Advertisement

ಜಾತಿ,ಆದಾಯ ಪ್ರಮಾಣ ಪತ್ರಕ್ಕಾಗಿ ದಾಖಲೆಗಳನ್ನು ಕೊಟ್ಟರೂ ಪ್ರಶ್ನೆ ಮಾಡಿದ ತಹಶೀಲ್ದಾರ್ ಕಚೇರಿ!

02:58 PM Aug 01, 2022 | Team Udayavani |

ಸಾಗರ: ಈ ಹಿಂದೆ ಪಡೆದ ಆದಾಯ ಪ್ರಮಾಣ ಪತ್ರದ ಅವಧಿ ಮುಗಿದಿದ್ದರಿಂದ ಹೊಸದಾದ ಆದಾಯ ಪ್ರಮಾಣ ಪತ್ರಕ್ಕೆ ಕೋರಿಕೆ ಸಲ್ಲಿಸಿದ ನಾಗರಿಕರಿಗೆ ಸಾಗರದ ತಹಶೀಲ್ದಾರ್ ಕಚೇರಿ, ನೀವು ಜಿಲ್ಲೆಯವರಲ್ಲ, ಇಲ್ಲಿ ವಾಸಿಸುತ್ತಿಲ್ಲ, ಅರ್ಜಿಯಲ್ಲಿ ಹೇಳಿಕೊಂಡ ಜಾತಿಯವರಲ್ಲ ಎಂದೆಲ್ಲ ಹೇಳಿ ಹಿಂಬರಹ ನೀಡಿದ ವಿಚಿತ್ರ ಘಟನೆ ಸಾಗರದಲ್ಲಿ ನಡೆದಿದೆ.

Advertisement

ಇಲ್ಲಿನ ಅಶೋಕ್ ರಸ್ತೆಯ ನಿವಾಸಿಯೊಬ್ಬರು ತಮ್ಮ ಮಗನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕೋರಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಲಾಖೆಯ ಅಧಿಕಾರಿಗಳು ದೃಢೀಕರಣ ಪತ್ರ ನೀಡಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡಿದ್ದಾರೆ. ಹಿಂಬರಹವನ್ನು ಗಮನಿಸಿದ ಅರ್ಜಿದಾರರಿಗೆ ಆಘಾತವಾಗಿದೆ.

ಕೆ.ಎಸ್.ಚಂದ್ರಶೇಖರ್ ತಮ್ಮ ಪುತ್ರ ಸಿ.ಚಿರಂತ್ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಇಲ್ಲಿನ ಕಂದಾಯ ಇಲಾಖೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೋರಿ ವಾರಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ವಾರಗಳ ನಂತರ ಇಲಾಖೆ ಹಿಂಬರಹದೊಂದಿಗೆ ದೃಢೀಕರಣ ಪತ್ರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ: ಭೋವಿ ಸಮುದಾಯಕ್ಕಾಗಿ ಕಲ್ಲು,ಮಣ್ಣು ಗಣಿಗಾರಿಕೆ ಕಾನೂನಿಗೆ ತಿದ್ದುಪಡಿ: ಸಿಎಂ ಬೊಮ್ಮಾಯಿ

ಅರ್ಜಿದಾರರು ನೀಡಿದ ವಿಳಾಸದಲ್ಲಿ ವಾಸಿಸುತಿಲ್ಲ, ಅರ್ಜಿಯಲ್ಲಿ ಸೂಚಿಸಿದ ಜಾತಿಗೆ ಸೇರಿದವನಲ್ಲ. ಅರ್ಜಿದಾರ ಮೂಲತಃ ಬೇರೆ ಜಿಲ್ಲೆಯವರಾಗಿದ್ದು, ಆ ಜಿಲ್ಲೆಯ ಜಾತಿ ಪುರಾವೆಯನ್ನು ನೀಡಿಲ್ಲ. ನಾಗರಿಕನು ಆದಾಯ ದಾಖಲೆಯನ್ನು ಅಪ್‌ಲೋಡ್ ಮಾಡಿರುವುದಿಲ್ಲ ಹಾಗೂ ಕೇಳಿದಾಗ ನೀಡಿಲ್ಲ ಎಂದು ಹಿಂಬರಹದಲ್ಲಿ ಹೇಳಲಾಗಿದೆ. ವಾಸ್ತವವಾಗಿ ಚಂದ್ರಶೇಖರ್ ಈಗಾಗಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿದ್ದರೂ, ಮಗನ ದ್ವಿತೀಯ ಪಿಯುಸಿ ನಂತರದ ಮುಂದಿನ ಶಿಕ್ಷಣಕ್ಕಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಪಡಿತರ ಚೀಟಿ, ಚಿರಂತ್ ಅವರ ಆಧಾರ್ ಕಾರ್ಡ್ ಮತ್ತು ಹತ್ತನೆ ತರಗತಿಯ ಶಾಲಾ ದಾಖಲೆಗಳನ್ನು ಒದಗಿಸಿದ್ದಾರೆ. ಆಧಾರ್ ಕಾರ್ಡ್‌ನಲ್ಲಿ ಸಾಗರದ ಅಶೋಕ್ ರಸ್ತೆಯ ನಿವಾಸಿ ಎಂಬ ದಾಖಲೆ ಇದೆ. ಶಾಲಾ ದಾಖಲೆಯಲ್ಲಿ ಹಿಂದೂ ದೈವಜ್ಞ ಬ್ರಾಹ್ಮಣ ಎಂದು ನಮೂದಾಗಿದೆ.

Advertisement

ಅರ್ಜಿದಾರರು ಮತ್ತು ಅವರ ಪುತ್ರ ಸಾಗರದವರಾಗಿದ್ದು, ದಾಖಲೆಗಳಿವೆ. ಅಲ್ಲದೇ ಅರ್ಜಿದಾರ ಚಂದ್ರಶೇಖರ್ ದೈವಜ್ಞ ಬ್ರಾಹ್ಮಣ ಸಮಾಜದವರಾಗಿದ್ದು, ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಕಂದಾಯ ಇಲಾಖೆ ದೃಢೀಕರಣ ಪತ್ರ ನಿರಾಕರಿಸಿರುವುದು ಮತ್ತು ನಿರಾಕರಣೆಗೆ ನೀಡಿದ ಕಾರಣ ಗಮನಿಸಿ ಚಂದ್ರಶೇಖರ್ ಅವರಿಗೆ ಆಶ್ಚರ್ಯವಾಗಿದೆ.

ದೈವಜ್ಞ ಬ್ರಾಹ್ಮಣ ಜಾತಿಗೆ ಸೇರಿದ ನಾನು 2ಎ ವಿಭಾಗಕ್ಕೆ ಸೇರುತ್ತೇನೆ. ನಾನು ಮತ್ತು ನನ್ನ ಮಗ ಸಾಗರದಲ್ಲಿಯೇ ಹುಟ್ಟಿ ಬೆಳೆದವರು. ಅಗತ್ಯ ದಾಖಲೆ ಸಹ ನೀಡಿದ್ದೇನೆ. ಆದರೆ ಹಿಂಬರಹದಲ್ಲಿ ಜಾತಿಗೆ ಸೇರಿದವನಲ್ಲ ಮತ್ತು ಈ ಜಿಲ್ಲೆಯವನಲ್ಲ ಎಂದು ತಿಳಿಸಿರುವುದು ಆಶ್ಚರ‍್ಯ ತಂದಿದೆ. ಶನಿವಾರ ಹಿಂಬರಹ ದೊರಕಿದ್ದು, ಸೋಮವಾರ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲಾಗುವುದು. ಕೆ.ಎಸ್.ಚಂದ್ರಶೇಖರ್

Advertisement

Udayavani is now on Telegram. Click here to join our channel and stay updated with the latest news.

Next