Advertisement
ಕೈ ಹಿಡಿದ ಮಿಶ್ರ ಬೆಳೆ ಪ್ರಾರಂಭದಲ್ಲಿ ರವೀಶ್, ಏಕ ಬೆಳೆ ಅಂತ ಅಡಿಕೆ ಮತ್ತು ತೆಂಗನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದರು. ಅದರ ಪಾಲನೆ ಪೋಷಣೆ ಮಾಡಿ ಶ್ರಮವಹಿಸಿದರೂ ಫಲ ಮಾತ್ರ ಅಷ್ಟಾಗಿ ಸಿಗಲಿಲ್ಲ.ಆಮೇಲೆ ಮಿಶ್ರ ಬೆಳೆಯನ್ನು ಆರಂಭಿಸಿದ್ದರ ಫಲವಾಗಿ ಇಂದು ಸುಮಾರು 36 ಬಗೆಯ ಗಿಡಗಳು ತೋಟದಲ್ಲಿವೆ. ಪ್ರಮುಖವಾಗಿ ಅಡಿಕೆ 200, ಪರಂಗಿ 150, ಬಾಳೆ ತೆಂಗು 180, ಬಾದಾಮಿ 150, ಸೀಬೆ 40, ಡ್ರಾಗನ್ ಫೂಟ್ 50- ಹೀಗೆ ಬಗೆಬಗೆಯ ಗಿಡಗಳನ್ನು ಬೆಳೆದು ವರ್ಷಕ್ಕೆ ಮೂರು ನಾಲ್ಕ ಲಕ್ಷ ಆದಾಯಗಳಿಸುತ್ತಿದ್ದಾರೆ.
ರವೀಶ್ ತೋಟದ ಕೃಷಿಯ ಜೊತೆಗೇ ಜೇನು ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ. ಒಟ್ಟು ಸುಮಾರು 12 ಪೆಟ್ಟಿಗೆ ಇಲ್ಲಿದ್ದು, 15 ದಿನಕ್ಕೊಮ್ಮೆ ಶುದ್ಧಿ ಮಾಡುತ್ತಾರೆ. ಜೇನು ಹುಳಗಳಿಗೆ ಪೂರಕ ವಾತಾವರಣ ಕಲ್ಪಿಸಲು ಸೂರ್ಯಕಾಂತಿಯನ್ನು ಬೆಳೆಸಿದ್ದಾರೆ. ಈ ಜೇನಿನ ಪರಾಗಸ್ಪರ್ಶದಿಂದ ಬೆಳಗಳ ಇಳುವರಿ ಕೂಡ ಹೆಚ್ಚಾಗಿದೆ. ಹೀಗೆ ವರ್ಷಕ್ಕೆ 7 ರಿಂದ 8 ಕೆ.ಜಿ ತುಪ್ಪವನ್ನು ತೆಗೆದು ಮಾರುಕಟ್ಟೆ ಬೆಲೆ ಆಧಾರದ ಮೇಲೆ ಲಾಭಗಳಿಸುತ್ತಿದ್ದಾರೆ.
ತೋಟದಲ್ಲಿ ಬೆಳೆಯುವ ಸಣ್ಣ ಪುಟ್ಟ ಬಳ್ಳಿಗಳು, ತರಕಾರಿ ಬೆಳೆಗಳು ಹಾಗೂ ಇತರೆ 36 ಬಗೆಯ ಗಿಡಗಳಿಂದ ಉದುರಿದ ಎಲೆ ಕಾಯಿ ಗರಿಗಳನ್ನು ತೋಟದಲ್ಲೇ ಬಿಡುವುದರಿಂದ, ಅದು ಕೊಳೆತು ಮಣ್ಣಿನ ಹೊದಿಕೆಯಾಗಿ ಒಂದಿಷ್ಟು ಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ. ಬೆಳಗೆ ಗೊಬ್ಬರವಾಗಿಯೂ ಕಾರ್ಯನಿರ್ವಹಿಸುವುದಲ್ಲದೆ ರೈತನ ಮಿತ್ರ ಎರೆಹುಳುವಿಗೆ ಪೂರಕವಾದ ವಾತಾವರಣವನ್ನು ಇದು ನೀಡುತ್ತದೆ.
ತೋಟದ ಬೆಳೆ ಅಂದ ಮೇಲೆ ಅದಕ್ಕೆ ಹಲವು ರೋಗಗಳು ಕಾಡುವುದು ಸಾಮಾನ್ಯ ಬೆಳೆಗಳನ್ನು ಕಾಡುವ ರೋಗ ಬಾಧೆಯಿಂದ ಪಾರಾಗಲು ಇವರು ರಾಸಾಯನಿಕಕ್ಕೆ ಮೊರೆ ಹೋಗಿಲ್ಲ. ಬದಲಾಗಿ ಜೀವಾಮೃತ ತಯಾರಿಸುತ್ತಾರೆ. ಅದು ಹೀಗೆ; 200 ಲೀಟರ್ ನೀರಿಗೆ 10ಲೀ. ಗಂಜಲ, 10 ಕೆ.ಜಿ ದೇಸಿಯ ಹಸುವಿನ ಸೆಗಣಿ, 2 ಕೆಜಿ ಬೆಲ್ಲ ಅಥವಾ ಪರಂಗಿ, ಬಾಳೆಹಣ್ಣು 4 ಕೆ.ಜಿ, ಯಾವುದಾದರೂ ಎರಡು ದ್ವಿದಳ ಧಾನ್ಯಗಳ ಹಿಟ್ಟನ್ನು ಹಾಕುತ್ತಾರೆ. ಒಂದು ಪ್ಲಾಸ್ಟಿಕ್ ಡ್ರಮ್‌ನಲ್ಲಿ ಸಂಗ್ರಹಿಸಿ ದಿನದಲ್ಲಿ ಮೂರು ಬಾರಿ ಒಂದೇ ಮುಖವಾಗಿ ಅದನ್ನು ಕಟ್ಟಿಗೆಯಿಂದ ತಿರುಗಿಸಿ ಬಿಡಬೇಕು. ಒಂದು ವೇಳೆ ವಿರುದ್ಧ ದಿಕ್ಕಿನೆಡೆಗೆ ತಿರುಗಿಸಿದರೆ ಜೀವಾಣುಗಳು ಸಾಯುತ್ತವೆ. ಹೀಗೆ 12 ರಿಂದ 15 ದಿನಗಳ ನಂತರ 1 ಎಕರೆಗೆ 200 ಲೀಟರ್‌ನಂತೆ 15 ದಿನಕ್ಕೊಮ್ಮೆ ಸಿಂಪಡಿಸಿಬೇಕು. ಇದರಿಂದ ಭೂಮಿಯ ಫಲವತ್ತತೆ ಹಾಗೂ ರೋಗಗಳ ನಿವಾರಣೆ ಕೂಡ ಆಗುತ್ತದೆ ಎನ್ನುತ್ತಾರೆ ರವೀಶ್. ಅಡಿಕೆ ಮತ್ತು ತೆಂಗುವಿನ ಹರಳು, ಉದುರುವುದನ್ನು ತಡೆಗಟ್ಟುವಿಕೆ ಇವರು ಇನ್ನೊಂದು ಪ್ಲಾನ್ ಮಾಡಿದ್ದಾರೆ. ಜೀವಾಮೃತದ ಜೊತೆಗೆ 5 ಬಗೆಯ ಮೊಳಕೆ ಕಾಳುಗಳ ಪೌಷ್ಠಿಕಾಂಶಗಳಾದ ಕಡ್ಲೆ, ಉದ್ದು, ಗೋಧಿ, ಹೆಸರು ಎಳ್ಳುಗಳನ್ನು ನೆನಸಿ ಬಟ್ಟೆಯಲ್ಲಿ ಕಟ್ಟಬೇಕು. ಮೊಳಕೆ ಬಂದಾದಮೇಲೆ ಚೆನ್ನಾಗಿ ರುಬ್ಬಿ 10 ಲೀಟರ್ ನೀರಿನೊಂದಿಗೆ ಬೆರೆಸಿ ಇಡಬೇಕು. ಇದನ್ನು ಜೀವಾಮೃತದ ಜೊತೆಗೆ ಸಿಂಪಡಿಸಿದರೆ ಸಮೃದ್ಧವಾಗಿ ಬೆಳೆ ಸಿಗುತ್ತದೆ.
Related Articles
ಅಡಿಕೆ ಮತ್ತು ತೆಂಗು ಬೆಳಗಳಲ್ಲಿ ಪ್ರಮುಖವಾಗಿ ಬೂದಿ ರೋಗ, ನುಸಿ ರೋಗಗಳು ಹೆಚ್ಚಾಗಿ ಕಾಡಿದರೆ ಇನ್ನೂ ಕೀಟಗಳಾದ ಕೊಂಡ್ಲಿ ಉಳು ರೆಕ್ಕೆ ಹುಳುಗಳು ಹಾನಿ ಮಾಡುತ್ತವೆ. ಇಂಥ ಸಂದರ್ಭದಲ್ಲಿ ಕಷಾಯವನ್ನು ಸಿದ್ಧಪಡಿಸಬೇಕು. ಈ ಕಾಯಕದಲ್ಲಿ ಬೇವಿನ ಸೊಪ್ಪು ಬಿಳಿ ಮತ್ತು ಕಪ್ಪು ಉತ್ತರಾಣಿ , ಸೀತಾಫಲ, ದಾಳಿಂಬಿ ಸೊಪ್ಪು, ಆಡುಮುಟ್ಟದ ಸೊಪ್ಪುನ್ನು ಗಡಿಗೆಯಲ್ಲಿ ಗಂಜಲ ಹಾಕಿ ಕೊಳೆಯುವಂತೆ ಮಾಡಬೇಕು. ಕೆಲವೊಮ್ಮೆ ಚೆನ್ನಾಗಿ ಕುದಿಸಿಬೇಕು. ಕೀಟಭಾದೆ ಹೆಚ್ಚಾಗಿದ್ದರೆ ಅದಕ್ಕೆ ಸೀಮೆಎಣ್ಣೆ ಹಾಕಿ 100 ಎಂಎಲ್‌ಗೆ ಕಶಾಯಕ್ಕೆ 20 ಲೀಟರ್ ನೀರು ಬೆರಸಬೇಕು. 100 ಲೀಟರ್ ನೀರಿಗೆ 1 ಲೀಟರ್ ಕಾಶಯ ಬಳಸಿ ಬೆಳಗಳಿಗೆ ಸಿಂಪಡಿಸಿದರೆ ರೋಗಭಾದೆ ಕಡಿಮೆಯಾಗುತ್ತದೆ. ಹೀಗೆ ರವೀಶ್ ಕಳೆದ ನಾಲ್ಕು ವರ್ಷಗಳಿಂದ ಸಹಜ ಬೇಸಾಯದೊಂದಿಗೆ ಪ್ರಾಣಿ ಪಕ್ಷಿ ಗಿಡ ಮರ ಬಳ್ಳಿಗಳನ್ನು ಸಹ ಕಾಪಾಡುತ್ತ ಬಂದಿದ್ದಾರೆ.
Advertisement
ವಿರುಪಾಕ್ಷಿ ಕಡ್ಲೆ ಕಲ್ಲುಕಂಭ