ಸಾಗರ: ಜಿಪಂ ಸದಸ್ಯರಾಗುವುದಕ್ಕಿಂತ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದರೆ ಹೆಚ್ಚು ಬೆಲೆ ಸಿಗುವ ಪರಿಸ್ಥಿತಿಯಿದೆ. ಹೆಚ್ಚಿನ ಹಣದ ಅಧಿಕಾರ ಕೂಡ ಗ್ರಾಮ ಪಂಚಾಯ್ತಿಗೆ ಸಿಕ್ಕಿದೆ. ಈ ಬಾರಿ ಪ್ರತಿ ಪಂಚಾಯ್ತಿಗೆ ಒಂದು ಕೋಟಿ ರೂ. ಸಿಗುತ್ತಿದೆ ಎಂದು ಪಂಚಾಯತ್‌ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದರು.
ನಗರದ ತಾಪಂನ ಸಾಮರ್ಥ್ಯ ಸೌಧದಲ್ಲಿ ಭಾನುವಾರ ತಾಲೂಕು ಪಂಚಾಯ್ತಿ ವ್ಯಾಪ್ತಿಯ ಉದ್ಯೋಗಖಾತ್ರಿ, ಕುಡಿಯುವ ನೀರು, ಅಂತರ್ಜಲ ಪುನಶ್ಚೇತನ ಯೋಜನೆ, ಕೆಎಫ್‌ಡಿ ಹಾಗೂ ಕೋವಿಡ್ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಪಟ್ಟ ಟಾಸ್ಕ್ ಪೋರ್ಸ್ ಸಭೆಗೆ ಜಿಪಂ ಸದಸ್ಯರನ್ನು ಕರೆಯುತ್ತಿಲ್ಲ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಾನೂನಿನ ಸಮಗ್ರ ಬದಲಾವಣೆ ಆಗಬೇಕಿದೆ. ಆದರೆ ಅದು ನನ್ನ ಕೈಯಲ್ಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿ ಕೆಲಸ ಮಾಡಲು ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಕೆಲಸದವರು ಸಿಗುತ್ತಾರೆ. ಇದನ್ನು ಬಳಸಿಕೊಂಡು ಕೆರೆಗಳ ಪುನರುಜ್ಜೀವನ ನೀಡುವ ಕೆಲಸ ಆಗಬೇಕು. ಸಾಗರದಲ್ಲಿ 102 ಕೆರೆಗಳ ಹೂಳು ತೆಗೆಯುವ ಕೆಲಸವನ್ನು ಕೈಗೆತ್ತಿಕೊಂಡಿದ್ದರೂ ಜೂನ್ ಐದರ ಪರಿಸರ ದಿನದ ಅವ ಧಿಯಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಒಂದು ಕೆರೆಯ ಹೂಳು ತೆಗೆಯವುದು ಕಾಮಗಾರಿ ಮುಕ್ತಾಯವಾಗಬೇಕು ಎಂದು ಸೂಚಿಸಿದರು.
ಕೆಎಫ್‌ಡಿ ಕುರಿತು ಸಭೆಯಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು, ಸಾಗರದಲ್ಲಿಯೇ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವುದು ಹೆಚ್ಚು ಸೂಕ್ತ. ಶಿವಮೊಗ್ಗದಲ್ಲಿ ಸ್ಥಾಪಿಸಲು ಐಎಎಸ್ ಲಾಬಿ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಕೇಂದ್ರ ಸ್ಥಾಪನೆಯಾದರೆ ರೋಗಿಗಳಿಗೆ ಸಮಸ್ಯೆಯಾಗುತ್ತದೆ. ಶಿವಮೊಗ್ಗದಲ್ಲಿ ಕೇವಲ ಮುಕ್ಕಾಲು ಎಕರೆ ಜಾಗವಿದೆ. ಸಾಗರದಲ್ಲಿ ಕೇಂದ್ರಕ್ಕಾಗಿ ಆರು ಎಕರೆ ಜಾಗವನ್ನು ಗುರುತಿಸಲಾಗಿದೆ. ಇದಕ್ಕೆ ಸಭೆ ನಿರ್ಣಯ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.
ಸಾಗರದಲ್ಲಿಯೇ ಪ್ರಾರಂಭಿಸುವ ಬಗ್ಗೆ ನಾನು ಹಿಂದೆ ಭರವಸೆ ನೀಡಿದ್ದೇನೆ. ನಿರ್ಣಯದಿಂದ ಹೆಚ್ಚಿನ ಅನುಕೂಲ ಆಗುತ್ತದೆ ಎನ್ನಿಸುವುದಿಲ್ಲ. ಇನ್ನೊಮ್ಮೆ ಮುಖ್ಯಮಂತ್ರಿಗಳ ಬಳಿ ನಿಮ್ಮ ಸಮ್ಮುಖದಲ್ಲಿ ಸಂಶೋಧನಾ ಕೇಂದ್ರ ಸಾಗರದಲ್ಲಿಯೇ ಸ್ಥಾಪಿಸುವಂತೆ ಒತ್ತಾಯಿಸುತ್ತೇನೆ ಎಂದು ಸಚಿವರು ಹೇಳಿದರು. ತಾಪಂ ಉಪಾಧ್ಯಕ್ಷ ಅಶೋಕ್ ಬರದವಳ್ಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಸಹಾಯಕ ಆಯುಕ್ತ ಡಾ| ನಾಗರಾಜ್ ಇದ್ದರು.