Advertisement

ಸಾಗರ: ನಾಲ್ಕು ತಿಂಗಳಿಂದ ಕೆಟ್ಟು ನಿಂತ ಲಾಂಚ್

12:15 PM Sep 29, 2022 | Team Udayavani |

ಸಾಗರ: ತಾಲೂಕಿನ ಶರಾವತಿ ಎಡದಂಡೆಯ ಕರೂರು ಹೋಬಳಿಯ ಚನ್ನಗೊಂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಗಾರು -ಸಿಗ್ಗಲು ಲಾಂಚ್ ಕಳೆದ ನಾಲ್ಕು ತಿಂಗಳಿಂದ ಶರಾವತಿ ಹಿನ್ನೀರಿನ ಮಧ್ಯೆ ಕೆಟ್ಟು ನಿಂತು ಸಿಗ್ಗಲು, ಚಂಬಳಿ ಮುಂತಾದ ಗ್ರಾಮಗಳ ಜನರು ಪರದಾಡುವಂತಾಗಿದೆ.

Advertisement

ಈ ಗ್ರಾಮದ ಜನರು ತಮ್ಮ ಪಂಚಾಯತ್ ಕೇಂದ್ರ, ಬ್ಯಾಂಕ್, ಪಡಿತರ, ವ್ಯಾಪಾರ ವಹಿವಾಟು ಸೇವೆಗೆ ನದಿ ದಾಟಿ ಹೋಗಲು ಲಾಂಚ್ ನೀಡಿ ಎಂದು ಗ್ರಾಮಸ್ಥರು‌ 2018ರಲ್ಲಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಸಾಗರ ಉಪವಿಭಾಗದ ಸಹಾಯಕ ಆಯುಕ್ತರು ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಿದ್ದರು.

ಸಾಗರ ಶಾಸಕ ಹರತಾಳು ಹಾಲಪ್ಪ ಒಳನಾಡು ಜಲಸಾರಿಗೆ ಇಲಾಖೆಯ ಹಸಿರುಮಕ್ಕಿ ಮಾರ್ಗದ ಹಳೆ ಲಾಂಚ್ ಈ ಪ್ರದೇಶಕ್ಕೆ ವರ್ಗಾಯಿಸಿ ಚನ್ನಗೊಂಡ ಗ್ರಾಮ ಪಂಚಾಯತ್ ಉಸ್ತುವಾರಿ ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿ ಕಳೆದ ಬೇಸಿಗೆಯಲ್ಲಿ ಉದ್ಘಾಟಿಸಿದ್ದರು. ಮೂರು ತಿಂಗಳು ಸೇವೆ ನೀಡಿದ ಲಾಂಚ್ ಸಮರ್ಪಕ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿದೆ.

ಒಳನಾಡು ಜಲಸಾರಿಗೆ ಇಲಾಖೆ ಒಡೆತನದ ಈ ಲಾಂಚ್‌ನ ಬೆಲೆ 25‌ ಲಕ್ಷ ರೂ.ಗೂ ಹೆಚ್ಚಿದ್ದು, ಪಂಚಾಯತ್ ರಾಜ್ ಇಲಾಖೆಗೆ ಅದನ್ನು ಹಸ್ತಾಂತರ ಮಾಡಿ ಇಲಾಖೆ ತನ್ನ ಜವಾಬ್ದಾರಿ ಕಳಚಿಕೊಂಡಿದೆ. ಈಗ ಚನ್ನಗೊಂಡ ಗ್ರಾಮ ಪಂಚಾಯತ್ ನಿರ್ವಹಣೆಯಲ್ಲಿ ಇದೆ. ನಿರ್ವಹಣೆಯ ವೆಚ್ಚವನ್ನು ಭರಿಸಲಾಗದೆ ಪಂಚಾಯತ್ ಕೈಚೆಲ್ಲಿದೆ.

ಪಂಚಾಯತ್ ಇದರ ತಾಂತ್ರಿಕ ನಿರ್ವಹಣೆ ಮಾಡಬೇಕಾಗಿತ್ತು. ಸರಿಯಾಗಿ ನಿರ್ವಹಿಸದ ಕಾರಣ ಈ ಲಾಂಚ್ ಸ್ಥಗಿತಗೊಂಡಿದೆ. – ಧನೇಂದ್ರ, ಕಡವು ನಿರೀಕ್ಷಕ, ಸಾಗರ

Advertisement

ಕೆಸರಿನಲ್ಲಿ ನಿಂತಿರುವ ಲಾಂಚ್‌ ಹೊರತೆಗೆಯಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಎರಡು ಇಂಜಿನ್ ಹೊಂದಿರುವ ಲಾಂಚ್ ನಿರ್ವಹಣೆ ದುಬಾರಿ ವೆಚ್ಚದ್ದು. ಪಂಚಾಯತ್ ಆದಾಯದಲ್ಲಿ ಅದು ಕಷ್ಟವಾಗುತ್ತಿದೆ. ಕಡವು ಇಲಾಖೆ ಹಾಗೂ ಶಾಸಕರಿಗೆ ಈ ವಿಷಯ ಗಮನಕ್ಕೆ ತರಲಾಗಿದೆ. – ಪದ್ಮರಾಜ, ಚನ್ನಗೊಂಡ ಗ್ರಾಮ ಪಂಚಾಯತ್ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next