಲಗಿರುವ ಮಲಗಿರುವ ವಿಷ್ಣು ಮತ್ತು ಕಾಲ ಬಳಿ ಲಕ್ಷ್ಮೀ, ಉಮೆಯೊಂದಿಗಿರುವ ಶಿವ ಮತ್ತು ಪದ್ಮನಾಭನಿಂದ ಬ್ರಹ್ಮ ಮುಂತಾದ ಸುಂದರ ಕೆತ್ತನೆಗಳನ್ನು ನೀರಿನಲ್ಲಿ ಮತ್ತು ತಟದ ಇಕ್ಕೆಲಗಳ ಕಲ್ಲಿನಲ್ಲಿ ಕಾಣಬಹುದು.ಇದಲ್ಲದೆ ನಂದಿ, ಕಪ್ಪೆ, ಮೊಸಳೆ, ನಾಗ ಮುಂತಾದ ಪ್ರಾಣಿಗಳ ಉಬ್ಬು ಕೆತ್ತನೆಗಳನ್ನೂ ಅಲ್ಲಲ್ಲಿ ಕಾಣಬಹುದು. ಒಟ್ಟಿನಲ್ಲಿ ರಾಮಾಯಣದ ಹಲವು ದೇವ-ದೇವಿಯರು, ಚಿತ್ರ-ಕತೆಗಳನ್ನು ಒಳಗೊಂಡ ಶಿಲ್ಪ-ಕೆತ್ತನೆಗಳು ಇಲ್ಲಿವೆ.
Related Articles
ಚಿಕ್ಕ ಜಲಪಾತದಿಂದ ಧುಮುಕಿ ಹರಿವ ನೀರು ಈ ಸಾವಿರ ಲಿಂಗಗಳ ಮೇಲೆ ಹರಿಯುತ್ತಿದ್ದಂತೆ ಅದಕ್ಕೆ ವಿಶೇಷ ಶಕ್ತಿ ಲಭ್ಯವಾಗುತ್ತದೆ ಎಂದು ನಂಬಲಾಗುತ್ತದೆ. ಆದ್ದರಿಂದಲೇ ಪ್ರಾಚೀನ ಕಾಲದಲ್ಲಿ ರಾಜರು ಇಲ್ಲಿಗೆ ಬಂದು ಸ್ನಾನ ಮಾಡುತ್ತಿದ್ದರು ಎಂಬ ಅಭಿಪ್ರಾಯವಿದೆ. ನದಿಯಲ್ಲಿ ಅಲ್ಲಲ್ಲಿ ಕಾಣುವ ಆಯತಾಕಾರದ ಕಟ್ಟೋಣಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಇದಲ್ಲದೆ ಪೂಜಾರಿಗಳು ಇಲ್ಲಿ ಬಂದು ಪೂಜೆ ಮಾಡಿ ಬದುಕಿಗೆ ಮೂಲಾಧಾರವಾದ ನೀರನ್ನು ನೀಡಿದ ದೈವಗಳಿಗೆ ವಂದನೆ ಸಲ್ಲಿಸುತ್ತಿದ್ದರು ಎಂದೂ ಹೇಳಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿಂದ ನೀರು ಭತ್ತದ ಗದ್ದೆಗಳಿಗೆ ಹರಿದು ಫಲವತ್ತತೆ ಮತ್ತು ಸಮೃದ್ಧಿಗೆ ಕಾರಣವಾಗಿದೆ ಎಂಬುದು ಕೃಷಿಕರ ಬಲವಾದ ನಂಬಿಕೆ. ಒಳ್ಳೆಯ ಅದೃಷ್ಟಕ್ಕಾಗಿ ಪ್ರವಾಸಿಗರು ಈ ನದಿಯ ನೀರನ್ನು ಪ್ರೋಕ್ಷಣೆ ಮಾಡುವುದು ಈಗ ರೂಢಿಯಲ್ಲಿದೆ.
Advertisement
ಹಿಂದೂ ಧರ್ಮ ಅತ್ಯಂತ ಪ್ರಬಲವಾಗಿದ್ದ ಕಾಂಬೋಡಿಯಾದಲ್ಲಿ ಕಲ್ಲಿನ ಲಿಂಗ, ಶಿವ-ವಿಷ್ಣು ಮೂರ್ತಿಗಳು ಕಂಡುಬಂದದ್ದು ಸಹಜ. ಆದರೆ, ನಮ್ಮ ಶಾಲ್ಮಲಾ ನದಿಯಂತೆ ಅಲ್ಲಿನ ಸ್ಟಂಗ್ ನದಿಯಲ್ಲಿ ಸಹಸ್ರಲಿಂಗದ ಕೆತ್ತನೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ !
ಕೆ. ಎಸ್. ಚೈತ್ರಾ