ಸಾಗರ: ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ಕಳೆದುಕೊಂಡ ಶರಾವತಿ ಸಂತ್ರಸ್ತರ ಬದುಕಿಗೆ ಬೆಳಕು ನೀಡುವಲ್ಲಿ ನಾವೆಲ್ಲಾ ವಿಫಲವಾಗಿದ್ದೇವೆ. ಐದಾರು ದಶಕಗಳ ಅವರ ಹೋರಾಟಕ್ಕೆ ಎಲ್ಲರೂ ಸೇರಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ತಾಲೂಕಿನ ಚಿಪ್ಳಿಯ ಆದಿಶಕ್ತಿ ನಗರದಲ್ಲಿ ಸೋಮವಾರ ಬಿಲ್ಲವ ಸಂಘದ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಸಂದರ್ಭದಲ್ಲಿ ಒಂದಿಲ್ಲೊಂದು ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಕ್ಕೆ ತಾವು ಬದ್ಧರಿದ್ದೇವೆ ಎಂದರು.
ಬಿಲ್ಲವ ಸಮುದಾಯ ಬಾಂಧವರು ಅತ್ಯಂತ ಸುಸಜ್ಜಿತವಾಗಿ ಸಮುದಾಯ ಭವನ ನಿರ್ಮಿಸಿದ್ದು, ಇದಕ್ಕೆ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಸಂಸದರ ಅನುದಾನದಲ್ಲಿ ಸುಮಾರು 1.25 ಕೋಟಿ ರೂ. ನೀಡಿದ್ದೇವೆ. ಶುಭ ಸಮಾರಂಭಗಳಿಗೆ ಇಂತಹ ಸಮುದಾಯ ಭವನ ಅತ್ಯಗತ್ಯವಾಗಿದ್ದು, ನಿಮ್ಮ ಆಶೀರ್ವಾದದಿಂದ ನಾವು ಗೆದ್ದು ಬಂದಿದ್ದೇವೆ. ನಿಮ್ಮ ಬೇಡಿಕೆ ಈಡೇರಿಸುವುದು ನಮ್ಮ ಆದ್ಯ ಕರ್ತವ್ಯ. ಈಡಿಗ, ಬಿಲ್ಲವ ಸಮುದಾಯದ ಸಮುದಾಯ ಭವನಕ್ಕೆ ಸುಮಾರು 5 ಕೋಟಿ ರೂ. ಅನುದಾನ ನೀಡಿದ್ದಾಗಿ ತಿಳಿಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಈಡಿಗ ಸಮುದಾಯ ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದು 26 ಪಂಗಡಗಳನ್ನು ಒಳಗೊಂಡಿದೆ. ನಮ್ಮ ಹಕ್ಕುಗಳನ್ನು ಪಡೆಯಲು ನಾವು ಸಂಘಟಿತರಾಗುವುದು ಅನಿವಾರ್ಯವಾಗಿದೆ. ಈಡಿಗ ಸಮುದಾಯದ ಶ್ರೇಯೋಭಿವೃದ್ಧಿಗೆ ನಿಗಮ ಸ್ಥಾಪಿಸುವ ಬೇಡಿಕೆ ಅನೇಕ ವರ್ಷಗಳದ್ದಾಗಿದೆ. ಆದರೆ ಈತನಕ ಈಡೇರಿಲ್ಲ. ಈಗ ನಮ್ಮದೇ ಸರ್ಕಾರವಿದ್ದು ಅಭಿವೃದ್ಧಿ ನಿಗಮ ಸ್ಥಾಪಿಸಿ 500ಕೋಟಿ ರೂ. ಅನುದಾನ ನೀಡಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಾಗುತ್ತದೆ. ಸಮುದಾಯ ಬಂದಾಗ ರಾಜಕೀಯವನ್ನು ಮೀರಿ ಎಲ್ಲರೂ ಒಟ್ಟಾಗ ಬೇಕು. ಸಮುದಾಯ ಬಾಂಧವರು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕಳೆದ ಸರ್ಕಾರದ ಅವಧಿಯಲ್ಲಿ ಈಡಿಗ ಅಭಿವೃದ್ಧಿ ನಿಗಮಕ್ಕೆ ಸಂಬಂಧಪಟ್ಟಂತೆ ಗೆಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಕೊನೆ ಹಂತದಲ್ಲಿ ಅದು ಸಾಧ್ಯವಾಗಿರಲಿಲ್ಲ. ಈಗಿನ ಸರ್ಕಾರದಲ್ಲಿ ಅದನ್ನು ಅನುಷ್ಠಾನಕ್ಕೆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ. ಬಿಲ್ಲವ ಸಮಾಜ ಬಾಂಧವರು ಅತ್ಯಂತ ಸುಂದರವಾದ ಸಮುದಾಯ ಭವನ ನಿರ್ಮಿಸಿದ್ದು ಇದಕ್ಕೆ ನಾನು ಸಚಿವನಾಗಿದ್ದಾಗ 75 ಲಕ್ಷ ರೂ. ಅನುದಾನ ನೀಡುವ ಜೊತೆಗೆ ಬಿ.ವೈ.ರಾಘವೇಂದ್ರ ಮತ್ತು ಹಾಲಪ್ಪ ಹರತಾಳು ಅವರ ಮನವಿ ಮೇರೆಗೆ ಯಡಿಯೂರಪ್ಪ ಅವರು ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದರು ಎಂದು ತಿಳಿಸಿದರು.
ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ನ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ಸಮುದಾಯ ಭವನ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಡಾ. ಎಸ್. ರಾಮಪ್ಪ ಸಿಗಂದೂರು, ಡಾ. ರಾಜನಂದಿನಿ, ಸುಮತಿ ಪೂಜಾರಿ, ನಾಗರಾಜ್ ಎಲ್., ಬಿ.ಎಸ್.ಸುಂದರ್, ರಾಜು ಬೇಸೂರು, ಕೆ. ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು. ಅಂಕಿತ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಈಶ್ವರ ಸಿ. ಅಡ್ಡೇರಿ ಸ್ವಾಗತಿಸಿದರು. ನಾಗರಾಜ್ ಗೀಜಗಾರು ಪ್ರಾಸ್ತಾವಿಕ ಮಾತನಾಡಿದರು. ರಾಜು ಎಸ್. ವಂದಿಸಿದರು. ಎಂ.ನಾಗರಾಜ್ ನಿರೂಪಿಸಿದರು.