Advertisement

ಲಾಂಚ್ ಡಿಕ್ಕಿ: ತನಿಖೆಗೆ ಸೂಚನೆ

05:13 PM Sep 14, 2019 | Naveen |

ಸಾಗರ: ತಾಲೂಕಿನ ಅಂಬಾರಗೋಡ್ಲು- ಕಳಸವಳ್ಳಿ ಕಡವಿನ ಲಾಂಚ್‌ಗಳು ಪರಸ್ಪರ ಡಿಕ್ಕಿಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಒಳನಾಡು ಜಲಸಾರಿಗೆ ಇಲಾಖೆಯ ಪ್ರಾಂತೀಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ಎಚ್. ಹಾಲಪ್ಪ ತಿಳಿಸಿದರು.

Advertisement

ಇಲ್ಲಿನ ನಗರಸಭೆ ಆವರಣದ ಶಾಸಕರ ಕಚೇರಿಯಲ್ಲಿ ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಘಟನೆಗೆ ಸಂಬಂಧಪಟ್ಟಂತೆ ಸಭೆ ನಡೆಸಿ ಮಾತನಾಡಿದ ಅವರು, ಜನರ ಜೀವನದ ಜೊತೆ ಚೆಲ್ಲಾಟವಾಡುವುದನ್ನು ಮೊದಲು ಕೈಬಿಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಹೊಳೆಬಾಗಿಲು- ಅಂಬಾರಗೊಡ್ಲು ಶರಾವತಿ ಲಾಂಚ್ ಮಾರ್ಗದಲ್ಲಿ ಪರಸ್ಪರ ಎರಡು ಲಾಂಚ್‌ಗಳು ಡಿಕ್ಕಿ ಹೊಡೆದಿವೆ. ಅದೃಷ್ಟವಶಾತ್‌ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದೊಮ್ಮೆ ಡಿಕ್ಕಿ ಸಂಭವಿಸಿದಾಗ ಪ್ರಯಾಣಿಕರು ಗಾಬರಿಯಿಂದ ನೀರಿಗೆ ಹಾರುವುದು, ಲಾಂಚ್ ಪಲ್ಟಿ ಹೊಡೆಯುವುದು ನಡೆದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಚಾಲಕರ ಬೇಜವಾಬ್ದಾರಿತನವೇ ಇದಕ್ಕೆ ಕಾರಣ ಎಂದು ಪ್ರಯಾಣಿಕರು ದೂರಿದ್ದಾರೆ ಎಂದು ತಿಳಿಸಿದರು.

ಕಳಸವಳ್ಳಿ- ಅಂಬಾರಗೊಡ್ಲು ಜಲಮಾರ್ಗದಲ್ಲಿ ಸಾವಿರಾರು ಪ್ರಯಾಣಿಕರು ಪ್ರತಿನಿತ್ಯ ಲಾಂಚ್ ಪ್ರಯಾಣ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಚಾಲಕರಾಗಿ ಕೆಲಸ ಮಾಡುವವರು ಸೂಕ್ತ ತರಬೇತಿ ಮತ್ತು ಅನುಭವ ಹೊಂದಿದವರು ಆಗಿರಬೇಕಾಗುತ್ತದೆ. ಆದರೆ ಅಪಘಾತ ಸಂಭವಿಸುವ ಸಂದರ್ಭದಲ್ಲಿ ಚಾಲನೆ ಮಾಡುತ್ತಿದ್ದ ಚಾಲಕರಿಬ್ಬರೂ ಅನನುಭವಿಗಳು ಎಂದು ಸ್ಥಳೀಯ ಪ್ರಯಾಣಿಕರು ದೂರಿದ್ದಾರೆ. ಅನುಭವ ಇಲ್ಲದವರ ಕೈಗೆ ಲಾಂಚ್ ಚಾಲನೆ ಕೊಡುವ ನಿಮ್ಮ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗಾಳಿ ಮತ್ತು ನೀರಿನಲ್ಲಿ ಕೆಲಸ ಮಾಡುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಜನರ ಜೀವದ ಜೊತೆ ನಿಮ್ಮ ನೌಕರರು ಸಹ ಅಲ್ಲಿ ಕೆಲಸ ಮಾಡುತ್ತಿರುತ್ತಾರೆ. ಪ್ರತಿ ಟ್ರಿಪ್‌ ಸಂದರ್ಭದಲ್ಲಿ ಸಹ ಸೂಕ್ತ ಮುಂಜಾಗ್ರತೆ ವಹಿಸಿ. ಘಟನೆ ನಡೆದ ತಕ್ಷಣ ಮೇಲಧಿಕಾರಿಗಳಿಗೆ ನೀವು ಮಾಹಿತಿ ನೀಡಿಲ್ಲ. ಸ್ಥಳೀಯ ತಹಶೀಲ್ದಾರ್‌ಗೆ, ಪೊಲೀಸ್‌ ಇಲಾಖೆಗೆ ಮಾಹಿತಿ ನೀಡದೆ ಕರ್ತವ್ಯಲೋಪ ಎಸಗಿದ್ದೀರಿ. ಈಗಾಗಲೇ ಹೊಳೆಬಾಗಿಲು ಲಾಂಚ್‌ನಲ್ಲಿ ಟಿಕೆಟ್ನಿಂದ ಹಣ ಸಂಗ್ರಹಿಸುವ ಬಗ್ಗೆ ಸಹ ಸಾಕಷ್ಟು ದೂರುಗಳಿವೆ. ಜೊತೆಗೆ ನೌಕರರಿಗೆ ಸಂಬಳ ಸರಿಯಾಗಿ ಬರುತ್ತಿಲ್ಲ ಎನ್ನಲಾಗುತ್ತಿದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಂಚಾರ ಸೌಲಭ್ಯ ಕಲ್ಪಿಸಲು ಸರ್ಕಾರ ಲಾಂಚ್ ವ್ಯವಸ್ಥೆ ಮಾಡಿದೆ. ಅದನ್ನು ಸೂಕ್ತವಾಗಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಒಳನಾಡು ಜಲಸಾರಿಗೆ ಇಲಾಖೆಯ ಕಡವು ನಿರೀಕ್ಷಕ ಶಾಂತಾರಾಮು, ಪ್ರಭಾರ ನಿರೀಕ್ಷಕ ದಾಮೋದರ್‌, ರಾಜು, ಬಿಜೆಪಿ ಪ್ರಮುಖರಾದ ಟಿ.ಡಿ. ಮೇಘರಾಜ್‌, ಯು.ಎಚ್. ರಾಮಪ್ಪ, ದೇವೇಂದ್ರಪ್ರ, ಗಣೇಶಪ್ರಸಾದ್‌, ರೇವಪ್ಪ ಕೆ. ಹೊಸಕೊಪ್ಪ, ವಿನಾಯಕರಾವ್‌, ಅರುಣ ಕುಗ್ವೆ, ಹರೀಶ್‌ ಮೂಡಳ್ಳಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next