ಸಾಗರ : ಉಡುಪಿ ನ್ಯಾಯಾಲಯದಲ್ಲಿ ವಕೀಲರ ಮೇಲಿನ ಹಲ್ಲೆ ಖಂಡಿಸಿ, ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಸೋಮವಾರ ವಕೀಲರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಶನಿವಾರದಂದು ಉಡುಪಿ ನ್ಯಾಯಾಲಯದಲ್ಲಿ ಗುರುಪ್ರಸಾದ್ ಎಂಬ ವಕೀಲರ ಮೇಲೆ ನ್ಯಾಯಾಲಯ ಆವರಣದಲ್ಲಿ ವಿನಾಕಾರಣ ಹಲ್ಲೆ ನಡೆಸಲಾಗಿದೆ. ಇಂತಹ ಘಟನೆಗಳಿಂದ ವಕೀಲರು ನಿರ್ಭೀತಿಯಿಂದ ಕಾನೂನುಬದ್ಧವಾಗಿ ಕರ್ತವ್ಯ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನ್ಯಾಯಾಲಯದ ಭಾಗವಾಗಿರುವ ವಕೀಲರ ಮೇಲೆ ಇಂತಹ ಘಟನೆಗಳು ನಡೆಯದಂತೆ ವಕೀಲರ ಸಂರಕ್ಷಣಾ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು. ಕೇಂದ್ರ ಸರ್ಕಾರದ ಮುಂದಿಟ್ಟು ವಕೀಲರ ಸಂರಕ್ಷಣಾ ಕಾಯ್ದೆಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಲ್ಲಾಸ್, ವಿನಯಕುಮಾರ್, ಜ್ಯೋತಿ ಕೋವಿ, ಶೃತಿ, ಕವಿತಾ, ಅಣ್ಣಪ್ಪ, ರಮೇಶ್, ಅರುಣಕುಮಾರ್ ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ : ಬುಕ್ಕಾಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಯಂದಿರ ಸಭೆ