Advertisement

ಈ ನದಿಯಲ್ಲಿದೆ ಸಹಸ್ರಾರು ಲಿಂಗಗಳು: ಸಂತಾನ ಇಲ್ಲದವರು ಈ ಕ್ಷೇತ್ರಕ್ಕೆ ಬಂದರೆ ಸಂತಾನ ಭಾಗ್ಯ ಪ್ರಾಪ್ತಿ

05:46 PM Dec 17, 2022 | ಸುಧೀರ್ |

ಪ್ರಕೃತಿ ಸೌಂದರ್ಯದ ಎದುರು ಎಲ್ಲವೂ ನಶ್ವರ, ಅದೆಷ್ಟೋ ವಿಸ್ಮಯಗಳು ಇನ್ನೂ ನಮ್ಮ ಕಣ್ಣ ಮುಂದೆ ಬಂದಿಲ್ಲ ಇನ್ನೂ ಕೆಲವು ಈಗಷ್ಟೇ ಪ್ರಚಾರಕ್ಕೆ ಬರುತ್ತಿವೆ ಅದರಲ್ಲೂ ಕೆಲವು ಕಣ್ಮರೆಯಾಗುವ ಹಂತದಲ್ಲಿದೆ ಅದರಲ್ಲಿ ಉತ್ತರಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರಗಳ ಪೈಕಿ ಶಿರಸಿಯ ಸಹಸ್ರಲಿಂಗ ಕ್ಷೇತ್ರವೂ ಒಂದು.‌ ಇಲ್ಲಿ ಹರಿಯುವ ಶಾಲ್ಮಲಾ ನದಿಯಲ್ಲಿ ಸಹಸ್ರಾರು ಲಿಂಗಗಳು ಭಕ್ತರ, ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

Advertisement

ಕಳೆದ ಹಲವಾರು ವರುಷಗಳಿಂದ ಭಕ್ತರ ಇಷ್ಟಾರ್ಥ ಸಿದ್ದಿಗಳನ್ನು ಈಡೇರಿಸುತ್ತಿರುವ ಈ ಲಿಂಗಗಳು ಇಂದು ಕಣ್ಮರೆಯ ಹಂತದಲ್ಲಿವೆ ಅದಕ್ಕೆ ಹಲವಾರು ಕಾರಣಗಳೂ ಇವೆ, ಕೆಲವೊಂದಷ್ಟು ಪ್ರಕೃತಿಯಿಂದ ಆದರೆ ಇನ್ನೊಂದಷ್ಟು ಮಾನವನಿಂದಲೇ ಆಗಿದೆ ಎಂದು ಹೇಳಬಹುದು.

ಉತ್ತರಕನ್ನಡ ಜಿಲ್ಲೆಯ ಶಿರಸಿಯ ಭೈರುಂಬೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಸಹಸ್ರಲಿಂಗ ಕ್ಷೇತ್ರ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಹದಿನೈದನೇ ಶತಮಾನದಲ್ಲಿ ಸೋದೆ ಅರಸರ ಕಾಲದಲ್ಲಿ ಈ ಸಹಸ್ರಲಿಂಗಗಳನ್ನು ಕೆತ್ತಿಸಿದ್ದರು ಎಂಬ ಪ್ರತೀತಿಯಿದೆ. ಶಾಲ್ಮಲಾ ನದಿಯಲ್ಲಿರುವ ಈ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ಸಾವಿರಾರು ಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಿವಲಿಂಗಗಳಿದ್ದವು. ಇವುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದ ಕಾರಣ ಹೆಚ್ಚು ಆಕರ್ಷಣೀಯವಾಗಿದೆ.

ಸಂತಾನ ಭಾಗ್ಯ:
ಈ ಕ್ಷೇತ್ರವನ್ನು ಸಂದರ್ಶಿಸಿದರೆ ಸಂತಾನ ಇಲ್ಲದೆ ಇರುವವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬುದು ಇಲ್ಲಿನ ಭಕ್ತರ ಪ್ರತೀತಿ. ಹಾಗಾಗಿ ಶಿವರಾತ್ರಿ ಹಾಗೂ ಸಂಕ್ರಾಂತಿಯ ದಿನ ಇಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ನಡೆಯುತ್ತದೆ. ಈ ಸಂದರ್ಭದಲ್ಲಿ ಇಲ್ಲಿಗೆ ಸಾವಿರಾರು ಭಕ್ತರು ದೇವರ ಪೂಜೆ ನೆರವೇರಿಸಿ ಪುನೀತರಾಗುತ್ತಾರೆ.

Advertisement

ಸಹಸ್ರ ಲಿಂಗ ದರ್ಶನ ಭಾಗ್ಯ:
ಭಕ್ತರು ಹಾಗೂ ಪ್ರವಾಸಿಗರಿಗೆ ಈ ಕ್ಷೇತ್ರದಲ್ಲಿನ ಶಿವಲಿಂಗವನ್ನು ದರ್ಶಿಸಲು ಯಾವಾಗಲೂ ಅವಕಾಶವಿರುವುದಿಲ್ಲ. ಶಾಲ್ಮಲಾ ನದಿಯ ನೀರಿನ ಮಟ್ಟ ಕಡಿಮೆಯಾದ ಸಂದರ್ಭ ಲಿಂಗಗಳ ದರ್ಶನ ಪಡೆಯಬಹುದು, ಮಳೆಗಾಲದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಲಿಂಗಗಳ ದರ್ಶನ ಭಾಗ್ಯ ಸಿಗುವುದಿಲ್ಲ, ಹಾಗಾಗಿ ಮಳೆ ಕಡಿಮೆಯಾದ ಬಳಿಕ ಈ ಕ್ಷೇತ್ರಕ್ಕೆ ಭೇಟಿ ನೀಡುವುದು ಉತ್ತಮ.

ಕಣ್ಮರೆಯಾಗುತ್ತಿವೆ ಲಿಂಗಗಳು:
ಕಳೆವು ವರ್ಷಗಳ ಹಿಂದೆ ಇಲ್ಲಿ ಸಾವಿರಾರು ಲಿಂಗಗಳಿದ್ದವು ಆದರೆ ಈಗ ಲಿಂಗಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಇದಕ್ಕೆ ಎರಡು ಪ್ರಮುಖ ಕಾರಣಗಳೂ ಇವೆ, ಒಂದನೆಯದು ಮಳೆಗಾಲದಲ್ಲಿ ನದಿ ತುಂಬಿ ಹರಿಯುವ ಸಂದರ್ಭ ನೀರಿನ ರಭಸಕ್ಕೆ ಲಿಂಗಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಜೊತೆಗೆ ನೀರಿನ ರಭಸಕ್ಕೆ ಲಿಂಗಗಳು ತನ್ನ ಚೆಲುವನ್ನು ಕಳೆದುಕೊಂಡಿವೆ ಎನ್ನಲಾಗಿದೆ. ಇನ್ನೊಂದು ಕಾರಣ ಈ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿರುವ ಕೆಲ ಸಣ್ಣ ಸಣ್ಣ ಲಿಂಗಗಳನ್ನು ಕೊಂಡೊಯ್ದಿರುವುದು ಜೊತೆಗೆ ಹಾಳುಗೆಡವಿರುವುದು ಮುಖ್ಯ ಕಾರಣವಾಗಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

ತೀರ್ಥ ಸ್ನಾನದಲ್ಲಿ ಔಷಧೀಯ ಗುಣ:
ಶಾಲ್ಮಲಾ ನದಿಯ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಎಲ್ಲಾ ಶಿವಲಿಂಗಗಳು ಕಂಗೊಳಿಸುತ್ತವೆ. ಪ್ರತಿ ಶಿವಲಿಂಗಕ್ಕೆ ಅಭಿಮುಖವಾಗಿ ನಂದೀಶ್ವರನು ಇರುತ್ತಾನೆ. ಶಿವರಾತ್ರಿಯ ಸಮಯದಲ್ಲಿ ಈ ಪ್ರದೇಶವು ಭಕ್ತರ ಜನಜಂಗುಳಿ ಅಧಿಕ ಸಂಖ್ಯೆಯಲ್ಲಿರುತ್ತದೆ. ಇನ್ನು ಈ ನದಿಯ ಸುತ್ತಲಿರುವ ಅರಣ್ಯದಲ್ಲಿ ಅಮೂಲ್ಯವಾದ ವನ ಔಷಧ ಮೂಲಿಕೆಗಳಿರುವುದರಿಂದ ಈ ನದಿಯಲ್ಲಿ ಸ್ನಾನವನ್ನು ಮಾಡಿದರೆ ಎಂಥಹ ರೋಗಗಳೇ ಆಗಲಿ ಗುಣಮುಖವಾಗುತ್ತದೆ ಎಂಬುದು ಪ್ರತೀತಿ.

ಸ್ಥಳದ ಅಭಿವೃದ್ಧಿಕಾರ್ಯ ನಡೆಯಬೇಕಿದೆ :
ಈ ಪುಣ್ಯ ಕ್ಷೇತ್ರಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಿ ಪ್ರಕೃತಿ ಸೌಂದರ್ಯವನ್ನು ಕಾಪಾಡುವ ಕೆಲಸವಾಗಬೇಕಾಗಿದೆ. ಇದಕ್ಕೆ ಸಂಬಂಧ ಪಟ್ಟ ಇಲಾಖೆಗಳು ಕೂಡಲೇ ಇದರತ್ತ ಗಮನ ಹರಿಸಿ ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕಾಗಿದೆ, ಯಾಕೆಂದರೆ ಈ ಸಹಸ್ರ ಲಿಂಗಗಳು ಸುಮಾರು ಕಿಲೋಮೀಟರ್ ಗಟ್ಟಲೆ ದೂರದವರೆಗೆ ಹರಡಿದ್ದು ಕರ್ನಾಟಕದ ಬೇರೆ ಯಾವುದೇ ಪ್ರದೇಶದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಲಿಂಗಗಳು ಕಾಣಸಿಗದು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ಪಟ್ಟಣದಿಂದ 14 ಕಿ.ಮೀ ದೂರದಲ್ಲಿ ಈ ಸಹಸ್ರ ಲಿಂಗಗಳ ಮಹಾಕ್ಷೇತ್ರವಿದೆ. ಭಕ್ತರು ವಾಹನದ ಮೂಲಕ ಪುಣ್ಯ ಕ್ಷೇತ್ರವನ್ನು ಸಂದರ್ಶಿಸಬಹುದು.

ಸುಧೀರ್ ಎ.ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next