ಉತ್ತರ ಆಫ್ರಿಕಾ: ಆಗ್ನೇಯ ಮೊರೊಕ್ಕೊ ಪ್ರದೇಶದಲ್ಲಿ ಎರಡು ದಿನಗಳ ಕಾಲ ಸುರಿದ ಧಾರಾಕಾರ ಮಳೆಯ ಪರಿಣಾಮ ಸಹರಾ ಮರುಭೂಮಿಯ ಹಲವು ಭಾಗಗಳಲ್ಲಿ ಭಾರೀ ಪ್ರಮಾಣದ ಪ್ರವಾಹ ಸ್ಥಿತಿಗೆ ಕಾರಣವಾಗಿರುವ ಘಟನೆ ನಡೆದಿದ್ದು, ಇದು ಕಳೆದ 50 ವರ್ಷಗಳಲ್ಲೇ ಮೊದಲ ಬಾರಿಗೆ ಸಹರಾ ಮರುಭೂಮಿ ಸಾಕ್ಷಿಯಾಗಿರುವುದಾಗಿ ವರದಿ ತಿಳಿಸಿದೆ.
ವಿಶ್ವದ ಅತಿದೊಡ್ಡ ಮರುಭೂಮಿ ಎಂದು ಕರೆಯುವ ಸಹರಾ ಮರುಭೂಮಿ ಮರಳುಗಾಡು ಪ್ರದೇಶ. ಇಲ್ಲಿ ಧಾರಾಕಾರ ಮಳೆಯಿಂದ ನೀರು ಹರಿಯುತ್ತಿರುವ ಸೆಟಲೈಟ್ ಚಿತ್ರಗಳು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಮೊರೊಕ್ಕೊದ ಹವಾಮಾನ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ರಾಜಧಾನಿ ರಬಾಟ್ ನಿಂದ 450 ಕಿಲೋ ಮೀಟರ್ ದೂರದಲ್ಲಿರುವ ಟಗೌನೈಟ್ ಗ್ರಾಮದಲ್ಲಿ ಕೇವಲ 24 ಗಂಟೆಗಳಲ್ಲಿ 100 ಮಿಲಿ ಮೀಟರ್ ದಾಖಲೆಯ ಮಳೆ ಸುರಿದಿರುವುದಾಗಿ ತಿಳಿಸಿದ್ದಾರೆ.
ನಾಸಾ ಸೆಟಲೈಟ್ (Satellite) ಮೂಲಕ ಸೆರೆ ಹಿಡಿದ ಚಿತ್ರದಲ್ಲಿ ಝಾಗೋರಾ ಮತ್ತು ಟಾಟಾ ಮರುಭೂಮಿ ಪ್ರದೇಶದಲ್ಲಿನ ಒಣಗಿದ ಕೆರೆ ಇದೀಗ ನೀರಿನಿಂದ ತುಂಬಿಕೊಂಡಿದ್ದು, 50 ವರ್ಷಗಳಲ್ಲೇ ಇದು ಮೊದಲ ಪ್ರವಾಹ ಸ್ಥಿತಿಗೆ ಸಾಕ್ಷಿಯಾಗಿದೆ ಎಂದು ವರದಿ ವಿವರಿಸಿದೆ.
ಕಳೆದ 50 ವರ್ಷಗಳಲ್ಲಿ ಇಷ್ಟೊಂದು ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿರುವುದು ಇದೇ ಮೊದಲ ಎಂದು ಮೊರೊಕ್ಕೊ ಹವಾಮಾನ ಇಲಾಖೆ ಅಧಿಕಾರಿ ಹುಸೈನ್ ಯೂಯಾಬೇಬ್ ಅಸೋಸಿಯೇಟೆಡ್ ಪ್ರೆಸ್ ಗೆ ತಿಳಿಸಿದ್ದಾರೆ.