Advertisement

Sagara ಎನ್‌ಆರ್‌ಇಜಿ ಕೂಲಿಯನ್ನು ದ್ವಿಗುಣಗೊಳಿಸಬೇಕು: ರೈತಸಂಘ

06:05 PM Dec 11, 2023 | Shreeram Nayak |

ಸಾಗರ: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ದಿನಗೂಲಿಯನ್ನು ಈಗಿರುವ ದರಕ್ಕಿಂತ ದ್ವಿಗುಣಗೊಳಿಸಬೇಕು.316 ರಿಂದ 632 ರೂ.ಗಳಿಗೆ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಸಾಗರ ತಾಲೂಕು ಘಟಕದಿಂದ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

Advertisement

ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ರಾಜ್ಯ ಸಚಿವರಿಗೆ ಸೋಮವಾರ ಮನವಿಯನ್ನು ಸಲ್ಲಿಸಿದ ನಂತರ ರೈತ ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಮಾತನಾಡಿ, ಈಗಾಗಲೇ ಉದ್ಯೋಗ ಖಾತ್ರಿ ಯೋಜನೆಯು ಬಡ ಕೂಲಿಕಾರ್ಮಿಕರಿಗೆ ಬಹಳಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ. ಆದರೆ ಕೂಲಿ ಹಣವನ್ನು ತಕ್ಷಣವೇ ಕಾರ್ಮಿಕರ ಖಾತೆಗೆ ಜಮಾ ಆಗಬೇಕು. ಈಗಿನ ಸ್ಥಿತಿಯಲ್ಲಿ ಹಣವನ್ನು ಸರಿಯಾದ ಸಮಯಕ್ಕೆ ಒದಗಿಸದೆ ವಿಳಂಬ ಮಾಡಲಾಗುತ್ತಿದೆ. ಇದರಿಂದ ಕೂಲಿ ಮಾಡಿದ ಜನರು ಸಾಲದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಲು ಕೂಡಲೇ ಉದ್ಯೋಗ ಖಾತ್ರಿ ಹಣವನ್ನು ಸಕಾಲಕ್ಕೆ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ಒಂದು ವರ್ಷಕ್ಕೆ 100 ದಿನಗಳ ಕೂಲಿಯನ್ನು ನೀಡಬೇಕು ಎನ್ನುವ ನಿಯಮವಿದೆ. ಅದನ್ನು 150 ದಿನಗಳಿಗೆ ವಿಸ್ತರಿಸಬೇಕು. ಅಲ್ಲದೆ ವೈಯಕ್ತಿಕ ಕಾಮಗಾರಿ ಕೊಡುವಲ್ಲಿ ದುರುಪಯೋಗ ನಡೆದಿದೆ. ಖಾತ್ರಿ ಯೋಜನೆಯ ಕಾರ್ಮಿಕರನ್ನು ಕೆಲಸಕ್ಕೆ ಬಳಸುತ್ತಿಲ್ಲ. ಪ್ರಭಾವಿಗಳು ಮತ್ತು ಪಿಡಿಓಗಳು ಮುಗ್ಧ ಕಾರ್ಮಿಕರ ಜಾಬ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಎಟಿಎಂ ಕಾರ್ಡ್ ಪಡೆದು ಯಂತ್ರೋಪಕರಣದಲ್ಲಿ ಕೆಲಸವನ್ನು ಮಾಡಿಸುತ್ತಿದ್ದಾರೆ. ಈ ಮೂಲಕ ನಿಜವಾದ ದುಡಿಮೆಯನ್ನು ಮಾಡುವ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ. ಈ ರೀತಿ ಮಾಡುವ ಅಧಿಕಾರಿಗಳ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬರಗಾಲದ ಸನ್ನಿವೇಶ ಇರುವುದರಿಂದ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ರ‍್ಯೆತರಿಗೆ ಹಾಗೂ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗವನ್ನು ಸೃಷ್ಟಿ ಮಾಡಬೇಕು. ರೈತರ ಪ್ರತಿ ಕುಟುಂಬಗಳಿಗೆ ಬೆಳೆ ಬೆಳೆಯಲು ನೂರು ದಿನಗೂಲಿ ಆಳುಗಳನ್ನು ಹಿಡುವಳಿ ಆಧಾರಗಳಿಲ್ಲದೆ ರೈತರಿಗೆ ಮಂಜೂರಾತಿ ಕೊಟ್ಟು ರಾಜ್ಯದ ಆಹಾರ ಉತ್ಪನ್ನ ಬೆಳೆಯಲು ಸಹಕಾರಿಯಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಗುರುಮೂರ್ತಿ, ವೀರಭದ್ರ ಶಿರವಾಳ, ಆಲಳ್ಳಿ ದೇವು, ರಾಜು ತರಗೋಡು, ಗಾಮಪ್ಪ ಸೂರನಗದ್ದೆ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next