ಸಾಗರ: ಮಳೆಯ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಆಗುವುದರ ಹೊರತಾಗಿ ಈ ಹಿಂದೆ ಮಲೆನಾಡಿನಲ್ಲಿ ವ್ಯಾಪಕ ಬರಗಾಲ ಬಂದ ದಾಖಲೆಗಳಿಲ್ಲ. ಆದರೆ ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಮಳೆಯ ತೀವ್ರ ಅಭಾವ ಕಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಮುಂದಿನ ಜನಾಂಗಕ್ಕೆ ಜವಾಬ್ದಾರಿಯನ್ನು ಬಿಡುವ ಬದಲು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದ ರೈತರು ಯೋಚಿಸಬೇಕಾಗಿದೆ ಎಂದು ಶಾಸಕ ಎಚ್. ಹಾಲಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹೊರವಲಯದ ವರದಹಳ್ಳಿ ರಸ್ತೆಯಲ್ಲಿರುವ ಈಡಿಗರ ಸಂಘದ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದಲ್ಲಿ ಸೊಪ್ಪಿನ ಬೆಟ್ಟದ ಹೆಸರಿನಲ್ಲಿ ಕಾಡನ್ನು ಬಹಳ ಹಿಂದಿನಿಂದಲೂ ಸಂರಕ್ಷಿಸಿಕೊಂಡು ಬಂದಿರುವುದು ರೈತರ ಸಂಪ್ರದಾಯವಾಗಿದೆ. ಆದರೆ ಈಗಿನ ತಲೆಮಾರಿನ ಯುವಕರು ಕಾಡು ಬೆಳೆಸುವ ಬಗ್ಗೆ ಹೆಚ್ಚು ಉತ್ಸುಕತೆ ತೋರದೆ ಇರುವುದು ಕಂಡುಬರುತ್ತದೆ. ಕಾಡುಗಳು ಉಳಿದರೆ ನಾಡು ಉಳಿಯುತ್ತದೆ. ಕಾಡು ಬೆಳೆಸಿದರೆ ನಾವು ಸಾಕುವ ದನಕರುಗಳನ್ನು ಉಳಿಸಬಹುದಾಗಿದೆ. ಇವೆಲ್ಲವೂ ಒಂದಕ್ಕೊಂದು ಸರಪಳಿಯಿರುವ ವಿಷಯ. ಇತ್ತೀಚಿನ ದಿನಗಳಲ್ಲಿ ಯಂತ್ರೋಪಕರಣ ಹೆಚ್ಚಿ ಪ್ರಾಣಿ ಸಾಕಣೆ ಕುಸಿಯುತ್ತಿದೆ ಎಂದು ಹೇಳಿದರು.
ಪರಿಸರವನ್ನು ಬೆಳೆಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಜವಾಬ್ದಾರಿಯೂ ಇದೆ. ಈಗಾಗಲೇ ಎಂಪಿಎಂ ಇಲಾಖೆಯ ಸುಪರ್ದಿಯಲ್ಲಿರುವ ಸುಮಾರು 67 ಸಾವಿರ ಎಕರೆ ಅರಣ್ಯ ಜಾಗಗಳು ಪುನಃ ಅರಣ್ಯ ಇಲಾಖೆಗೆ ವರ್ಗಾಯಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿದ್ದೇನೆ. ಈ ಜಾಗದಲ್ಲಿ ಈ ಹಿಂದೆ ಅಕೇಶಿಯಾ ನೆಡುತೋಪುಗಳನ್ನು ಬೆಳೆಸುವುದನ್ನು ಇಲಾಖೆಗಳು ಮಾಡುತ್ತಿದ್ದವು. ಆದರೆ ಅಕೇಶಿಯಾ ಬೆಳೆಯಲು ಸರ್ಕಾರದಿಂದ ನಿಷೇಧವಾಗಿದ್ದರಿಂದ ಅರಣ್ಯ ಇಲಾಖೆಯ ವತಿಯಿಂದ ಕಾಡುಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಉನ್ನತ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು,
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಅರಣ್ಯ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಒಬ್ಬ ಮನುಷ್ಯ ಎರಡು ಗಿಡಗಳನ್ನು ನೆಟ್ಟರೆ ಸಾಕು. ಅದು ಮುಂದೆ ಪರಿಸರ ಪೂರಕವಾದ ವಾತಾವರಣ ನಿರ್ಮಿತವಾಗುತ್ತದೆ. ಕೇವಲ ಮಳೆಗಾಲದ ಸಂದರ್ಭದಲ್ಲಿ ಗಿಡಗಳನ್ನು ನೆಟ್ಟು ಪರಿಸರ ದಿನಚಾರಣೆಯನ್ನು ಆಚರಿಸಿದರೆ ಸಾಲದು. ಗಿಡಗಳನ್ನು ಬೆಳೆಸುವುದು ಹೇಗೆ ಎನ್ನುವುದನ್ನು ಮೊದಲು ತಿಳಿಯಬೇಕು. ಗ್ರಾಮೀಣ ಭಾಗದ ರೈತರು ನಿಜವಾದ ಪರಿಸರ ಕಾಳಜಿ ಇರುವವರು. ಅಂತವರಿಗೆ ಅರಣ್ಯ ಇಲಾಖೆಯ ವತಿಯಿಂದ ಉಚಿತ ಗಿಡಗಳನ್ನು ನೀಡಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಮಾತನಾಡಿದರು. ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಸಾಮಾಜಿಕ ಅರಣ್ಯಾಧಿಕಾರಿ ನೂತನ್ ಕುಮಾರ್, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಅಶೋಕ್ ಬರದವಳ್ಳಿ, ರವಿಕುಮಾರ್ ವಿಜಯನಗರ, ಗಿರೀಶ್ ಕೋವಿ, ಎನ್. ದಿವಾಕರ್ ಇನ್ನಿತರರು ಇದ್ದರು.