Advertisement

ಸಹಕಾರ ನಗರದಲ್ಲೊಂದು ಸುಂದರ ಬಸ್‌ ನಿಲ್ದಾಣ

04:54 PM Mar 18, 2017 | Team Udayavani |

ಬಿಸಿಲ ಬೇಗೆಯಲ್ಲಿ ದಣಿದು ಬರುವ ಪ್ರಯಾಣಿಕರಿಗೆ ಈ ಬಸ್‌ ನಿಲ್ದಾಣದಲ್ಲಿ ಸಂಗೀತದ ಇಂಪಿನೊಂದಿಗೆ ಕನ್ನಡದ ಕಂಪು ಸವಿಯುವ ಅವಕಾಶ. ಜತೆಗೆ ಕನ್ನಡದ ವರ್ಣಮಾಲೆಯಿಂದ ಹಿಡಿದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಸಂಪೂರ್ಣ ಮಾಹಿತಿ. 

Advertisement

ಇದು ಯಲಹಂಕದ ಸಹಕಾರ ನಗರದಲ್ಲಿ ನಿರ್ಮಾಣವಾಗಿರುವ “ಸುವರ್ಣ ಕರ್ನಾಟಕ ಬಿಎಂಟಿಸಿ ಬಸ್‌ ತಂಗು ನಿಲ್ದಾಣ’ದ ವಿಶೇಷತೆ.

 ಅರಮನೆ ಹಾಗೂ ಗುಮ್ಮಟಗಳ ವಿನ್ಯಾಸದಲ್ಲಿ ಕಲ್ಲುಗಳಿಂದ ನಿರ್ಮಿಸಲಾಗಿರುವ ಈ ತಂಗುದಾಣ ಸುತ್ತಮುತ್ತಲ ಭಾಗದ ಪ್ರಯಾಣಿಕರ ಅಚ್ಚುಮೆಚ್ಚಿನ ತಾಣವೂ ಹೌದು.

ತಂಗುದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕುಳಿತುಕೊಳ್ಳಲು ಸುಸಜ್ಜಿತವಾದ ಬೆಂಚು ಕಲ್ಲುಗಳನ್ನು ಅಳವಡಿಸಲಾಗಿದೆ. ಜತೆಗೆ ಪ್ರಯಾಣಿಕರಿಗೆ ಸಮಯ ನೋಡಿಕೊಳ್ಳಲು ಗಡಿಯಾರವೂ ಇಲ್ಲಿದೆ. ಕುಡಿಯುವ ನೀರಿನ ಸೌಲಭ್ಯವೂ ಇದೆ.

ಸಹಕಾರ ನಗರದ ನಿವಾಸಿ ಸಮಾಜ ಸೇವಕ ಎಂ.ಎಸ್‌.ಸುರೇಶ್‌ ಕುಮಾರ್‌ ಎಂಬುವವರು ಬಸ್‌ ತಂಗುದಾಣವನ್ನು ಸ್ವಂತ ವೆಚ್ಚದಲ್ಲಿ  ನಿರ್ಮಿಸಿದ್ದು, ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಎರಡು ಸಿ.ಸಿ ಟಿ.ವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ.  ತಂಗುದಾಣದ ಸ್ವತ್ಛತೆಯನ್ನು ನೋಡಿಕೊಳ್ಳಲು ಪ್ರತ್ಯೇಕವಾಗಿ ಒಬ್ಬರು ಸಿಬ್ಬಂದಿಯನ್ನು ನೇಮಿಸಲಾಗಿದೆ.

Advertisement

ಬಸ್‌ ನಿಲ್ದಾಣ ಸಂಪೂರ್ಣ ಕನ್ನಡಮಯವಾಗಿದ್ದು ಕನ್ನಡದ ವರ್ಣಮಾಲೆ, ಕನ್ನಡದ ಪ್ರಸಿದ್ಧ ಸಾಹಿತಿ ಲೇಖಕರು, ರಾಜ ಮನೆತನಗಳು, ದಾಸರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕನ್ನಡ ಶಾಸನಗಳು, ರಾಜ್ಯದ ಗಿರಿಧಾಮಗಳು, ಪ್ರೇಕ್ಷಣೀಯ ಸ್ಥಳಗಳು, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಕನ್ನಡಿಗರು, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಕನ್ನಡಿಗರು, ಕನ್ನಡ ಚಲನಚಿತ್ರ ಕ್ಷೇತ್ರದ ಮಹನೀಯರು… ಹೀಗೆ ಕನ್ನಡದ ಎಲ್ಲ ವಿಭಾಗಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಪರಿಚಯ ಮಾಹಿತಿ ಸಹ ಇದೆ. ಬಸ್‌ ತಂಗುದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕನ್ನಡದ ಎಲ್ಲ ದಿನ ಪತ್ರಿಕೆಗಳೂ ಲಭ್ಯವಿದೆ.

ಸಂಗೀತದ ಇಂಪು
ತಂಗುದಾಣದಲ್ಲಿ ಸಂಗೀತ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಬೆಳಗಿನಿಂದ ರಾತ್ರಿಯವರೆಗೆ ನಿರಂತರವಾಗಿ ಸಂಗೀತ ಕೇಳಬಹುದಾಗಿದೆ. ಬೆಳಗ್ಗೆ 6ರಿಂದ 7ರವರೆಗೆ ಸುಪ್ರಭಾತ, 7-8 ಭಕ್ತಿ ಗೀತೆಗಳು, 8 ರಿಂದ 1 ಜಾನಪದ ಗೀತೆಗಳು, 1ರಿಂದ 4ರವರೆಗೆ ಶಾಸ್ತ್ರೀಯ ಸಂಗೀತ, ಸಂಜೆ 4ರಿಂದ 8ವರೆಗೆ ಹಳೆಯ ಕನ್ನಡ ಚಲನಚಿತ್ರ ಗೀತೆಗಳು, ರಾತ್ರಿ 8 ರಿಂದ 12ರ ತನಕ ಕನ್ನಡ ಹೊಸ ಚಲನಚಿತ್ರ ಗೀತೆಗಳನ್ನು ಕೇಳಿ ಆನಂದಿಸಬಹುದಾಗಿದೆ. 

*ಇಂತಹ ಒಳ್ಳೆಯ ಕೆಲಸಗಳನ್ನು ಮಾಡಿರುವವರಿಗೆ ನಾಗರಿಕರು ಧನ್ಯವಾದಗಳನ್ನು ಹೇಳಬೇಕು. ನಗರದ ಎಲ್ಲ ಭಾಗಗಳಲ್ಲಿ ಇಂತಹ ನಿಲ್ದಾಣಗಳ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಬೇಕು.
– ಆರ್‌.ಎಸ್‌.ಚಿಕ್ಕಮs…, ಸಹಕಾರ ನಗರ ನಿವಾಸಿ

*ಬಸ್‌ ನಿಲ್ದಾಣಕ್ಕೆ ಬಂದು ಬಸ್‌ಗಾಗಿ ಕಾಯುವ ಪ್ರಯಾಣಿಕರು ಬಸ್‌ ಬರುವ ವೇಳೆಯೊಳಗೆ ಕನ್ನಡ ಕುರಿತು ಹಲವಾರು ಮಾಹಿತಿ ಪಡೆಯಬಹುದು. ಇದರೊಂದಿಗೆ ಕನ್ನಡ ಹಲವು ಮಾದರಿಯ ಸಂಗೀತ ಪ್ರಕಾರಗಳನ್ನು ಸವಿಯುವ ಅವಕಾಶ ಇಲ್ಲಿದೆ. 
– ಶಶಿಕುಮಾರ್‌, ಸಂಜೀವಿನಿ ನಗರ ನಿವಾಸಿ

*ಬಸ್‌ ನಿಲ್ದಾಣದಲ್ಲಿ ಸಂಗೀತ ಕೇಳುವ ವ್ಯವಸ್ಥೆಯನ್ನು ಕಲ್ಪಿಸಿರುವುದು ಉತ್ತಮ ಸಂಗತಿಯಾಗಿದೆ. ಇದರೊಂದಿಗೆ ಕನ್ನಡ ಕುರಿತು ಜಾಗೃತಿ ಮೂಡಿಸುವ ಫ‌ಲಕಗಳು ಮತ್ತು ಸಂಚಾರಿ ನಿಯಮಗಳ ಪಾಲನೆ ಕುರಿತಂತೆ ಸಂದೇಶಗಳು ಮತ್ತು ಮಹಿಳೆಯರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿರುವುದು ಅಭಿನಂದನೀಯ. 
– ಮಹೇಶ್‌, ಆರ್‌.ಟಿ.ನಗರ

– ವೆಂ. ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next