Advertisement

ಮೃತ ವ್ಯಕ್ತಿಯೇ ಎದ್ದು ಬಂದು ಆಸ್ತಿ ಮಾರಿದ :ಇಲ್ಲೊಂದು ವಿಚಿತ್ರ ಪ್ರಕರಣ

06:20 PM Sep 08, 2021 | Adarsha |

ಸಾಗರ: ಸತ್ತಿರುವ ವ್ಯಕ್ತಿ ಬದುಕಿದ್ದಾನೆ ಎಂದು ನಂಬಿಸಿ ಕ್ರಯಪತ್ರ ನೋಂದಣಿ ಮಾಡಿಸಿರುವ ಪ್ರಕರಣ ಸಂಬಂಧ ಕೆಲದಿನಗಳ ಹಿಂದೆ ಸ್ಥಳೀಯ ಶಾಸಕ ಎಚ್. ಹಾಲಪ್ಪ ಹರತಾಳು ನಗರಸಭೆಯ ದಾಖಲೆಗಳನ್ನು ಪರಿಶೀಲಿಸಿ ಒಂದೇ ನಿವೇಶನಕ್ಕೆ ಎರಡು ಹಕ್ಕುಪತ್ರ ನೀಡಿದ ಪ್ರಕರಣವನ್ನು ಬಯಲಿಗೆ ತಂದಿದ್ದನ್ನು ಬೆಳಕಿಗೆ ತಂದ ಘಟನೆ ನಡೆದಿದ್ದು, ಈಗ ಮರಣ ಹೊಂದಿರುವ ವ್ಯಕ್ತಿಯ ಹೆಸರಿನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಸೃಷ್ಟಿಸಿ ಕ್ರಯಪತ್ರ ನೋಂದಣಿ ಮಾಡಿಸುವ ಮೂಲಕ ವಂಚನೆ ನಡೆಸಿದ ಆರೋಪದ ಮೇಲೆ ಇಲ್ಲಿನ ನಗರ ಠಾಣೆ ಪೊಲೀಸರು ಓರ್ವ ವಕೀಲರೂ ಸೇರಿದಂತೆ ಮೂವರ ವಿರುದ್ಧ ಸೋಮವಾರ ಮೊಕದ್ದಮೆ ದಾಖಲಿಸಿದ್ದಾರೆ.

Advertisement

ಪ್ರಥಮ ವರದಿ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದು, ವಕೀಲರಾದ ಎಚ್.ಎನ್.ದಿವಾಕರ್, ಮಂಡಗಳಲೆ ಗ್ರಾಮದ ಈಶ್ವರ, ಗಾಳಿಪುರ ಗ್ರಾಮದ ರಮೇಶ್ ಪ್ರಕರಣದ ಆರೋಪಿಗಳೆಂದು ದಾಖಲಿಸಿದ್ದಾರೆ. ಬಲೆಗಾರು ಗ್ರಾಮದ ರಾಜೇಂದ್ರ ಡಿ.ಎಸ್. ಎಂಬುವವರು ನೀಡಿರುವ ದೂರಿನ ಆಧಾರದ ಮೇಲೆ ಈ ಮೊಕದ್ದಮೆ ದಾಖಲಾಗಿದೆ.

ಇಲ್ಲಿನ ಲೋಹಿಯಾ ನಗರದಲ್ಲಿ ಆಶ್ರಯ ನಿವೇಶನ ಹೊಂದಿದ್ದ ಸೊರಬ ತಾಲೂಕಿನ ಉಳವಿ ಗ್ರಾಮದ ಕಲೀಲ್ ಸಾಬ್ 2007 ರಲ್ಲಿ ಮೃತಪಟ್ಟಿದ್ದರು. 2016ರಲ್ಲಿ ದೂರುದಾರರಾದ ರಾಜೇಂದ್ರ ಅವರಿಗೆ ಆರೋಪಿಗಳು ನಕಲಿ ಕಲೀಲ್ ಸೃಷ್ಟಿಸಿ 6.80 ಲಕ್ಷ ರೂ.ಗೆ ಆ ನಿವೇಶನವನ್ನು ಮಾರಾಟ ಮಾಡಿಸಿದ್ದರು. 2020ರಲ್ಲಿ ರಾಜೇಂದ್ರ ಅವರು ತಾವು ಖರೀದಿಸಿದ ನಿವೇಶನವನ್ನು ಸವಿತಾ ಡಿ.ಬಿ. ಎಂಬುವವರಿಗೆ ಮಾರಾಟ ಮಾಡಿದರು. ಈ ನಡುವೆ ನಿವೇಶನದ ಮೂಲ ಮಾಲೀಕರಾದ ಕಲೀಲ್ ಸಾಬ್ ಅವರ ಪತ್ನಿ ಫಾತಿಮಾ ತಮ್ಮ ಪತಿಯ ಹೆಸರಿನಲ್ಲಿದ್ದ ನಿವೇಶನದ ಖಾತೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು, ನಗರಸಭೆಯಿಂದ ಸ್ವಾಧೀನ ಪತ್ರ ಪಡೆದು ಆ ಸ್ವತ್ತನ್ನು ಕುಸುಮಾ ಭಂಡಾರಿ ಎಂಬುವವರಿಗೆ ಮಾರಾಟ ಮಾಡಿದ ಘಟನೆ ಪರಸ್ಪರರಿಗೆ ಗೊತ್ತಿಲ್ಲದಂತೆ ನಡೆದಿತ್ತು.

ಇದನ್ನೂ ಓದಿ:4 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆ

ಇತ್ತಿಚೆಗೆ ಕುಸುಮಾ ಭಂಡಾರಿ ಅವರು ಆ ನಿವೇಶನದಲ್ಲಿ ಮನೆ ನಿರ್ಮಿಸಲು ಮುಂದಾದಾಗ ಸವಿತಾ ಅವರು ಸ್ಥಳಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದ್ದರು. ದಾಖಲೆಗಳ ಗೊಂದಲದಿಂದ ಕಾಮಗಾರಿ ನಿಲ್ಲಿಸುವಂತೆ ನಗರಸಭೆ ಅಧಿಕಾರಿಗಳು ಸೂಚಿಸಿದ್ದರು. ಕುಸುಮಾ ಭಂಡಾರಿ ಅವರು ಈ ವಿಷಯವನ್ನು ಶಾಸಕ ಎಚ್.ಹಾಲಪ್ಪ ಹರತಾಳು ಅವರ ಗಮನಕ್ಕೆ ತಂದಾಗ ಶಾಸಕರು ನಗರಸಭೆ ಕಚೇರಿಗೆ ಭೇಟಿ ನೀಡಿ ಒಂದೇ ನಿವೇಶನಕ್ಕೆ ಸಂಬಂಧಿಸಿದಂತೆ ಎರಡು ಕ್ರಯಪತ್ರ ನೋಂದಣಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಿದ್ದಲ್ಲದೆ, ಇಂತಹ ನೂರಾರು ಪ್ರಕರಣಗಳು ಸಾಗರದಲ್ಲಿ ನಡೆದಿರುವ ಸಂಶಯ ವ್ಯಕ್ತಪಡಿಸಿದರು. ಅವರು ತಪ್ಪಿತಸ್ಥರನ್ನು ಕಂಡುಹಿಡಿಯುವ ಉದ್ದೇಶದಿಂದ ಪೊಲೀಸರಿಗೆ ದೂರು ನೀಡುವಂತೆ ಪೌರಾಯುಕ್ತರಿಗೆ ಸೂಚಿಸಿದ್ದರು. ಈಗಾಗಲೇ ನಗರಸಭೆ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರೂ ಇನ್ನೂ ಎಫ್‌ಐಆರ್‌ಗೆ ಪೊಲೀಸರು ಮುಂದಾಗಿಲ್ಲ. ಆದರೆ ರಾಜೇಂದ್ರ ಅವರ ದೂರಿನ ಸಂಬಂಧ ಮೊಕದ್ದಮೆ ದಾಖಲಾಗಿದ್ದು, ಆರೋಪಿಗಳ ಬಂಧನ ಸಾಧ್ಯತೆ ದಟ್ಟವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next