ಸಾಗರ: ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾಮಗಾರಿ ಮುಕ್ತಾಯಗೊಂಡ ನಂತರ ಟೆಂಡರ್ ಷರತ್ತುಗಳಿಗೆ ಅನ್ವಯವಾಗಿ ನಿರ್ಮಾಣ ವಾಗಿರುವುದನ್ನು ಖಚಿತಪಡಿಸಿಕೊಂಡು ಗ್ರಾಪಂಗಳು ತಮಗೆ ಹಸ್ತಾಂತರಿಸಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲದೆ ಪರಿಶೀಲನೆ ನಡೆಸಬೇಕು. ಒಂದೊಮ್ಮೆ ಕಾಮಗಾರಿ ಸಂಪೂರ್ಣವಾಗದಿದ್ದರೂ, ಕಳಪೆಯಾಗಿದ್ದರೂ ವಹಿಸಿಕೊಂಡಿದ್ದರೆ ಅಂತಹ ಪ್ರಕರಣಗಳಲ್ಲಿ ಆಯಾ ಗ್ರಾಪಂಗಳ ಪಿಡಿಒ ಅಥವಾ ಕಾರ್ಯದರ್ಶಿಗಳೇ ಮುಂದಿನ ಶಿಸ್ತು ಕ್ರಮಗಳಿಗೆ ಜವಾಬ್ದಾರರಾಗಿರುತ್ತಾರೆ ಎಂದು ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.
ನಗರದ ಸಾಮರ್ಥ್ಯ ಸೌಧದಲ್ಲಿ ತಾಪಂ ಅಧಿಕಾರಿಗಳ ಮುಂದುವರಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚಾಯತ್ ಗೆ ಹಸ್ತಾಂತರ ಪ್ರಕ್ರಿಯೆ ನಡೆಯದೆ ಕಾಮಗಾರಿಗಳ ಬಿಲ್‌ನ್ನು ಗುತ್ತಿಗೆದಾರರಿಗೆ ಪಾವತಿಸಿದರೆ ಆಗ ಆಯಾ ಇಲಾಖೆಯ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ. ಈಗಾಗಲೇ ಹಳೆಇಕ್ಕೇರಿ, ತಲವಾಟ, ಅಂಬಾರಗೊಡ್ಲು ಮೊದಲಾದೆಡೆ ಕಾಮಗಾರಿಯ ಹೆಸರಿನಲ್ಲಿ ಕೆಲಸ ಆಗದಿದ್ದರೂ ಹಣ ಮಂಜೂರಾಗಿರುವುದು ಕಂಡುಬಂದಿದೆ. ಈ ಕುರಿತು ಇನ್ನಷ್ಟು ವಿಸ್ತ್ರತ ತನಿಖೆ ನಡೆಸಿ ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಪಂಚಾಯತ್ ಪಿಡಿಒಗಳು ಕಚೇರಿಯಲ್ಲಿ ಕುಳಿತರೆ ಕಾಮಗಾರಿಗಳ ಕುರಿತು ಮಾಹಿತ ಸಿಗುವುದಿಲ್ಲ. ಕುಡಿಯುವ ನೀರು ಸರಬರಾಜು ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೈಗೆತ್ತಿಕೊಳ್ಳುವ ಪ್ರತಿಯೊಂದು ಯೋಜನೆಯ ಮಾಹಿತಿಯನ್ನು ಗ್ರಾಪಂಗಳು ಪಡೆದುಕೊಳ್ಳಬೇಕು. ಮಾಹಿತಿ ಹಕ್ಕಿನ ಮೂಲಕ ಸಾಮಾನ್ಯ ನಾಗರಿಕ ಇಂತಹ ದಾಖಲೆ ಪಡೆದುಕೊಳ್ಳುವಾಗ ನಮಗೆ ಮಾಹಿತಿ ಇಲ್ಲ ಎಂದು ಗ್ರಾಪಂಗಳು ಸಬೂಬು ಹೇಳುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಲಿಖೀತವಾಗಿ ಮನವಿ ಸಲ್ಲಿಸಿ ಯೋಜನೆಯ ವಿವರ ಪಡೆದು ತಮ್ಮ ಪಂಚಾಯತ್ ಮಟ್ಟದಲ್ಲಿ ನಡೆಯುವ ಪ್ರತಿ ಕೆಲಸದ ಯೋಜನಾ ವಿವರವನ್ನು ಪಂಚಾಯತ್ ಅಧಿಕಾರಿಗಳು ಪಡೆದು ವಿಶ್ಲೇಷಣೆ ನಡೆಸಬೇಕು. ಈಗ ಪಂಚಾಯತ್
ಮಟ್ಟದಲ್ಲಿ ಕೂಡ ಅಧಿ ಕಾರಿಗಳ ಪ್ರಗತಿ ಪರಿಶೀಲನಾ ಸಭೆ ಮಾಡುವ ಅವಕಾಶ ಕೊಡಲಾಗಿರುವುದರಿಂದ ಈ ಕೆಲಸವನ್ನು ಇನ್ನಷ್ಟು ಸಮರ್ಥವಾಗಿ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಪಿಡಿಒಗಳು, ಉಪಾಧ್ಯಕ್ಷ ಅಶೋಕ್ ಬರದವಳ್ಳಿ, ಪ್ರಭಾರಿ ಕಾರ್ಯ ನಿರ್ವಾಹಕ ಅಧಿಕಾರಿ ಬಾಲಸುಬ್ರಮಣ್ಯ ಇದ್ದರು. ಫೆ. 18ರಂದು ನಡೆದ ಮಾಸಿಕ ಕೆಡಿಪಿಯ ಕಲಾಪ ಪಟ್ಟಿ ಪೂರೈಸಿಲ್ಲದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.