ಸಾಗರ: ಶುಕ್ರವಾರ ನಗರದ ತಾಪಂ, ಉಪ ವಿಭಾಗಾಧಿಕಾರಿಗಳ ಕಚೇರಿ ಸುತ್ತಮುತ್ತ ಜನ ಮಹಾತ್ಮಾ ಗಾಂಧಿ ವೇಷಧಾರಿಯನ್ನು ಕಂಡು ಆಶ್ಚರ್ಯಚಕಿತರಾದರು. ಹಲವರು ಬಂದು ವಿಚಾರಿಸಿದರು. ಈ ಮೂಲಕ, ತಾಲೂಕಿನ ತಾಳಗುಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಛಾವಣಿ ದುರಸ್ತಿ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ದಾಖಲೆ ಸಲ್ಲಿಸಿದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿರುವುದರಿಂದ ತಾಳಗುಪ್ಪ ಗ್ರಾಪಂ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಓಂಕಾರ್ ಎಸ್.ವಿ. ಗಾಂಧಿ ವೇಷ ಧರಿಸಿ ತಾಪಂ ಆವರಣವನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿರುವುದನ್ನು ಅರಿತರು.
ಪ್ರತಿಭಟನಾಕಾರ ಓಂಕಾರ್ ಮಾತನಾಡಿ, 2018-19ನೇ ಸಾಲಿನ ತಾಪಂ ಅನುದಾನದಲ್ಲಿ
ತಾಳಗುಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ದುರಸ್ತಿಗಾಗಿ 1.05 ಲಕ್ಷ ರೂ. ಖರ್ಚು ಹಾಕಲಾಗಿದೆ. ಕಾಮಗಾರಿ ನಡೆದಿದೆ ಎಂದು ಗುತ್ತಿಗೆದಾರರು ಬಿಲ್ ಸಹ ಪಡೆದಿದ್ದು, ಸಂಬಂಧಪಟ್ಟ ಇಂಜಿನಿಯರ್ ಕಾಮಗಾರಿ ಮುಗಿದಿದೆ ಎಂದು ವರದಿ ನೀಡಿದ್ದಾರೆ. ಆದರೆ ಉದ್ದೇಶಿತ ಕಾಮಗಾರಿಗೆ ಸಂಬಂಧಪಟ್ಟಂತೆ ಒಂದು ಮೊಳೆಯನ್ನು ಸಹ ಹೊಡೆದಿಲ್ಲ. ಕಾಮಗಾರಿ ಮುಗಿದಿದೆ ಎಂದು ಬಿಲ್ ಪಡೆಯುವ ಮೂಲಕ ಸಾರ್ವಜನಿಕರ ತೆರಿಗೆ ಹಣದ ವಂಚನೆಯಾಗಿದೆ ಎಂದು ದೂರಿದರು.
ಇಲಾಖೆ ತನಿಖೆ ಮೂಲಕ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ, ತಾಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ನೀಡಿದ ಮಾಹಿತಿ ಕಡತವೇ ನಾಪತ್ತೆಯಾಗಿದ್ದರೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದನ್ನು ಬಿಟ್ಟು ಸಬೂಬು ಹೇಳುತ್ತಿದ್ದಾರೆ. ಅಧಿಕಾರಿಗಳಿಂದ ಮತ್ತು ಚುನಾಯಿತ ಪ್ರತಿನಿಧಿಗಳಿಂದ ನ್ಯಾಯ ಸಿಗದ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಸಹ ಮನವಿ ಸಲ್ಲಿಸಲಾಗಿದೆ.
ಸಾರ್ವಜನಿಕ ಹಣ ದುರುಪಯೋಗವಾಗಿದ್ದರೂ ಕ್ರಮ ಕೈಗೊಳ್ಳದ ತಾಪಂ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸಾರ್ವಜನಿಕರ ಹಣ ಉಳಿಸಿ ಎಂದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಸ್ಥಳಕ್ಕೆ ಬಂದು ಓಂಕಾರ್ ಅವರ ಮನವೊಲಿಸಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮಾಡುವಲ್ಲಿ ಯಶಸ್ಸು ಕಂಡ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಕ್ರಮಕ್ಕೆ ವಿಳಂಬ ಏಕೆ ಆಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಈ ಬಗ್ಗೆ ಜಿಪಂ ಅಧ್ಯಕ್ಷರು ಮತ್ತು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿಗಳ ಜೊತೆ ಮಾತುಕತೆ ನಡೆಸಿ ನ್ಯಾಯಪರವಾದ ಹೋರಾಟಕ್ಕೆ ಯಶಸ್ಸು ದೊರಕಿಸಿಕೊಡುವಂತೆ ಮಾಡುವುದಾಗಿ ಭರವಸೆ ನೀಡಿದರು.
ತಾಪಂ ಉಪಾಧ್ಯಕ್ಷ ಅಶೋಕ್ ಮರಗಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಸದಸ್ಯರಾದ ಜ್ಯೋತಿ ಕೋವಿ, ಆನಂದಿ ಲಿಂಗರಾಜ್, ಸುವರ್ಣ ಟೀಕಪ್ಪ, ಸವಿತಾ ನಟರಾಜ್, ಹೇಮಾ ರಾಜಪ್ಪ, ರಘುಪತಿ, ದೇವೇಂದ್ರಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಂಜುನಾಥಸ್ವಾಮಿ ಇನ್ನಿತರರು ಇದ್ದರು.