Advertisement

ನಾಟಕಕ್ಕೆ ಹೋಗದಂತೆ ಶಾಸಕರ ಕಾರ್ಯಲಯದ ಸೂಚನೆ; ನಿರ್ದೇಶಕ ಕೆಜಿಕೆ ಖಂಡನೆ

04:20 PM Mar 09, 2022 | Team Udayavani |

ಸಾಗರ: ತಾಲೂಕಿನ ತುಮರಿಯ ರಂಗಮಂದಿರದಲ್ಲಿ ಕಿನ್ನರಮೇಳ ಆಯೋಜಿಸಿದ್ದ ನಾಟಕ ಪ್ರದರ್ಶನಕ್ಕೆ ವಿದ್ಯಾರ್ಥಿಗಳು ಆಗಮಿಸದಂತೆ ತಡೆದ ಸಾಗರ ಶಾಸಕರ ಕಾರ್ಯಾಲಯದ ಕ್ರಮವನ್ನು ಹಿರಿಯ ರಂಗಕರ್ಮಿ ನಿರ್ದೇಶಕ ಕೆ.ಜಿ. ಕೃಷ್ಣಮೂರ್ತಿ ಖಂಡಿಸಿದರು.

Advertisement

ಮಂಗಳವಾರ ಸಂಜೆ ತುಮರಿ ಗೋಪಾಲ ಗೌಡ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ನಡೆದ ನಾಟಕ ಪ್ರದರ್ಶನ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿ, ಕಿನ್ನರಮೇಳ ಸಂಸ್ಥೆ ರಾಜ್ಯದ ಮೂಲೆ ಮೂಲೆಗಳ ಶಾಲಾ ಕಾಲೇಜುಗಳಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನಾಟಕ ಪ್ರದರ್ಶನ ಮಾಡುತ್ತಾ ಇದೆ. ಮೊದಲ ಪ್ರದರ್ಶನ ತುಮರಿಗೆ ಆದ್ಯತೆ ನೀಡಿದ್ದು ಈ ವರ್ಷದ ಮೊದಲ ಪ್ರದರ್ಶನ ಸೋಮವಾರ ನಡೆದಿದೆ. ಲಾಗಾಯ್ತಿನಂತೆ ತುಮರಿಯ ಹಾಸ್ಟೆಲ್ ವಿದ್ಯಾರ್ಥಿಗಳು ಆಗಮಿಸಿದ್ದರು. ಎರಡನೇ ದಿನಕ್ಕೆ ಪ್ರದರ್ಶನಕ್ಕೆ ಹೋಗದಂತೆ ಶಾಸಕರ ಕಚೇರಿಯಿಂದ ತಡೆ ಒಡ್ಡಲಾಗಿದೆ ಎಂದು ಅವರು ಆರೋಪಿಸಿದರು.

ತಮ್ಮ ಕಚೇರಿಯಿಂದ ಇಂತಹ ನಿರ್ದೇಶನ ನೀಡಿರುವ ಬಗ್ಗೆ ಅಲ್ಲಿನ ನೌಕರರು ಖಚಿತಪಡಿಸಿದ್ದು ಶಾಸಕರಿಗೆ ಈ ಬಗ್ಗೆ ದೂರು ನೀಡಲು ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ವಿದ್ಯಾರ್ಥಿಗಳ ಮನೋವಿಕಾಸ ಭಾಗವಾಗಿ ಸಾಂಸ್ಕೃತಿಕ ವಲಯ ಕೆಲಸ ಮಾಡಬೇಕು ಎಂಬುದು ಪರಿಪೂರ್ಣ ಶಿಕ್ಷಣಕ್ಕೆ ತಜ್ಞರು ನೀಡುವ ಸಲಹೆ. ಆದರೆ ಇಲ್ಲಿ ಜನಪ್ರತಿನಿಧಿಗಳ ಕಚೇರಿಯೇ ಈ ಕಾರ್ಯಕ್ಕೆ ಅಡ್ಡಿಯಾಗಿದೆ. ಇಂತ ಸಣ್ಣ ರಾಜಕಾರಣ ಶಾಸಕರ ಕಚೇರಿಯಿಂದ ನಿರೀಕ್ಷೆ ಮಾಡಿರಲಿಲ್ಲ. ಈ ನಡೆಯನ್ನು ಖಂಡಿಸುತ್ತೇವೆ ಎಂದು ಅವರು ಸ್ಪಷ್ಬಪಡಿಸಿದರು.

ಅಭಿವ್ಯಕ್ತಿ ಬಳಗ ಅಧ್ಯಕ್ಷ ಹಾಲ್ಕೆರೆ ಮಹಾಬಲೇಶ್ವರಭಟ್ ಮಾತನಾಡಿ, ಜನಪ್ರತಿನಿಧಿಗಳು ಕಲೆ ಸಾಹಿತ್ಯ ಪೋಷಕರಾಗಿರಬೇಕು ಎಂದು ಜನತೆ ಬಯಸುತ್ತಾರೆ. ನಾಟಕಕ್ಕೆ ಹೋಗಬೇಡಿ ಎಂದು ತಡೆಒಡ್ಡುವುದು ಸಭ್ಯ ರಾಜಕಾರಣದ ಲಕ್ಷಣವಲ್ಲ. ಎರಡು ದಶಕಗಳಿಂದ ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿ ಇಲ್ಲಿನ ಎಲ್ಲ ವಿದ್ಯಾರ್ಥಿಗಳನ್ನು ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾರೋಪದ ನಂತರ ಎಸ್. ಸುರೇಂದ್ರನಾಥ್ ರಚಿಸಿ ನಿರ್ದೇಶನ ಮಾಡಿದ ಜನಶತ್ರು ನಾಟಕ ಪ್ರದರ್ಶನ ಮಾಡಲಾಯಿತು.

Advertisement

ಶಾಸಕರು ಸದನದಲ್ಲಿ ಇರುವಾಗ ಈ ಘಟನೆ ನಡೆದಿದೆ. ಆಡಳಿತಾತ್ಮಕವಾಗಿರುವ ಇಂತಹ ನಿರ್ಧಾರವನ್ನು ಶಾಸಕರು ಸೇರಿ ಯಾರು ಮಾಡಿದರೂ ತಪ್ಪೇ. ಶಾಸಕರು ನೌಕರರಿಂದ ಆದ ತಪ್ಪನ್ನು ಸರಿಪಡಿಸುವ ಅವಕಾಶವಿದ್ದು ತಟಸ್ಥವಾಗಿರುವುದು ಸರಿಯಲ್ಲ.
– ಅರೆಕಲ್ಲು ರಾಮಪ್ಪ, ಅಭಿವ್ಯಕ್ತಿ ಬಳಗ ಸದಸ್ಯ, ಹಿರಿಯ ಚಿಂತಕ

Advertisement

Udayavani is now on Telegram. Click here to join our channel and stay updated with the latest news.

Next