Advertisement

ಅಡಕೆ ಕೊಳೆ ರೋಗಕ್ಕೆ ಔಷಧ ಕಂಡುಹಿಡಿಯಲು ಒತ್ತಾಯ

12:19 PM Aug 22, 2019 | Naveen |

ಸಾಗರ: ಹವಾಮಾನ ಬದಲಾವಣೆಯಿಂದ ಸುರಿದ ಅತಿವೃಷ್ಟಿಯಿಂದಾಗಿ ಮಲೆನಾಡಿನ ಅಡಕೆ ಬೆಳೆಗಾರ ಬದುಕು ಅಕ್ಷರಶಃ ನಲುಗಿದ್ದು, ಸತತವಾಗಿ ಬೋರ್ಡೋ ಸಿಂಪಡನೆ ಮಾಡಿದ ತೋಟಗಳಲ್ಲೂ ಕೊಳೆರೋಗ ತನ್ನ ಅಟ್ಟಹಾಸ ಮೆರೆದಿದೆ. ಈ ಹಿನ್ನೆಲೆಯಲ್ಲಿ ಕೊಳೆ ರೋಗದ ಸಮಸ್ಯೆಗೆ ಸಮರ್ಥ ಔಷಧವನ್ನು ಕಂಡು ಹಿಡಿಯಲು ಕ್ಷಿಪ್ರವಾಗಿ ಕೃಷಿ ವಿಜ್ಞಾನಿಗಳಿಗೆ ನಿರ್ದೇಶನ ನೀಡಬೇಕು ಎಂದು ತಾಲೂಕಿನ ಚಿಪ್ಪಳಿ ಲಿಂಗದಹಳ್ಳಿಯ ನವೋದಯ ಯುವಕ ಸಂಘ ಸಾಗರ ಉಪ ವಿಭಾಗದ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನೆರೆ ಇನ್ನಿಲ್ಲದ ಹಾನಿ ಮಾಡಿದೆ. ಅದರಲ್ಲೂ ಅಡಕೆ ತೋಟಕ್ಕೆ ತೀವ್ರ ಹಾನಿಯಾಗಿದ್ದು, ತಾಲೂಕಿನ ಹೊಸಳ್ಳಿ, ಎಡಜಿಗಳೇಮನೆ, ಸುಳುಮನೆ, ಶೆಡ್ತಿಕೆರೆ, ವರದಾಮೂಲ, ಲಿಂಗದಹಳ್ಳಿ, ಮಾವಿನಸರ, ತೆಂಕೋಡು, ಆವಿನಹಳ್ಳಿ ಭಾಗದ ತೋಟಗಳ ಅಡಕೆ ಗೊನೆಗಳಲ್ಲಿ ಒಂದೇ ಒಂದು ಅಡಕೆ ಉಳಿಯದ ಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಲಾಗಿದೆ.

ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಿಗೆ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಸುರಿಯುತ್ತದೆ. ಶಿವಮೊಗ್ಗದಲ್ಲಿ ಸರ್ಕಾರಿ ಸ್ವಾಮ್ಯದ ನವಿಲೆ ಕೃಷಿ ವಿಶ್ವವಿದ್ಯಾಲಯವೇ ಇದೆ. 1940ರ ದಶಕದಲ್ಲಿ ಡಾ|ಕೋಲ್ಮನ್‌ ಎಂಬ ಬ್ರಿಟಿಷ್‌ ವಿಜ್ಞಾನಿ ಕಂಡುಹಿಡಿದ ಬೋರ್ಡೋ ಮಿಶ್ರಣವನ್ನು ಈಗಲೂ ವಿಜ್ಞಾನಿಗಳು ಶಿಫಾರಸು ಮಾಡುವುದು ಬಿಟ್ಟರೆ ಕೊಳೆರೋಗ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಮಾದರಿ ಕಂಡುಹಿಡಿಯುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಲಾಗಿದೆ.

ಜಿಲ್ಲಾಡಳಿತ ಈ ಹಂತದಲ್ಲಿ ಮಧ್ಯಪ್ರವೇಶಿಸಿ ಆವರಿಸಿರುವ ಕೊಳೆ ರೋಗ ನಿಯಂತ್ರಣಕ್ಕೆ ತೋಟಗಾರಿಕಾ ವಿಜ್ಞಾನಿಗಳನ್ನು ನಿಯೋಜಿಸಿ ರೋಗದ ತೀವ್ರತೆ ಕಡಿಮೆ ಮಾಡುವ ಕ್ರಮಗಳನ್ನು ಕಂಡುಕೊಳ್ಳಲು ಸೂಕ್ತ ನಿರ್ದೇಶನ ನೀಡಬೇಕು ಮತ್ತು ಶಾಶ್ವತ ಮದ್ದು ಕಂಡುಕೊಳ್ಳಲು ಅವರಿಗೆ ಆದೇಶಿಸಬೇಕು ಎಂದು ಆಗ್ರಹಿಸಲಾಗಿದೆ.

ಬೆಳೆ ಉಳಿಸಿಕೊಳ್ಳಲು ರೈತ ಸಾಲ-ಸೋಲ ಮಾಡಿ ಬೋರ್ಡೋ ಮಿಶ್ರಣವನ್ನು ಖರೀದಿಸಿ ಸಿಂಪಡಿಸುತ್ತಿರುವ ಕಾಲದಲ್ಲಿ ಆತನ ವರ್ಷದ ಬೆಳೆ ನೆಲ ಕಚ್ಚುತ್ತಿದೆ. ಈ ಸಾಲಬಾಧೆಗಳಿಂದ ರೈತರು ಆತ್ಮಹತ್ಯೆಯಂತಹ ಅತಿರೇಕದ ನಿರ್ಧಾರಕ್ಕೆ ಬಂದಲ್ಲಿ ಅದಕ್ಕೆ ಸೂಕ್ತ ಔಷಧ ಕಂಡುಹಿಡಿಯದ ವಿಜ್ಞಾನಿಗಳೇ ಕಾರಣರಾಗುತ್ತಾರೆ. ಇಂತಹ ಸಂಭಾವ್ಯ ದುರ್ಘ‌ಟನೆಗಳನ್ನು ತಪ್ಪಿಸಲು ಸರ್ಕಾರ ವಿಜ್ಞಾನಿಗಳನ್ನು ಸಂಶೋಧನೆಗೆ ಹಚ್ಚಬೇಕು ಹಾಗೂ ರೈತರನ್ನೊಳಗೊಂಡ ನಿಯೋಗ ರಚನೆ ಮಾಡಿ ಬೆಳೆ ಹಾನಿ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘದ ಕಾರ್ಯದರ್ಶಿ ಅರುಣ್‌ ಟಿ.ಎಸ್‌., ಕಲ್ಮನೆ ಗ್ರಾಪಂ ಸದಸ್ಯ ಎಲ್.ವಿ. ಅಕ್ಷರ, ಶಿವಮೊಗ್ಗ ಹಾಪ್‌ಕಾಮ್ಸ್‌ ಉಪಾಧ್ಯಕ್ಷ ಎಲ್.ವಿ. ಸತೀಶ್‌, ಸಾಮಾಜಿಕ ಕಾರ್ಯಕರ್ತರಾದ ಜಯಪ್ರಕಾಶ್‌ ಗೋಳಿಕೊಪ್ಪ, ಬಳಕೆದಾರರ ವೇದಿಕೆ ನಿರ್ದೇಶಕ ಜನಾರ್ದನ ರಾವ್‌ ಹಕ್ರೆ, ವರದೇಶ್‌ ಲಿಂಗದಹಳ್ಳಿ ಮೊದಲಾದವರು ಎಸಿ ದರ್ಶನ್‌ ಪಿ.ವಿ. ಅವರಿಗೆ ಮನವಿ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next