Advertisement

14 ದಿನಕ್ಕೆ ಕ್ವಾರಂಟೈನ್‌ ಅವಧಿ ಮುಗಿಯಲ್ಲ: ಎಸಿ

01:19 PM Apr 25, 2020 | Naveen |

ಸಾಗರ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೆಲವರು ತಮ್ಮ 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿದಿದೆ ಎಂದು ಮನೆಯ ಬಾಗಿಲಿಗೆ ಹಾಕಿದ್ದ ಕ್ವಾರಂಟೈನ್‌ ಸ್ಟಿಕ್ಕರ್‌ ಕಿತ್ತು ಹಾಕಿ ರಸ್ತೆಯಲ್ಲಿ ಓಡಾಡುತ್ತಿರುವ ಮಾಹಿತಿ ಇದೆ. ಕ್ವಾರಂಟೈನ್‌ ಅವಧಿ 28 ದಿನಗಳದ್ದಾಗಿದ್ದು, ಸ್ಟಿಕ್ಕರ್‌ ಕಿತ್ತು ಹಾಕಿರುವ ಮನೆಗಳಿಗೆ ಮತ್ತೊಮ್ಮೆ ಸ್ಟಿಕ್ಕರ್‌ ಅಂಟಿಸಬೇಕು. ಕ್ವಾರಂಟೈನ್‌ ಅವಧಿ ಮುಗಿದಿದೆ ಎಂದು ಮನೆಯಿಂದ ಹೊರಗೆ ತಿರುಗುವವರಿಗೆ ಕಡ್ಡಾಯವಾಗಿ ದಂಡ ವಿಧಿಸಿ ಎಂದು ಸಾಗರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ನಾಗರಾಜ್‌ ಎಲ್‌. ಸ್ಪಷ್ಟ ಸೂಚನೆ ನೀಡಿದರು.

Advertisement

ನಗರದ ಉಪ ವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್‌-19 ಟಾಸ್ಕ್ಫೋರ್ಸ್‌ನ ಅಧ್ಯಕ್ಷತೆ ವಹಿಸಿ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿ ಮಾತನಾಡಿದ ಅವರು, ಮಾಂಸದ ದರವನ್ನು ವ್ಯತ್ಯಯಗಳಿರುವ ದೂರುಗಳಿದ್ದು, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರತಿದಿನ ಅಂಗಡಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ದರ ಹೆಚ್ಚು ಮಾಡಿ ಗ್ರಾಹಕರ ಸುಲಿಗೆ ಮಾಡುವ ಅಂಗಡಿಗಳನ್ನು ಮುಚ್ಚಿಸಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ನೇಮಕವಾದ ನೋಡೆಲ್‌ ಅಧಿಕಾರಿಗಳು ಖಾಸಗಿ ಆಸ್ಪತ್ರೆ, ಮೆಡಿಕಲ್‌ ಶಾಪ್‌ಗ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹೊರಜಿಲ್ಲೆಗಳಿಂದ ಸಾಗರ ತಾಲೂಕಿಗೆ ಬರುವಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ಇನ್ನಷ್ಟು ನಿಗಾ ವಹಿಸಬೇಕು ಎಂದು ಹೇಳಿದರು.

ತಾಲೂಕು ವ್ಯಾಪ್ತಿಯಲ್ಲಿ ಆಹಾರ ಸಾಮಗ್ರಿಗಳ ಕೊರತೆ ಅನುಭವಿಸುತ್ತಿರುವ, ಈತನಕ ನ್ಯಾಯಬೆಲೆ ಅಂಗಡಿ ಅಥವಾ ದಾನಿಗಳಿಂದ ದಿನಸಿ ಕಿಟ್‌ ಪಡೆಯದ ಫಲಾನುಭವಿಗಳು ತಾಲೂಕು ಆಡಳಿತದ ಹಂಗರ್‌ ಹೆಲ್ಪ್ಲೈನ್ 08183-226074 ಸಂಪರ್ಕ ಮಾಡಿ ಮಾಹಿತಿ ನೀಡಿದರೆ, ಅವರ ಮನೆಬಾಗಿಲಿಗೆ ದಿನಸಿ ಕಿಟ್‌ ವಿತರಣೆ ಮಾಡಲಾಗುತ್ತದೆ. ಇನ್ನೂ ಕಿಟ್ಟ ಸಿಗದವರು ಗ್ರಾಪಂಗೆ ನೇಮಕ ಮಾಡಿರುವ ನೋಡೆಲ್‌ ಅಧಿಕಾರಿಗಳ ಮೂಲಕ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

ತಾಲೂಕು ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯಿಂದ ಮನೆಮನೆ ಸರ್ವೇ ಕಾರ್ಯ ಪ್ರಾರಂಭಿಸಲಾಗಿದೆ. ಈತನಕ 3,369 ಮನೆಗಳ 15 ಸಾವಿರ ಜನರನ್ನು ಸಂಪರ್ಕ ಮಾಡಲಾಗಿದ್ದು, ಸರ್ವೇ ಕಾರ್ಯ ಇನ್ನಷ್ಟು ಚುರುಕುಗೊಳಿಸಬೇಕು. ತಾಲೂಕಿನಲ್ಲಿ ಮದುವೆ, ಗೃಹಪ್ರವೇಶ, ಪುಣ್ಯತಿಥಿ ಸಂದರ್ಭದಲ್ಲಿ ಹೆಚ್ಚು ಜನರನ್ನು ಸೇರಿಸಲು ಕಡ್ಡಾಯ ನಿಷೇಧ ಹೇರಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಲಾಕ್‌ಡೌನ್ ಹಿಂದಿನಂತೆ ಜಾರಿಯಲ್ಲಿದ್ದು, ಯಾವುದನ್ನೂ ಸಡಿಲಗೊಳಿಸಿಲ್ಲ ಎಂದು ತಿಳಿಸಿದರು.

ತಹಶೀಲ್ದಾರ್‌ ಚಂದ್ರಶೇಖರ ನಾಯ್ಕ, ಡಿವೈಎಸ್‌ಪಿ ವಿನಾಯಕ್‌ ಎನ್‌. ಶೆಟ್ಟಿಗಾರ್‌, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ| ಮೋಹನ್‌ ಕೆ.ಎಸ್‌., ಡಾ| ವಾಸುದೇವ ಪ್ರಭು, ನಗರಸಭೆ ಪೌರಾಯುಕ್ತ ಎಚ್‌.ಕೆ. ನಾಗಪ್ಪ, ಕಾರ್ಗಲ್‌ ಪಪಂ ಮುಖ್ಯಾಧಿಕಾರಿ ಲಕ್ಷ್ಮೀನಾರಾಯಣ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ. ಲಕ್ಷ್ಮೀನಾರಾಯಣ್‌, ಸರ್ಕಲ್‌ ಇನ್ಸ್ ಪೆಕ್ಟರ್‌ ಸುನೀಲ್‌ ಕುಮಾರ್‌, ಮಹಾಬಲೇಶ್ವರ ನಾಯ್ಕ ಇನ್ನಿತರ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next