Advertisement

Sagara: ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠೆ; ನಗರದ ಹಲವೆಡೆ ಸಂಭ್ರಮ

03:47 PM Jan 22, 2024 | Team Udayavani |

ಸಾಗರ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠೆ ಹಿನ್ನೆಲೆ ಸೋಮವಾರ ಸಾಗರ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಭಕ್ತರು ಶ್ರೀರಾಮನ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಿ, ಪ್ರಮುಖ ಬೀದಿಗಳಿಗೆ ಕೇಸರಿ ಬಂಟಿಂಗ್ಸ್ ಹಾಕುವ ಜೊತೆಗೆ ತಳಿರು ತೋರಣದ ಮೂಲಕ ಶೃಂಗಾರ ಮಾಡಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಸಂಭ್ರಮಿಸಿದರು.

Advertisement

ನಗರದ ಗಾಂಧಿಮಂದಿರದಲ್ಲಿ ಕಾಂಗ್ರೆಸ್ ವತಿಯಿಂದ ಶ್ರೀರಾಮನ ಬೃಹತ್ ಭಾವಚಿತ್ರ ಹಾಗೂ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ವಿಶೇಷ ಪೂಜೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾವು ಕಾಂಗ್ರೆಸ್ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮ ನಡೆಸಿ ದೇಶಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

ಮಹಾತ್ಮಾ ಗಾಂಧೀಜಿಯವರು ರಾಮನ ಪರಮಭಕ್ತರಾಗಿದ್ದು, ರಾಮರಾಜ್ಯ ಸ್ಥಾಪನೆ ಕನಸು ಕಂಡಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಮ ಭಜನೆಯನ್ನು ಸಾಮೂಹಿಕವಾಗಿ ನಡೆಸುತ್ತಿದ್ದರು. ಅವರಿಗೆ ಗುಂಡೇಟು ಬಿದ್ದ ಕೊನೆ ಕ್ಷಣದಲ್ಲೂ ಅವರು ಹೇ ರಾಮ್ ಎಂದೇ ಪ್ರಾಣ ಬಿಟ್ಟರು. ನಾವು ಏನೇ ತೊಂದರೆಯಾದರೂ ಮೊದಲು ಅಮ್ಮ ಎಂದು ಉಚ್ಚರಿಸುತ್ತೇವೆ. ಮಹಾತ್ಮಾ ಗಾಂಧೀಜಿಯವರು ಎಂತಹ ದೈವಭಕ್ತರಾಗಿದ್ದರೂ ಮತ್ತು ಶ್ರೀರಾಮನ ಆದರ್ಶವನ್ನು ತಮ್ಮ ಹೃದಯಾಂತರಾಳದಿಂದ ಹೇಗೆ ಗೌರವಿಸುತ್ತಿದ್ದರು ಎನ್ನುವುದು ಇದರಿಂದ ತಿಳಿಯುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಪ್ರಮುಖರಾದ ಐ.ಎನ್.ಸುರೇಶಬಾಬು, ಚೇತನರಾಜ್ ಕಣ್ಣೂರು, ಜ್ಯೋತಿ ಕೋವಿ, ಅನಿತಾ ಕುಮಾರಿ, ಮಹಾಬಲ ಕೌತಿ, ಸೋಮಶೇಖರ ಲ್ಯಾವಿಗೆರೆ, ಮಧುಮಾಲತಿ, ಪರಿಮಳ, ಗಣಪತಿ ಮಂಡಗಳಲೆ, ಉಮೇಶ್, ಆನಂದ ಭೀಮನೇರಿ, ಮೈಕೆಲ್ ಡಿಸೋಜ, ದಿನೇಶ್ ಡಿ., ಅಶೋಕ ಬೇಳೂರು, ಚಿನ್ಮಯ್, ನಾಗರತ್ನ ಇನ್ನಿತರರು ಹಾಜರಿದ್ದರು.

Advertisement

ವಿಶ್ವ ಹಿಂದೂ ಪರಿಷತ್‌ನಿಂದ ಸಂಭ್ರಮಾಚರಣೆ: ಇಲ್ಲಿನ ಸುಭಾಷ್ ನಗರ ಚಿಲುಮೆಕಟ್ಟೆ ಭೂತೇಶ್ವರ ದೇವಸ್ಥಾನದ ಸಮೀಪ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ, ಇದೊಂದು ಐತಿಹಾಸಿಕ ಕ್ಷಣವಾಗಿದೆ. ದೇಶವಾಸಿಗಳ ಶತಮಾನದ ಕನಸನ್ನು ಪ್ರಧಾನಿ ನರೇಂದ್ರ ಮೋದಿಯವರು ನನಸು ಮಾಡಿದ್ದಾರೆ. ಮರ್ಯಾದಾ ಪುರೊಷೋತ್ತಮ ಶ್ರೀರಾಮಚಂದ್ರ ಪ್ರಭುವಿನ ಪ್ರತಿಷ್ಠಾಪನೆ ನೆರವೇರಿರುವುದು ದೇಶದ ಸನಾತನ ಹಿಂದೂ ಧರ್ಮಿಗಳ ಶತಶತಮಾನದ ಆಸೆ ಈಡೇರಿದೆ ಎಂದರು.

ಈ ಸಂದರ್ಭದಲ್ಲಿ ಪುರುಷೋತ್ತಮ್, ಕಿರಣ್ ಗೌಡ, ಮೈತ್ರಿ ಪಾಟೀಲ್, ಶೇಖರ್ ಇನ್ನಿತರರು ಹಾಜರಿದ್ದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಗಣೇಶಪ್ರಸಾದ್, ಪ್ರಮುಖರಾದ ಚೇತನ್, ರವೀಂದ್ರ ಬಿ.ಟಿ., ಅರುಣ ಕುಗ್ವೆ, ಸತೀಶ್ ಮೊಗವೀರ ಇನ್ನಿತರರು ಹಾಜರಿದ್ದರು.

ವಿವಿಧ ಕಡೆ ವಿಶೇಷ ಪೂಜೆ: ಇಲ್ಲಿನ ವಾಸವಿ ಯುವಜನ ಸಂಘದ ವತಿಯಿಂದ ಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರೇಶ್ವರ ದೇವಸ್ಥಾನದಲ್ಲಿ ರಾಮತಾರಕ ಹವನ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಸಲಾಗಿತ್ತು.

ಸಾಗರದ ಶ್ರೀ ಮಹಾಗಣಪತಿ ದೇವಸ್ಥಾನ, ರಥಬೀದಿಯ ರಾಮಮಂದಿರ, ಅಣಲೆಕೊಪ್ಪದ ಶ್ರೀಪ್ರಸಾದ ಗಣಪತಿ ದೇವಸ್ಥಾನ, ಶಿವಪ್ಪನಾಯಕ ನಗರದ ದೈವಜ್ಞ ಸಮಾಜದ ರಾಮ ದೇವಸ್ಥಾನ, ಉಪ್ಪಾರ ಸಮಾಜದ ವೀರಾಂಜನೇಯ ದೇವಸ್ಥಾನ, ಸತ್ಯನಾರಾಯಣ ಸ್ವಾಮಿ ದೇವಸ್ಥಾನ, ವೆಂಕಟರಮಣಸ್ವಾಮಿ ದೇವಸ್ಥಾನ, ಗುಡಿಗಾರ ಸಮಾಜದ ಶ್ರೀರಾಮ ದೇವಸ್ಥಾನ, ವರದಪುರದ ಶ್ರೀಧರಾಶ್ರಮ, ವರದಾಮೂಲ, ಸಿಗಂದೂರಿನ ಚೌಡೇಶ್ವರಿ ದೇವಸ್ಥಾನ ಒಳಗೊಂಡಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಎಲ್ಲಾ ದೇವಾಲಯಗಳಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ವಿಶೇಷ ಪೂಜೆ ನಡೆಸಿ ಸಂಭ್ರಮಿಸಲಾಯಿತು.

ನಗರದ ಎಲ್ಲ ವೃತ್ತಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಬೃಹತ್ ಭಾವಚಿತ್ರ ಅಳವಡಿಸಿ, ಪಾನಕ, ಕೋಸಂಬರಿ ಹಂಚಿ ಸಂಭ್ರಮಿಸಲಾಯಿತು. ನಗರದ ಪ್ರಮುಖ ವೃತ್ತಗಳಲ್ಲಿ ಟಿವಿ ಅಳವಡಿಸಿ ನೇರಪ್ರಸಾರದ ವ್ಯವಸ್ಥೆ ಮಾಡಿದ್ದರು. ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next