Advertisement

ರೈಲ್ವೆ ಅಂಡರ್‌ಪಾಸ್‌ ಅವೈಜ್ಞಾನಿಕ ಕಾಮಗಾರಿಗೆ ಆಕ್ರೋಶ

04:35 PM Jun 29, 2019 | Naveen |

ಸಾಗರ: ತಾಲೂಕಿನ ತ್ಯಾಗರ್ತಿ ಸಮೀಪದ ಅಡ್ಡೇರಿಯಲ್ಲಿರುವ ರೈಲ್ವೆ ಅಂಡರ್‌ಪಾಸ್‌ ಕಾಮಗಾರಿ ಅವೈಜ್ಞಾನಿಕವಾಗಿದ್ದುದನ್ನು ರೈಲ್ವೆ ಇಲಾಖೆಗೆ ಖುದ್ದು ಸಂಸದ ಬಿ.ವೈ. ರಾಘವೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಗಮನಕ್ಕೆ ತಂದಿದ್ದರು. ಆದರೆ ಈ ವರ್ಷದ ಮಳೆಗಾಲದ ಆರಂಭದ ಈ ದಿನಗಳಲ್ಲೂ ದುರಸ್ತಿ ಕಾರ್ಯ ನಡೆಯುವುದರಿಂದ ಈ ವರ್ಷವೂ ಮಳೆ ಹೆಚ್ಚಿದ ಸಂದರ್ಭಗಳಲ್ಲಿ ರಸ್ತೆ ಸಂಪರ್ಕ ಅಸ್ತವ್ಯಸ್ತಗೊಳ್ಳಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅಡ್ಡೇರಿ ಗ್ರಾಮದಲ್ಲಿ ರೈಲ್ವೆ ಗೇಟ್ ನಂ. 117ರಲ್ಲಿ ಅಂಡರ್‌ಪಾಸ್‌ ವ್ಯವಸ್ಥೆಗೆ ಅನರ್ಹವಾಗಿದ್ದರೂ ಕಳೆದ ವರ್ಷ ಅಧಿಕಾರಿಗಳು ಈ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಮಳೆಯ ನೀರಿನಿಂದ ಅಂಡರ್‌ಪಾಸ್‌ನಲ್ಲಿ 3ರಿಂದ 4 ಅಡಿಗಳಷ್ಟು ನೀರು ಶೇಖರಣೆಯಾಗುತ್ತದೆ. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಗಮನಕ್ಕೆ ತಂದಾಗ ಸ್ಥಳಕ್ಕೆ ಭೇಟಿ ನೀಡಿ ನೀರು ಅಂಡರ್‌ಪಾಸ್‌ನಿಂದ ಹೊರ ಹೋಗಲು ಸಮರ್ಪಕ ಪೈಪ್‌ ಲೈನ್‌ ಅಥವಾ ಕಾಲುವೆಗಳನ್ನು ನಿರ್ಮಿಸಲು ಸ್ಥಳದಲ್ಲಿಯೇ ರೈಲ್ವೆ ಎಂಜಿನಿಯರ್‌ ಸದಾಶಿವ ಅವರಿಗೆ ಮೌಖೀಕ ಅದೇಶ ನೀಡಿದ್ದರು. ಈ ಸಂದರ್ಭದಲ್ಲಿ ಇದ್ದ ರೈಲ್ವೆ ಎಂಜಿನಿಯರ್‌ ಅಕ್ಟೋಬರ್‌ ನಂತರ ಪೈಪ್‌ಲೈನ್‌ ಮುಖಾಂತರ ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು.

ಆದರೆ ರೈಲ್ವೆ ಇಲಾಖೆ ನೀಡಿದ ಭರವಸೆ ಕಾರ್ಯಗತವಾಗಿಲ್ಲ. ಕಳೆದ ಮಳೆಗಾಲದಲ್ಲಿ 1.4 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಅಂಡರ್‌ ಪಾಸ್‌ನಲ್ಲಿ ಸಂಗ್ರಹವಾಗುವ ನೀರಿನ ನಿರ್ವಹಣೆಗೆ ಪೈಪ್‌ ವ್ಯವಸ್ಥೆ ಆಗಿಲ್ಲ. ಎಂದಿನಂತೆ ಈ ವರ್ಷವೂ ವಾಹನ ಸಂಚಾರ ಹಾಗೂ ಜನರು ಓಡಾಡದಂತಹ ಸ್ಥಿತಿ ನಿರ್ಮಾಣವಾಗಲಿದೆ. ಅಂಡರ್‌ಪಾಸ್‌ನಲ್ಲಿ ನೀರು ಶೇಖರಣೆಯಾದರೆ ಅಡ್ಡೇರಿ, ಕೆಳಗಿನಮನೆ, ಬಿಲಗುಂಜಿ, ಚಿಕ್ಕಬಿಲಗುಂಜಿ, ಬ್ಯಾಡರಕೊಪ್ಪ, ಜಂಬೂರಮನೆ ಗ್ರಾಮದ ಜನರು ಸಂಚರಿಸದಂತೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಗರಗಳಿಗೆ ಹೋಗಲು ತೊಂದರೆಯಾಗುತ್ತದೆ.

ಹಿರೇಬಿಲಗುಜಿ ಗ್ರಾಪಂ ಮಾಜಿ ಅಧ್ಯಕ್ಷೆ ಮಲ್ಲಿಕಾ ಮಂಜುನಾಥ್‌, ಈ ವ್ಯವಸ್ಥೆಯು ಅವೈಜ್ಞಾನಿಕವಾದದ್ದು. ಮಳೆಗಾಲದಲ್ಲಿ ನೀರು ನಿಲ್ಲುತ್ತದೆ ಎಂದು ಹಲವು ಬಾರಿ ಅಧಿಕಾರಿಗಳಿಗೆ ಹೇಳಿದರೂ ನಮ್ಮ ಮಾತಿಗೆ ಸ್ಪಂದಿಸದೆ, ವಿರೋಧ ಪಕ್ಷದ ಹಾಗೂ ಸಂಸದರ ಮಾತನ್ನೂ ನಿರ್ಲಕ್ಷಿಸಿದ್ದಾರೆ ಎಂದರು. ಜನಪ್ರತಿನಿಧಿಗಳು ಬಂದಾಗ ಎಲ್ಲ ಕೆಲಸ ಮಾಡುವುದಾಗಿ ಹೇಳುವ ರೈಲ್ವೆ ಇಲಾಖೆಯ ಅಧಿಕಾರಿಗಳು ನಂತರ ತಮಗೇನೂ ತಿಳಿದಿಲ್ಲ ಎಂಬಂತೆ ನಟಿಸುತ್ತಾರೆ ಎಂದು ತಾಪಂ ಸದಸ್ಯ ಸೋಮಶೇಖರ್‌ ಲಾವಿಗೆರೆ ಆರೋಪಿಸಿದರು. ಮೇಲಧಿಕಾರಿಗಳಿಗೆ ಅಂದಾಜು ವೆಚ್ಚದ ವರದಿ ನೀಡಿದ್ದು ಮಂಜೂರಾತಿ ದೊರೆತ ನಂತರ ಕೆಲಸ ಆರಂಭಿಸಲಾಗುವುದು ಎಂದು ರೈಲ್ವೆ ಜೂನಿಯರ್‌ ಎಂಜಿನಿಯರ್‌ ಈಶ್ವರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next